ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಸೃಷ್ಟಿಸಿದ ಪೂಜೆ, ಪೊಲೀಸರ ವೈಫಲ್ಯ

ಎಫ್‌ಐಆರ್‌ ದಾಖಲಿಸಲು ಮಧ್ಯರಾತ್ರಿ ಎರಡು ತಾಸು ವಿಳಂಬ: ಮಹಮೂದ್‌ ಗವಾನ್ ಸ್ಮಾರಕಕ್ಕೆ ಬಿಗಿ ಬಂದೋಬಸ್ತ್
Last Updated 7 ಅಕ್ಟೋಬರ್ 2022, 15:48 IST
ಅಕ್ಷರ ಗಾತ್ರ

ಬೀದರ್: ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯವಾದ ನಗರದ ಮಹಮೂದ್‌ ಗವಾನ್‌ ಸ್ಮಾರಕದ ಬಳಿ ನಡೆದ ಘಟನೆಗೆ ಪೊಲೀಸ್‌ ವೈಫಲ್ಯವೇ ಕಾರಣ ಎನ್ನುವ ವ್ಯಾಪಕ ಟೀಕೆಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಭಾರತೀಯ ಪುರಾತತ್ವ ಇಲಾಖೆ ಐದು ದಿನ ಮುಂಚಿತವಾಗಿಯೇ ಮಾಹಿತಿ ನೀಡಿದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದುಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ.

ಪೊಲೀಸರ ಸಮ್ಮುಖದಲ್ಲೇ ಕೆಲವರು ಪೂಜೆ ಹೆಸರಲ್ಲಿ ಭಾರತೀಯ ಪುರಾತತ್ವ ಇಲಾಖೆ ಅಧೀನದ ಸ್ಮಾರಕ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಿಂದೂ, ಮುಸ್ಲಿಂ ಸಂಘಟನೆಗಳು ನಗರದಲ್ಲಿ ಪ್ರತ್ಯೇಕ ಸಭೆ ನಡೆಸಿ ಶಾಂತಿ, ಸೌಹಾರ್ದ ಕಾಪಾಡಲು ಮನವಿ ಮಾಡಿವೆ. ಇದರೊಂದಿಗೆ ಪೊಲೀಸರ ನಡೆಯನ್ನೂ ಖಂಡಿಸಿವೆ.

‘ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಪೊಲೀಸರು ಬಹಿರಂಗವಾಗಿಯೇ ಬೆಂಬಲ ನೀಡುತ್ತಿ ದ್ದಾರೆ. ಆದ್ದರಿಂದ ಅವರನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಭೂಗಳ್ಳರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿರುವ ಕಾರಣ ಅವರಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಿವೆ’ ಎಂದು ಯುನೈಟೈಡ್‌ ಫೋರಂ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಮನ್ಸೂರ್‌ ಖಾದ್ರಿ ಅವರು ಟೀಕಿಸಿದ್ದಾರೆ.

‘ಹನುಮಾನ ಜಯಂತಿ ಸಂದರ್ಭದಲ್ಲಿ ಪೊಲೀಸರು ಅಚ್ಚುಕಟ್ಟಾಗಿ ಕೆಲಸ ಮಾಡಿದರು. ಅದೇ ಪೊಲೀಸರು ವಿಜಯ ದಶಮಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾದರು. ರಾಜಕೀಯ ಒತ್ತಡಕ್ಕೆ ಮಣಿದು ಎಫ್‌ಐಆರ್‌ ದಾಖಲಿಸಲು ಮಧ್ಯರಾತ್ರಿ ಎರಡು ತಾಸು ವಿಳಂಬ ಮಾಡಲಾಯಿತು’ ಎಂದು ಅವರು ಆರೋಪಿಸಿದರು.

‘ಮುಖಂಡರ ಸ್ಥಿತಿಯೇ ಹೀಗಿದೆ. ಇನ್ನು ಜನಸಾಮಾನ್ಯರ ಗತಿ ಏನಾಗುತ್ತಿರಬಹುದು. ಪೊಲೀಸರ ಈ ವರ್ತನೆ ಸಲ್ಲ’ ಎಂದು ಅವರು ಹೇಳಿದರು.

ಐದು ದಿನ ಮೊದಲೇ ಪೊಲೀಸರಿಗೆ ಪತ್ರ

ಬಹಮನಿ ಸುಲ್ತಾನರ ಕಾಲದ ಕೋಟೆಯೊಳಗಿನ ಒಳಕೋಟೆ ಗ್ರಾಮದ ಭವಾನಿ ಮಂದಿರದಿಂದ ಭಕ್ತರು ವಿಜಯ ದಶಮಿಯ ದಿನ ಪ್ರತಿ ವರ್ಷ ಮಹಮೂದ್‌ ಗವಾನ್‌ ಸ್ಮಾರಕದ ಬಳಿ ಪೂಜೆ ಸಲ್ಲಿಸಲು ಮೆರವಣಿಗೆಯಲ್ಲಿ ಬರುತ್ತಾರೆ. ಮಹಮೂದ್‌ ಗವಾನ್‌ ಸ್ಮಾರಕ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಅಧೀನದಲ್ಲಿರುವ ಕಾರಣ ಸ್ಮಾರಕಕ್ಕೆ ರಕ್ಷಣೆ ಕೊಡುವಂತೆ ಅಕ್ಟೋಬರ್ 1ರಂದು ಟೌನ್‌ ಪೊಲೀಸ್‌ ಠಾಣೆಗೆ ಪತ್ರಕೊಟ್ಟು ಸ್ವೀಕೃತಿ ಪತ್ರವನ್ನೂ ಪಡೆದುಕೊಳ್ಳಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಬೀದರ್‌ನ ಸ್ಮಾರಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ತಿಳಿಸಿದ್ದಾರೆ.

ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದರೂ ಕೆಲವರು ಸಂರಕ್ಷಿತ ಸ್ಮಾರಕ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಇದು ಶಿಕ್ಷಾರ್ಹ ಅಪರಾಧವಾಗಿದೆ. ಎಎಸ್‌ಐ ಅಧಿಕಾರಿಗಳ ಅನುಮತಿ ಇಲ್ಲದೇ ಒಳಗೆ ಪ್ರವೇಶ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕ್ಟೋಬರ್ 6ರಂದು ಇನ್ನೊಂದು ಪತ್ರವನ್ನು ನೇರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕೊಡಲಾಗಿದೆ ಎಂದು ಹೇಳಿದ್ದಾರೆ.

ಎಎಸ್ಐ ಸ್ಮಾರಕದ ಸುರಕ್ಷತೆಯನ್ನು ಬಿಗಿಗೊಳಿಸಿದೆ. ಈಗಾಗಲೇ ಇಬ್ಬರು ಕಾವಲುಗಾರರು ಇದ್ದು, ಹೆಚ್ಚುವರಿಯಾಗಿ ಮೂವರು ಕಾವಲುಗಾರರನನ್ನು ನಿಯೋಜಿ ಸಲಾಗಿದೆ. ರಾತ್ರಿ ವೇಳೆಯೂ ಕರ್ತವ್ಯಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT