ಸೋಮವಾರ, ನವೆಂಬರ್ 30, 2020
20 °C
ಅಭಿನಂದನಾ ಸಮಾರಂಭದಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿಕೆ

ಕೃತಿಯಲ್ಲಿ ಹೊರ ಬರಲಿದೆ ‘ಪಾದಯಾತ್ರೆ ಅನುಭವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಬಸವ ತತ್ವ ಪ್ರಚಾರಕ್ಕೆ ತಾವು ನಡೆಸಿದ 22 ಸಾವಿರ ಕಿ.ಮೀ ಬಸವ ಜ್ಯೋತಿ ಸದ್ಭಾವನಾ ಯಾತ್ರೆಯ ಅನುಭವಗಳನ್ನು ಕೃತಿ ರೂಪದಲ್ಲಿ ಹೊರ ತರಲಾಗುವುದು’ ಎಂದು ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ವಚನ ಟ್ರೇಡಿಂಗ್ ಸೊಲುಷನ್ಸ್ ಹಾಗೂ ಬಸವ ಪರ ಸಂಘಟನೆಗಳ ವತಿಯಿಂದ ಇಲ್ಲಿಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಈಗಾಗಲೇ ಅನುಭವಗಳ ಕೃತಿ ಬರೆಯುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಹೊರ ಬರಲಿದೆ’ ಎಂದು ತಿಳಿಸಿದರು.

’ನನಗೆ ಛಲ ಹಾಗೂ ಬಲ ಇದ್ದುದ್ದರಿಂದಲೇ ಅನೇಕ ಕಷ್ಟಗಳು ಎದುರಾದರೂ ಅವು ಕ್ಷಣಿಕ ಎಂದು ಅರಿತು ಪಾದಯಾತ್ರೆ ಕೈಗೊಂಡಿದ್ದೆ. ಪಾದಯಾತ್ರೆ ವೇಳೆ ನೇಪಾಳದಲ್ಲಿ ದಾಸೋಹಿಯೊಬ್ಬರು ಬಸವ ಸೆಂಟರ್‌ಗೆ 10 ಎಕರೆ ಜಮೀನು ಕೊಟ್ಟಿರುವುದು ಅಸ್ಮರಣೀಯ ಕ್ಷಣ’ ಎಂದು ಹೇಳಿದರು.

‘ಬಸವಕಲ್ಯಾಣದಿಂದ ಪಾದಯಾತ್ರೆ ಆರಂಭಿಸಿದ್ದೆ. ಮಹಾರಾಷ್ಟ್ರ, ಗುಜರಾತ್, ಬಿಹಾರ, ಜಾರ್ಖಂಡ, ಉತ್ತರ ಪ್ರದೇಶ, ಕಾಶ್ಮೀರ, ನೇಪಾಳ, ಕೊಲ್ಕತ್ತ, ಓರಿಸ್ಸಾ, ಚೆನ್ನೆ ಮೂಲಕ ಕೆರಳ ತಲುಪಿದೆ. ಅಲ್ಲಿಂದ ರಾಜ್ಯದ ಮೈಸೂರಿಗೆ ಬಂದು, ಉಳವಿ, ವಿಜಯಪುರ, ಕಲಬುರ್ಗಿ ಮೂಲಕ ಬಸವಕಲ್ಯಾಣಕ್ಕೆ ಮರಳಿ ಪಾದಯಾತ್ರೆ ಮುಕ್ತಾಯಗೊಳಿಸಿದೆ’ ಎಂದು ತಿಳಿಸಿದರು.

‘ಮಳೆ, ಗಾಳಿ, ಬಿಸಿಲು, ಚಳಿಯನ್ನು ಲೆಕ್ಕಿಸದೆ ಶಿವಾನಂದ ಸ್ವಾಮೀಜಿ 11 ತಿಂಗಳ ಕಾಲ ಪಾದಯಾತ್ರೆ ಕೈಗೊಂಡಿದ್ದು ಪ್ರಶಂಸನೀಯ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಯುವ ಉದ್ಯಮಿ ಮಹೇಶ ಅವರಿಗೆ ವಚನ ದುಂಧುಬಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉದ್ಯಮಿ ಈ. ಕೃಷ್ಣಪ್ಪ ಉದ್ಘಾಟಿಸಿದರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿವಶಂಕರ ಟೋಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೆಲ್ದಾಳ ಸಿದ್ಧರಾಮ ಶರಣರು, ಬಸವಕಲ್ಯಾಣದ ಲಿಂಗಾಯತ ಹರಳಯ್ಯ ಪೀಠದ ಡಾ. ಗಂಗಾಂಬಿಕೆ ಅಕ್ಕ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಪ್ಪ ಹಿಪ್ಪಳಗಾಂವ, ಆರ್.ಜಿ. ಶೆಟಕಾರ, ಬಸವ ಪ್ರಸಾದ ಉಪಸ್ಥಿತರಿದ್ದರು.

ಅಲ್ಲಮಪ್ರಭು ನಾವದಗೆರೆ ಸ್ವಾಗತಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಜಗನ್ನಾಥ ಶಿವಯೋಗಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.