ಭಾನುವಾರ, ಮಾರ್ಚ್ 26, 2023
23 °C
ಸರ್ಕಾರದ ಆದೇಶ ಪಾಲಿಸಲು ಸ್ವಾಯತ್ತ ಸಂಸ್ಥೆಗಳ ಹಿಂದೇಟು

ಶುಶ್ರೂಷಾಧಿಕಾರಿಗಳ ಪದೋನ್ನತಿ ಮುಂದುವರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ರಾಜ್ಯದ ಸ್ವಾಯತ್ತ ಸಂಸ್ಥೆಗಳಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಶುಶ್ರೂಷಾಧಿಕಾರಿಗಳ ವೃಂದದ ಪದೋನ್ನತಿ ಹುದ್ದೆಗಳನ್ನು ಯಥಾವತ್ತಾಗಿ ಮುಂದುವರಿಸದಿದ್ದರೆ ಶುಶ್ರೂಷಾಧಿಕಾರಿಗಳು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷ ರಾಜಕುಮಾರ ಮಾಳಗೆ ಎಚ್ಚರಿಕೆ ನೀಡಿದರು.

‘ರಾಜ್ಯ ಸರ್ಕಾರ ಶುಶ್ರೂಷಾಧಿಕಾರಿಗಳಿಗೆ ಪದೋನ್ನತಿ ನೀಡಿದರೂ ಜಿಲ್ಲಾ ಕೇಂದ್ರಗಳಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಪದೋನ್ನತಿ ಕೊಡಲು ನಿರಾಕರಿಸುತ್ತಿವೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಪದೋನ್ನತಿಗೆ ಹಣಕಾಸು ಇಲಾಖೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಇದೊಂದು ಇಲಾಖೆಯೊಳಗಿನ ಸಹಜ ಪ್ರಕ್ರಿಯೆಯಾಗಿದೆ. 35 ವರ್ಷಗಳ ನಂತರ ಅನೇಕರಿಗೆ ಪದೋನ್ನತಿ ದೊರಕಿದೆ. ಆದರೆ ಸ್ವಾಯತ್ತ ಸಂಸ್ಥೆಗಳು ಪದೋನ್ನತಿ ನೀಡುತ್ತಿಲ್ಲ. ಸ್ವಾಯತ್ತ ಸಂಸ್ಥೆಗಳ ಧೋರಣೆ ಖಂಡಿಸಿ ಮೊದಲ ಹಂತದಲ್ಲಿ ಒಂದು ವಾರ ಕೈಗೆ ಕಪ್ಪು ಕಟ್ಟಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

‘ಈಗಾಗಲೇ ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಪತ್ರ ಕೊಡಲಾಗಿದೆ. ಇನ್ನೊಂದು ಬಾರಿ ಉಭಯ ಸಚಿವರನ್ನು ಭೇಟಿಯಾಗಿ ತಾಂತ್ರಿಕ ಸಮಸ್ಯೆಯನ್ನು ನಿವಾರಿಸುವಂತೆ ಮನವಿ ಮಾಡಲಾಗುವುದು. ಆದರೂ ಶುಶ್ರೂಷಾಧಿಕಾರಿಗಳಿಗೆ ನ್ಯಾಯ ದೊರಕದಿದ್ದರೆ ಶುಶ್ರೂಷಾಧಿಕಾರಿಗಳ ಸಂಘದ ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಕರೆದು ಮುಂದಿನ ಹೋರಾಟದ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುವುದು’ ಎಂದು ಹೇಳಿದರು.

‘ಕೋವಿಡ್‌ ಸೋಂಕು ಹರಡುವಿಕೆ ತಡೆಯುವಲ್ಲಿ ಹಗಲಿರುಳು ಶ್ರಮಿಸಿದ್ದೇವೆ. ಕಷ್ಟಕಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಉದ್ದೇಶ ನಮಗೆ ಇಲ್ಲ. ಸೇವೆ ಸ್ಥಗಿತಗೊಳಿಸಿ ಶುಶ್ರೂಷಾಧಿಕಾರಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುವಂತಹ ವಾತಾವರಣವನ್ನು ಸರ್ಕಾರ ಸೃಷ್ಟಿಸಬಾರದು’ ಎಂದು ಮನವಿ ಮಾಡಿದರು.

‘ಕೇಂದ್ರ ಸರ್ಕಾರದ ಶುಶ್ರೂಷಾಧಿಕಾರಿಗಳಿಗೆ ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳಿಗೂ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ಆರೋಗ್ಯ ಇಲಾಖೆಯ ಶುಶ್ರೂಷಾಧಿಕಾರಿಗಳ ವೃಂದದ ಹುದ್ದೆಗಳಿಗೆ ರಾಜ್ಯ ಸರ್ಕಾರ 2013ರಲ್ಲಿ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆಯ ಶುಶ್ರೂಷಾಧಿಕಾರಿಗಳ ವೃಂದದ ಹಿರಿಯ ಶುಶ್ರೂಷಾಧಿಕಾರಿಗಳು, ಶುಶ್ರೂಷಾ ಅಧೀಕ್ಷಕರ ಶ್ರೇಣಿ 1 ಹಾಗೂ 2 ಹುದ್ದೆಗಳನ್ನು ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮರ್ಪಕವಾಗಿ ಜಾರಿಗೊಳಿಸಬೇಕು' ಎಂದು ಒತ್ತಾಯಿಸಿದರು

‘ವಾರ್ಷಿಕವಾಗಿ ಬರುವ 8ರಿಂದ 52 ಪತ್ರಾಂಕಿತ ರಜೆಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕೆ ಪ್ರಸ್ತುತ ಪಡೆಯುತ್ತಿರುವ 15 ದಿನಗಳ ವಾರ್ಷಿಕ ವೇತನದ ಬದಲಾಗಿ ಪೊಲೀಸರಿಗೆ ನೀಡುವ ಮಾದರಿಯಲ್ಲಿ ಒಂದು ತಿಂಗಳ ವಾರ್ಷಿಕ ವೇತನ ಕೊಡಬೇಕು’ ಎಂದು ಮನವಿ ಮಾಡಿದರು.
‘ಕೊರೊನಾ ವಾರಿಯರ್‌ಗಳಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಾಧಿಕಾರಿಗಳಿಗೆ ಮಾಸಿಕ ₹ 25,000 ಪ್ರೋತ್ಸಾಹಧನ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಸಲಹೆಗಾರ ಶ್ರೀಕಾಂತ ಫುಲಾರೆ ಹಾಗೂ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಮಡಿವಾಳಪ್ಪ ನಾಗರಹಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.