ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ವಿರುದ್ಧ ದೂರು

Published 15 ಜನವರಿ 2024, 15:59 IST
Last Updated 15 ಜನವರಿ 2024, 15:59 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಬಸವಾದಿ ಶರಣರ ಚರಿತ್ರೆ ವಿಕೃತಗೊಳಿಸುತ್ತಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಕೋರಿ ವಕೀಲ ಭೀಮನಗೌಡ ಪರಗೊಂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಕಳುಹಿಸಿದ್ದಾರೆ.

‘12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಾಯಕ ಜೀವಿಗಳ ಚಳವಳಿ ಕಲ್ಯಾಣದಲ್ಲಿ ನಡೆದಿತ್ತು. ಈ ನೆಲ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಹಾಗೂ ಅನುಭವ ಮಂಟಪ ಎಂಬ ಜಗತ್ತಿನ ಪ್ರಥಮ ಸಂಸತ್ತು ಹೊಂದಿದ ನಾಡಾಗಿದೆ. ಆದರೆ, ಬಸವರಾಜ ಪಾಟೀಲ ಸೇಡಂ ಅವರು ಇಲ್ಲದ ವ್ಯಕ್ತಿಗಳನ್ನು ಹುಟ್ಟಿಸಿ ಶರಣರ ಚರಿತ್ರೆಯ ಜೊತೆಗೆ ಅವರನ್ನು ಜೋಡಿಸಿ ಶರಣರನ್ನು ಕುಬ್ಜಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಆಲೋಚನೆಗಳನ್ನು ಗುಪ್ತವಾಗಿ ಜಾರಿಗೊಳಿಸುವುದಕ್ಕಾಗಿಯೇ ಸೇಡಂ ಅವರು ಈ ನೆಲದಲ್ಲಿ ಬಸವಕಲ್ಯಾಣ ಕ್ಷೇತ್ರ ಸಮಿತಿ ಹುಟ್ಟು ಹಾಕಿದ್ದಾರೆ. ಇದುವರೆಗೆ ದೂರವಿದ್ದ ಅವರಿಗೆ ಇಳಿ ವಯಸ್ಸಿನಲ್ಲಿ ಈ ನೆಲದ ಮೇಲೆ ಪ್ರೀತಿ ಹುಟ್ಟಲು ಕಾರಣವೇನು? ಇಂಥ ಕಾರ್ಯಗೈಯಲು ಅವರಿಗೆ ಯಾವುದೇ ಕಾನೂನಿನ ಮತ್ತು ನೈತಿಕ ಹಕ್ಕು ಇಲ್ಲ. ಅವರ ಸಂಸ್ಥೆಯಿಂದಲೇ ಶರಣರ ಕೆಲ ಸ್ಥಳಗಳಲ್ಲಿ ತಪ್ಪುತಪ್ಪಾಗಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಇದನ್ನು ಅವರ ಗಮನಕ್ಕೆ ತಂದರೂ ಸುಮ್ಮನಿದ್ದಾರೆ. ಕುಂಟು ನೆಪ ಹೇಳುತ್ತಿದ್ದಾರೆ. ಆದ್ದರಿಂದ ದುರುದ್ದೇಶದಿಂದ ಸೇಡಂ ಅವರು ಅಳವಡಿಸಿದ ಎಲ್ಲ ಫಲಕಗಳನ್ನು ತೆರವುಗೊಳಿಸಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಮತ್ತೆ ಆ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಪರಗೊಂಡ ಅವರು ಪತ್ರಗಳನ್ನು ಕಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT