ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅಭಿಪ್ರಾಯ

Last Updated 8 ಮಾರ್ಚ್ 2021, 15:33 IST
ಅಕ್ಷರ ಗಾತ್ರ

ಬೀದರ್ ಜಿಲ್ಲೆ ಕಡೆಗಣನೆ
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಬೀದರ್ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಆರೋಪಿಸಿದ್ದಾರೆ. ಜಿಲ್ಲೆಗೆ ಹೊಸ ಯೋಜನೆ ಘೋಷಿಸಿಲ್ಲ. ಕೋವಿಡ್ ನಂತರ ಬಹಳಷ್ಟು ಪದವೀಧರರು ಉದ್ಯೋಗ ಕಳೆದುಕೊಂಡಿದ್ದಾರೆ. ಕೂಲಿ ಕಾರ್ಮಿಕರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಪ್ರವಾಸೋದ್ಯಮ ಬೆಳವಣಿಗೆಗೆ ಅನುದಾನ ಒದಗಿಸಿಲ್ಲ. ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಿಲ್ಲ. ಒಟ್ಟಾರೆ ಬಜೆಟ್ ಜನಸಾಮಾನ್ಯರಲ್ಲಿ ನಿರಾಶೆ ಮೂಡಿಸಿದೆ ಎಂದು ಹೇಳಿದ್ದಾರೆ.

ಹುಸಿಯಾದ ಕೊಡುಗೆ ನಿರೀಕ್ಷೆ
ಬಜೆಟ್‍ನಲ್ಲಿ ಸರ್ಕಾರ ಬೀದರ್ ಜಿಲ್ಲೆಗೆ ಏನಾದರೂ ಕೊಡುಗೆ ನೀಡಬಹುದು ಎಂದು ಜಿಲ್ಲೆಯ ಜನರು ಇಟ್ಟುಕೊಂಡಿದ್ದ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಹೇಳಿದ್ದಾರೆ.
ಬಜೆಟ್‍ಗೆ ಮುನ್ನ ಕೃಷಿ ಕಾಲೇಜು ಬೇಡಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಕೃಷಿ ಸಚಿವರು ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸುವುದಾಗಿಯೂ ಹೇಳಿದ್ದರು. ಆದರೆ, ಜಿಲ್ಲೆಗೆ ಕೃಷಿ ಕಾಲೇಜು ಘೋಷಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯುನಾನಿ ವೈದ್ಯಕೀಯ ಕಾಲೇಜು ಬೇಡಿಕೆಗೂ ಸ್ಪಂದಿಸಿಲ್ಲ. ಬಿ.ಎಸ್.ಎಸ್.ಕೆ.ಗೆ ಮರು ಜೀವ ನೀಡಲು ಅನುದಾನ ಘೋಷಿಸಿಲ್ಲ. ಪ್ರವಾಸೋದ್ಯಮ ಬೆಳವಣಿಗೆಗೆ ಕ್ರಮ ಕೈಗೊಂಡಿಲ್ಲ. ಬಜೆಟ್‍ನಿಂದ ಬೀದರ್ ಜನ ಸರ್ಕಾರದ ಬಗ್ಗೆ ಸಂಪೂರ್ಣ ಭ್ರಮನಿರಸನಗೊಂಡಿದ್ದಾರೆ.

ಜನಸಾಮಾನ್ಯರಿಗೆ ನೆರವಾಗದ ಬಜೆಟ್
ರಾಜ್ಯ ಬಜೆಟ್ ಜನಸಾಮಾನ್ಯರಿಗೆ ನೆರವಾಗಿಲ್ಲ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಪ್ರತಿಕ್ರಿಯಿಸಿದ್ದಾರೆ.ಬಜೆಟ್ ಬಗ್ಗೆ ಯಾರಿಗೂ ತೃಪ್ತಿ ಇಲ್ಲ. ಮಹಿಳೆಯರು, ಯುವಕರು, ರೈತರು, ಕೃಷಿ ಕೂಲಿ ಕಾರ್ಮಿಕರ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಟೀಕಿಸಿದ್ದಾರೆ. ಕೋವಿಡ್‍ನಿಂದ ಎಲ್ಲ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಅವರ ನೆರವಿಗೆ ಧಾವಿಸಿಲ್ಲ ಎಂದು ಆರೋಪಿಸಿದ್ದಾರೆ.

ಕೃಷಿ ಕಾಲೇಜು ಕನಸು ನುಚ್ಚು ನೂರು
ಜಿಲ್ಲೆಗೆ ಕೃಷಿ ಕಾಲೇಜು ದೊರಕಬಹುದು ಎಂದು ಜನರು ಕಂಡಿದ್ದ ಕನಸು ನುಚ್ಚು ನೂರಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದ್ದಾರೆ. ಬೀದರ್ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕಾರಣ ಕೃಷಿ ಕಾಲೇಜು ಅಗತ್ಯವಾಗಿತ್ತು. ಕೃಷಿ ಸಚಿವರು ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಈ ಬಾರಿಯೂ ನಿರಾಶೆಯಾಗಿದೆ ಎಂದು ಹೇಳಿದ್ದಾರೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ವಿಶೇಷ ಅನುದಾನ ಒದಗಿಸಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಶೇಷ ಅನುದಾನ ಅಥವಾ ಯೋಜನೆ ಘೋಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಸವ ಭಕ್ತರಿಗೆ ಸಂತಸ
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ರೂ. 200 ಕೋಟಿ ಬಿಡುಗಡೆ ಮಾಡಿರುವುದಕ್ಕೆ ರಾಷ್ಟ್ರೀಯ ಬಸವ ದಳದ ಬೀದರ್ ದಕ್ಷಿಣ ಕ್ಷೇತ್ರದ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ. ಅನುಭವ ಮಂಟಪಕ್ಕೆ ರೂ. 500 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರ ಕೂಡಲೇ ಕಾಮಗಾರಿ ಆರಂಭಿಸಿ, ನೂತನ ಅನುಭವ ಮಂಟಪವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಭಿವೃದ್ಧಿ ಪರ ಬಜೆಟ್
ಪ್ರಸಕ್ತ ವರ್ಷದ ರಾಜ್ಯ ಬಜೆಟ್ ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಿತಿನ್ ಕರ್ಪೂರ್ ಹಾಗೂ ಸಹ ಸಂಚಾಲಕ ಸೂರ್ಯಕಾಂತ ರಾಮಶೆಟ್ಟಿ ತಿಳಿಸಿದ್ದಾರೆ. ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿ ಪಥದ ಕಡೆಗೆ ಕೊಂಡೊಯ್ಯುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ. ಬಜೆಟ್‍ನಲ್ಲಿ ಸರ್ವ ವರ್ಗಗಳ ಏಳಿಗೆಗೆ ಒತ್ತು ಕೊಡಲಾಗಿದೆ. ಜನರ ಜೀವನದಲ್ಲಿ ಬದಲಾವಣೆ ತರುವ ಹಲವು ಯೋಜನೆಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ರೂ. 1,500 ಕೋಟಿ ಅನುದಾನ ಕಲ್ಪಿಸಲಾಗಿದೆ. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ರೂ. 500 ಕೋಟಿ ಮೀಸಲಿಟ್ಟಿದ್ದು, ರೂ. 200 ಕೋಟಿ ಬಿಡುಗಡೆಯನ್ನೂ ಮಾಡಲಾಗಿದೆ. ಬೀದರ್‍ಗೆ ಕೃಷಿ ಪರಿಕರಗಳ ತಯಾರಿಕೆ ಘಟಕ ಘೋಷಿಸಲಾಗಿದೆ. ಜಿಲ್ಲೆಯ ಪಾಲಿಗೆ ಬಜೆಟ್ ಆಶಾದಾಯಕವಾಗಿದೆ ಎಂದು ಹೇಳಿದ್ದಾರೆ.

ಕೈಬಿಟ್ಟ ಹೊಸ ವಿವಿ ಪ್ರಸ್ತಾವ: ಫುಲಾರಿ ಸಂತಸ
ಸರ್ಕಾರ, ರಾಜ್ಯದ ಶಿವಮೊಗ್ಗದಲ್ಲಿ ಎರಡನೇ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ ಪ್ರಸ್ತಾವ ಕೈಬಿಟ್ಟಿರುವುದಕ್ಕೆ ಜನತಾ ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ಸಿದ್ದಪ್ಪ ಫುಲಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ತಯಾರಿ ನಡೆದಿತ್ತು. ಬೀದರ್ ಜನ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಸರ್ಕಾರ ಬಜೆಟ್‍ನಲ್ಲಿ ಹೊಸ ವಿಶ್ವವಿದ್ಯಾಲಯದ ಘೋಷಣೆಯಿಂದ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ. ಬೀದರ್‍ನಲ್ಲಿ ಇರುವ ರಾಜ್ಯದ ಏಕೈಕ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಬೇಕು. ವಿಶ್ವವಿದ್ಯಾಲಯಕ್ಕೆ ಮಂಜೂರಾದ ಹುದ್ದೆಗಳಿಗೆ ಕಾಯಂ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಮುಖ್ಯ ಆಡಳಿತ ಕಚೇರಿ ಸ್ಥಾಪಿಸಬೇಕು. ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತೆರಿಗೆ ಹೊರೆಯಿಂದ ವಿನಾಯಿತಿ
ಸರ್ಕಾರ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಹಾಗೂ ಮಹಿಳೆಯರ ಸುರಕ್ಷಿತೆಗೆ ಬಂಪರ್ ಕೊಡುಗೆ ನೀಡಿದೆ. ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕಲಾರದೆ ಕೋವಿಡ್ ಹೊಡೆತಕ್ಕೆ ಖಾಲಿಯಾಗಿರುವ ರಾಜ್ಯ ಖಜಾನೆ ತುಂಬುವ ಪ್ರಗತಿ ಪರ ಆಶಾದಾಯಕ ಬಜೆಟ್ ಇದಾಗಿದೆ ಎಂದು ಸಂಕಲ್ಪ ಚಾರಿಟಬಲ್ ಟ್ರಸ್ಟ್ (ರಿ) ಅಧ್ಯಕ್ಷ ಪುಷ್ಪಕುಮಾರ ಜಾಧವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT