ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ, ನಿರುದ್ಯೋಗ ಕಾಂಗ್ರೆಸ್‌ ಕೊಡುಗೆ: ನಳಿನ್‌ ಕುಮಾರ್‌ ಕಟೀಲ್‌ ಟೀಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟೀಕೆ
Last Updated 20 ನವೆಂಬರ್ 2021, 15:12 IST
ಅಕ್ಷರ ಗಾತ್ರ

ಬೀದರ್‌:‘ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ಹಾಗೂ ನಿರುದ್ಯೋಗ 60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್‌ನ ಕೊಡುಗೆಗಳಾಗಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟೀಕಿಸಿದರು.

ನಗರದ ಗಣೇಶ ಮೈದಾನದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನ ಸ್ವರಾಜ್‌ ಯಾತ್ರೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಅವಧಿಯಲ್ಲಿ ಅಲ್ಲಲ್ಲಿ ಬಾಂಬ್‌ ಸ್ಫೋಟಗಳು ಆಗುತ್ತಿದ್ದವು. ಕಾಂಗ್ರೆಸ್‌ ಗರೀಬಿ ಹಟಾವೋ ಎಂದು ಘೋಷಣೆ ಮಾಡಿದರೂ ಬಡತನ ನಿರ್ಮೂಲನೆ ಆಗಲಿಲ್ಲ. ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶ್ವರ ಖಂಡ್ರೆ ಅವರ ಮನೆಯಲ್ಲಿನ ಬಡತನ ಮಾತ್ರ ನಿರ್ಮೂಲನೆ ಆಯಿತು’ ಎಂದು ಕಾಂಗ್ರೆಸ್‌ ಮುಖಂಡರ ವಿರುದ್ಧ ವಾದ್ದಾಳಿ ನಡೆಸಿದರು.

‘ಕಾಂಗ್ರೆಸ್‌ನಲ್ಲಿ ಲಾಲ್‌ ಬಹಾದ್ದೂರ್ ಶಾಸ್ತ್ರಿ ಒಬ್ಬರೇ ಕಲಂಕರಹಿತ ಪ್ರಧಾನಿ. ಉಳಿದವರೆಲ್ಲರೂ ಕಳಂಕಿತರೇ ಆಗಿದ್ದಾರೆ. ಬಿಜೆಪಿಯ ಇಬ್ಬರು ಪ್ರಧಾನಿಗಳಿಗೂ ಒಂದು ಕಪ್ಪು ಚುಕ್ಕೆ ಇಲ್ಲ. ಕಳಂಕರಹಿತ ಆಡಳಿತ ಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಲ್ಲಿಯೂ ಬಾಂಬ್‌ ಸ್ಫೋಟಗೊಂಡಿಲ್ಲ. 2014ರ ನಂತರ ಒಬ್ಬ ನಕ್ಸಲನೂ ಹುಟ್ಟಿಕೊಂಡಿಲ್ಲ’ ಎಂದು ಹೇಳಿದರು.

‘ಮೋದಿ ಸರ್ಕಾರ ಕೋವಿಡ್‌ನಲ್ಲಿ ಜನರ ಪ್ರಾಣ ಉಳಿಸಿದೆ. ಅಮ್ಲಜನಕದ ಮೇಲಿರುವ ಕಾಂಗ್ರೆಸ್‌ಗೆ ಈಗ
ಆಮ್ಲಜನಕ ಕೊಡಲು ಸಹ ಜನರಿಲ್ಲ’ ಎಂದು ಲೇವಡಿ ಮಾಡಿದರು.

‘ಕೇಂದ್ರ ಸರ್ಕಾರ 42 ಕೋಟಿ ಜನರ ಜನಧನ ಖಾತೆ ತೆರೆದು ಹಣ ಕೊಟ್ಟಿದೆ. 12 ಕೋಟಿ ಜನರಿಗೆ ಗ್ಯಾಸ್ ನೀಡಿದೆ ಬಿಜೆಪಿಗೆ ಅಭಿವೃದ್ಧಿಯೇ ಧ್ಯೇಯವಾಗಿದೆ. ಮತದಾರರ ಬೆಂಬಲ ಇರುವ ಕಾರಣ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮುಖಂಡ ಮಾಲೀಕಯ್ಯ ಗುತ್ತೆದಾರ್ ನಮ್ಮೊಂದಿಗೆ ಬಂದಿದ್ದಾರೆ. ಈಶ್ವರ ಖಂಡ್ರೆ ಅವರನ್ನು ಚುನಾವಣೆಯಲ್ಲಿ ಹೆಚ್ಚು ಟೀಕಿಸುವುದು ಬೇಡ. ಕಾರಣ ಅವರೂ ಬಿಜೆಪಿಗೆ ಬರಲಿದ್ದಾರೆ. ಕಾಂಗ್ರೆಸ್‌ ನಲ್ಲಿ ಜನ ಖಾಲಿಯಾಗುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

‘ಗ್ರಾಮ ಉದ್ಧಾರ ಆದರೆ ರಾಷ್ಟ್ರ ಉದ್ಧಾರ ಆಗುತ್ತದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜನೆ ಮಾಡುವಂತೆಯೂ ಸೂಚಿಸಿದ್ದರು. ಆದರೆ ಕಾಂಗ್ರೆಸ್‌ ಮುಖಂಡರು ಗಾಂಧಿ ಟೋ‍ಪಿ ಹಾಕಿಕೊಂಡು ಜನರಿಗೆ ಟೋ‍ಪಿ ಹಾಕಿದರು’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ನರೇಗಾದ ಮೂಲಕ ನೇರ ಅನುದಾನ ಕೊಡುತ್ತಿದೆ. ಮನೆ ಮನೆಗೆ ಗಂಗೆ ಹರಿಸುವ ಯೋಜನೆ ಮಾಡಿದೆ. ಅಮೃತ ಯೋಜನೆ ಅಡಿಯಲ್ಲಿ ಮಹಾನಗರಗಳಿಗೆ ಅನುದಾನ ಕೊಡುತ್ತಿದೆ. ಪ್ರತಿ ಪಂಚಾಯಿತಿಗೆ ₹ 2 ಕೋಟಿ ಕೊಡುವಂತೆ ಮೋದಿ ಅವರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದ ಪಂಚಾಯಿತಿಗಳಿಗೆ 5 ಲಕ್ಷ ಮನೆ ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಯಡಿಯೂರಪ್ಪ ಅವರು ಪಂಚಾಯಿತಿ ಸದಸ್ಯರಿಗೆ ಗೌರವ ಧನ ಕೊಡಲು ಶುರು ಮಾಡಿದರು. ಸದಸ್ಯರಿಗೆ ₹ 10 ಸಾವಿರ ಗೌರವ ಹಾಗೂ ಮೊಬೈಲ್‌ಗಳನ್ನು ಕೊಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡುವೆ’ ಎಂದರು.

‘ಯೋಜನೆಗಳಿಗೆ ಅನುಮೋದನೆ ಪಡೆಯಲು ಪರಿಷತ್ತಿನಲ್ಲಿ ಬೆಂಬಲ ಬೇಕು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರವಾಗಿ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿ, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್‌ ಅವರು ಪ್ರತಿ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ. ಕಟೀಲ್‌ ಅವರು ಎಲ್ಲೆಲ್ಲಿಗೆ ಹೋಗಿದ್ದಾರೆಯೋ ಅಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ ಶಕ್ತಿ ಬಂದಿದೆ’ ಎಂದರು.

ಕೇಂದ್ರದ ರಸ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ’ ಎಂದರು.

‘ಕಾಂಗ್ರೆಸ್‌ಗೆ ಬೀದರ್‌ ಜಿಲ್ಲೆಯಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅಭ್ಯರ್ಥಿ ದೊರೆಯದೆ ವಿಲಿವಿಲಿ ಒದ್ದಾಡುತ್ತಿದೆ. ಕಾಂಗ್ರೆಸ್‌ಗೆ ಭಯ ಹುಟ್ಟಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರು ಗಂಭೀರವಾಗಿ ಮತಹಕ್ಕು ಚಲಾವಣೆ ಮಾಡುವಂತೆ ಮನವರಿಕೆ ಮಾಡಬೇಕಾಗಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಮುಖಂಡರು ಸುಳ್ಳು ಹೇಳುವುದನ್ನು ಬಿಟ್ಟು ಏನೂ ಮಾಡುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಗೊಬ್ಬರದ ಕೊರತೆ ಇದೆ ಎಂದು ಸುಳ್ಳು ಹೇಳಿಕೆ ಕೊಟ್ಟರು. ಪರಿಶೀಲಿಸಿದಾಗ ದಾಸ್ತಾನು ಇರುವುದು ಕಂಡು ಬಂದಿತು. ರೈತರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾಂಗ್‌ ವದಂತಿ ಹರಡಿಸುವ ಕೆಲಸ ಮಾಡಲಿದೆ. ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಸತ್ಯಾಸತ್ಯತೆ ತಿಳಿಸಬೇಕು. ಸುಳ್ಳನ್ನು ಬುಡಮೇಲು ಮಾಡಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್‌ ಸದಸ್ಯರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ವಿಧಾನ ಪರಿಷತ್‌ ಚುನಾವಣೆ ಟಿಕೆಟ್‌ ಕೊಟ್ಟಿದ್ದಕ್ಕೆ ಕೃತಜ್ಞನಾಗಿದ್ದೆನೆ’ ಎಂದರು.

‘ನಮ್ಮಲ್ಲಿ ರಾಜ್ಯ ಹಾಗೂ ಕೇಂದ್ರದ ಎರಡು ತೋಪುಗಳಿವೆ. ಕಾಂಗ್ರೆಸ್‌ ಅಡ್ಡಿ ಮಾಡಿದಂತೆ ನೋಡಿಕೊಳ್ಳಲಾಗುವುದು. ಮತದಾರರು ನನಗೆ ರಾಜಕೀಯ ಪುನರ್‌ ಜನ್ಮ ಕೊಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌, ಶಾಸಕ ಶರಣು ಸಲಗರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಶೀಲ್‌ ನಮೋಶಿ, ಕೆಎಸ್‌ಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರೌಫೋದ್ದಿನ್‌ ಕಚೇರಿವಾಲೆ, ಬಿಜೆಪಿ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬುಡಾ ಅಧ್ಯಕ್ಷ ಬಾಬು ವಾಲಿ, ಮುಖಂಢರಾದ ಸುಭಾಷ ಕಲ್ಲೂರ್, ಗುರುನಾಥ ಕೊಳ್ಳೂರ, ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ.ಸಿದ್ರಾಮ, ಶಿವರಾಜ ಗಂದಗೆ, ಹಣಮಂತ ಬುಳ್ಳಾ, ಗುರುನಾಥ ಜ್ಯಾಂತಿಕರ್‌, ಜಯಕುಮಾರ ಕಾಂಗೆ, ಬಾಬುರಾವ್ ಕಾರಭಾರಿ, ಸಿದ್ಧು ಪಾಟೀಲ ಇದ್ದರು. ಅಶೋಕ ಹೊಕ್ರಾಣೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT