ಮಂಗಳವಾರ, ಆಗಸ್ಟ್ 16, 2022
29 °C
ಎರಡನೇ ದಿನ ಕಾವು ಪಡೆದುಕೊಂಡ ಸಾರಿಗೆ ಸಂಸ್ಥೆ ನೌಕರರ ಮುಷ್ಕರ; ಪ್ರಯಾಣಿಕರ ಪರದಾಟ

ಜಿಲ್ಲೆಯಲ್ಲಿ ರಸ್ತೆಗಿಳಿಯದ ಬಸ್‍ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ಜಿಲ್ಲೆಯಲ್ಲಿ ಶನಿವಾರ ಸಾರಿಗೆ ಸಂಸ್ಥೆಯ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ.

ವಿವಿಧೆಡೆ ತೆರಳಲು ಬಸ್ ನಿಲ್ದಾಣಗಳಿಗೆ ಬಂದಿದ್ದ ಪ್ರಯಾಣಿಕರು ಬಸ್ ಸೇವೆ ಸ್ಥಗಿತದ ಕಾರಣ ತೊಂದರೆ ಅನುಭವಿಸಿದರು. ತುರ್ತು ಕೆಲಸಕ್ಕೆ ಹೋಗಬೇಕಿದ್ದ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣ ಬೆಳೆಸಿದರೆ, ಇನ್ನು ಕೆಲವರು ಮನೆಗೆ ವಾಪಸ್ಸಾದರು.

ಬೀದರ್‌ನ ಡಿಪೊ ಸಂಖ್ಯೆ 1, ಡಿಪೊ ಸಂಖ್ಯೆ 2, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಹಾಗೂ ಔರಾದ್ ಡಿಪೊ ನೌಕರರು ದಿನವಿಡೀ ಮುಷ್ಕರ ನಡೆಸಿದರು.

ಜಿಲ್ಲಾ ಕೇಂದ್ರ ಬೀದರ್‌ನಲ್ಲಿ ಅಧಿಕಾರಿಗಳು ಹರಸಾಹಸ ಪಟ್ಟು ನಸುಕಿನ ಜಾವ ಆರು ಬಸ್‍ಗಳನ್ನು ವಿವಿಧೆಡೆ ಕಳುಹಿಸಿದರು. ಆದರೆ, ಬೆಳಿಗ್ಗೆ 7.30ರ ನಂತರ ಒಂದು ಬಸ್ ಕೂಡ ನಿಲ್ದಾಣದ ಹೊರಗೆ ಹೋಗಲಿಲ್ಲ. ಹೊರಗಿನಿಂದಲೂ ಯಾವುದೇ ಬಸ್ ನಿಲ್ದಾಣದೊಳಗೆ ಬರಲಿಲ್ಲ.
ತೆಲಂಗಾಣದ ಬಸ್‍ಗಳು ನಗರದ ನಯಾಕಮಾನ್ ವರೆಗೆ ಮಾತ್ರ ಬಂದು ವಾಪಸ್ಸಾದರೆ, ಮಹಾರಾಷ್ಟ್ರದ ಬಸ್‍ಗಳು ನೌಬಾದ್, ಶಿವನಗರ ವರೆಗೆ ಬಂದು ಹಿಂದಿರುಗಿದವು.

ಸಾರಿಗೆ ಸಂಸ್ಥೆ ಬಸ್‍ಗಳ ಸೇವೆ ಇರದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು. ಕ್ರೂಸರ್ ಸೇರಿ ವಿವಿಧ ಖಾಸಗಿ ವಾಹನಗಳು ಬಸ್ ನಿಲ್ದಾಣ ಬಳಿ ಬಂದು ಪ್ರಯಾಣಿಕರನ್ನು ತುಂಬಿಕೊಂಡು ಹೋದವು.

ಜಿಲ್ಲೆಯಲ್ಲಿ ಮೊದಲ ದಿನ ಮುಷ್ಕರದ ಬಿಸಿ ಇರಲಿಲ್ಲ. ಮುಷ್ಕರಕ್ಕೆ ಮುಂದಾಗಿದ್ದ ಕೆಲ ನೌಕರರಿಗೆ ಅಧಿಕಾರಿಗಳು ತಿಳಿ ಹೇಳಿ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಂಡಿದ್ದರು. ಎರಡನೇ ದಿನವೂ ಅದೇ ತಂತ್ರಗಾರಿಕೆ ಅನುಸರಿಸಲು ಮುಂದಾಗಿ, ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಸೇವೆಗೆ ಹಾಜರಾಗದ ಕೆಲ ನೌಕರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ನೌಕರರು ಮುಷ್ಕರದ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪಲಿಲ್ಲ. ನಂತರ ಇವರೊಂದಿಗೆ ಇತರ ನೌಕರರೂ ಸೇರಿಕೊಂಡರು. ನೂರಾರು ನೌಕರರು ಮುಷ್ಕರದ ಪರ ನಿಂತು ಕೊಂಡರು. ಇನ್ನೇನೂ ಮಾಡಲಾಗದು ಅಂದುಕೊಂಡ ಅಧಿಕಾರಿಗಳು ತಮ್ಮ ಪ್ರಯತ್ನದಿಂದ ಹಿಂದೆ ಸರಿದರು.

ನೌಕರರಾದ ಜಗನ್ನಾಥ ಶಿವಯೋಗಿ, ಅವಿನಾಶ ಕುಲಕರ್ಣಿ, ಬಸವರಾಜ ಚಾಮರೆಡ್ಡಿ, ಸೂರ್ಯಕಾಂತ ಟೈಗರ್, ರಾಹುಲ್ ಕಂಟಿ, ಅಶೋಕ್ ರಾಂಪುರ, ಮಕ್ಸೂದ್, ಶಬ್ಬೀರ್, ವಿಜಯಪ್ರಕಾಶ ಸಿಂಧೆ ಸೇರಿದಂತೆ ಚಾಲಕರು, ನಿರ್ವಾ ಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪೊಲೀಸ್ ಬಂದೋಬಸ್ತ್

ಸಾರಿಗೆ ನೌಕರರ ಮುಷ್ಕರದ ಕಾರಣ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನೌಕರರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ವಿವಿಧ ಸಂಘ ಸಂಸ್ಥೆಗಳ ಮುಖಂಡರು ನೌಕರರಿಗೆ ಬೆಂಬಲ ಸೂಚಿಸಿದರು.

ಎಂಎಲ್‍ಸಿ ಅರವಿಂದ ಅರಳಿ ಭೇಟಿ

ನಗರದ ಸಾರಿಗೆ ನೌಕರರ ಮುಷ್ಕರ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಭೇಟಿ ನೀಡಿದರು. ಕೆಲಕಾಲ ನೌಕರರ ಅಹವಾಲು ಆಲಿಸಿದ ಅವರು, ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ ಎಂದು ಭರವಸೆ ನೀಡಿದರು.

ಧರಣಿ ಸ್ಥಳದಲ್ಲಿ ಊಟ ಸೇವನೆ

ನಗರದ ಕೇಂದ್ರ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಟೆಂಟ್ ಹಾಕಿ ಧರಣಿ ನಡೆಸಿದ ಸಾರಿಗೆ ನೌಕರರು, ಪಕ್ಕದಲ್ಲೇ ಊಟ ತಯಾರಿಸಿ, ಧರಣಿ ಸ್ಥಳದಲ್ಲಿ ಸೇವಿಸಿದರು. ಪೊಲೀಸರು, ಆಂಬುಲನ್ಸ್ ಸಿಬ್ಬಂದಿಗೂ ಊಟ ಬಡಿಸಿದರು. ಎಲ್ಲರೂ ಸೇರಿ ಊಟದ ಖರ್ಚು ಭರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.