ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ದೇಶದ ಅಭಿವೃದ್ಧಿಗೆ ಪೂರಕ

ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಹೇಳಿಕೆ
Last Updated 4 ಜನವರಿ 2020, 11:50 IST
ಅಕ್ಷರ ಗಾತ್ರ

ಬೀದರ್‌: ‘ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ನಾಗರಿಕ ನೋಂದಣಿ ಕಾಯ್ದೆ ದೇಶದ ಅಭಿವೃದ್ಧಿಗೆ ಪೂರಕವಾಗಿವೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಅಭಿಪ್ರಾಯಪಟ್ಟರು.

ನೌಬಾದ್ ಬಳಿಯ ಪುಣ್ಯಾಶ್ರಮದಲ್ಲಿ ನಿರ್ಮಾಣವಾಗುತ್ತಿರುವ ರೇಣುಕಾಚಾರ್ಯರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದ ಬಳಿಕ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.

‘ದೇಶದ ಎಲ್ಲ ಜನ ಸಮುದಾಯಗಳು ಕಾಯ್ದೆಯ ಮಹತ್ವವನ್ನು ಮನಗಾಣಬೇಕು. ಕಾಯ್ದೆಯಲ್ಲಿನ ತಪ್ಪು–ಒಪ್ಪುಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕು. ರಾಜಕಾರಣಿಗಳು ಪರಸ್ಪರ ಕಚ್ಚಾಡಿಕೊಳ್ಳಬಾರದು. ಇದರಿಂದ ವಿಶ್ವಗುರು ಸ್ಥಾನಕ್ಕೇರುತ್ತಿರುವ ನಮ್ಮ ದೇಶವನ್ನು ಮತ್ತೆ ಹಿಂದೆ ತಳ್ಳಿದಂತಾಗುತ್ತದೆ’ ಎಂದರು.

‘ಹೈದರಾಬಾದ್ ಕರ್ನಾಟಕ ಎನ್ನುವ ಪದವನ್ನು ತೆಗೆದು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮಹೋನ್ನತ ಕಾರ್ಯ ಮಾಡಿದೆ’ ಎಂದು ಬಣ್ಣಿಸಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಉಭಯ ಸರ್ಕಾರಗಳು ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು’ ಎಂದು ಹೇಳಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಬಾಳಿ ಬದುಕಿದ ಭೂಮಿ, 17ನೇ ಶತಮಾನದಲ್ಲಿ ಗುರು ನಾನಕರು ಬಂದು ಹೋಗಿರುವ ಪ್ರದೇಶ ಇದು. ಇಂಥ ಪವಿತ್ರ ಪ್ರದೇಶದ ಉದ್ಧಾರ ಆಗಬೇಕಿದೆ. ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ’ ಎಂದು ತಿಳಿಸಿದರು.

‘ಈ ಭಾಗಕ್ಕೆ ಈಗಾಗಲೇ ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಕೊಡಲಾಗಿದೆ. ಇಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಸಬೇಕು, ಉದ್ಯೋಗಾವಕಾಶಗಳು ಹೆಚ್ಚಾಗಬೇಕು. ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯ ದೊರಕಬೇಕು’ ಎಂದು ಹೇಳಿದರು.

ಮೆಹಕರದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಸಂಸ್ಕಾರ ಹಾಗೂ ಸಂಸ್ಕೃತಿ ಉಳಿದಲ್ಲಿ ದೇಶ ಅಭಿವೃದ್ಧಿಯಾಗುತ್ತದೆ. ಭೌತಿಕ ವಿಕಾಸವಾದರೂ ಸಂಸ್ಕೃತಿ ರಹಿತ ಬದುಕಿನಿಂದಾಗಿ ಮಾನವ ಗಂಡಾಂತರದಲ್ಲಿದ್ದಾನೆ. ಹೀಗಾಗಿ ಸಾಮಾಜಿಕ ಮೌಲ್ಯಗಳಿಗೆ ಪ್ರಾಮುಖ್ಯ ನೀಡಬೇಕಿದೆ’ ಎಂದು ತಿಳಿಸಿದರು.

ಪುಣ್ಯಾಶ್ರಮಕ್ಕೆ ಮೂರುವರೆ ಎಕರೆ ಜಾಗ ದಾನ ಮಾಡಿ ರೇಣುಕಾಚಾರ್ಯರ ಮಂದಿರ ನಿರ್ಮಾಣಕ್ಕೂ ಧನ ಸಹಾಯ ಒದಗಿಸಿದ ಷಣ್ಮುಖಯ್ಯ ಸ್ವಾಮಿ ಹಾಗೂ ತೇಜಮ್ಮ ದಂಪತಿಯನ್ನು ಸನ್ಮಾನಿಸಲಾಯಿತು.

ಮಲ್ಲಿಕಾರ್ಜುನ್ ಚಿಕಪೇಟ, ಮಂಜುನಾಥ ಬಿರಾದಾರ, ಶ್ರೀಕಾಂತ ಸ್ವಾಮಿ ಸೋಲಪೂರ, ಪ್ರಭುಲಿಂಗ ಸ್ವಾಮಿ ಡಾವರಗಾಂವ, ಶ್ರೀಕಾಂತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT