ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ, ಆಸ್ತಿ ಹಾನಿ ಪರಿಶೀಲಿಸಿದ ಶಾಸಕ ರಹೀಂಖಾನ್

ಜನವಾಡದಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವು
Last Updated 19 ಸೆಪ್ಟೆಂಬರ್ 2020, 14:28 IST
ಅಕ್ಷರ ಗಾತ್ರ

ಜನವಾಡ: ಮಳೆಯಿಂದಾಗಿ ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮಲಗಿದ್ದ ವೇಳೆ ಮೈಮೇಲೆ ಗೋಡೆ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗುರಮ್ಮ ಅವರು ಬೀದರ್‍ನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಶಾಸಕರ ಭೇಟಿ: ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಮನೆಗೆ ಶಾಸಕ ರಹೀಂಖಾನ್ ಶನಿವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಪರಿಹಾರ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಸಿಬ್ಬಂದಿ ಹಾಜರಿ ಪುಸ್ತಕ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಿದರು.

ಖಾನ್ ಅವರು ಜನವಾಡ, ಅಲಿಯಂಬರ್, ಇಸ್ಲಾಂಪುರ, ಮರಕಲ್ ಹಾಗೂ ಗಾದಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಳೆಯಿಂದ ಆಗಿರುವ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿ ಪರಿಶೀಲನೆ ನಡೆಸಿದರು.

ಉದ್ದು, ಹೆಸರು ಹೊಲಗಳಿಗೆ ಭೇಟಿ ಕೊಟ್ಟು ವೀಕ್ಷಣೆ ಮಾಡಿದರು. ಮಳೆಯಿಂದ ಕುಸಿದ, ಬಿರುಕುಬಿಟ್ಟ ಮನೆಗಳನ್ನುಪರಿಶೀಲಿಸಿದರು.

ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡುವ ದಿಸೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯ ಸಮರ್ಪಕ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಗಂಗಾದೇವಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧನರಾಜ ಬೋರಾಳೆ, ಜನವಾಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ ಇದ್ದರು.

ಅಪಾರ ಬೆಳೆ ನಷ್ಟ: ನಾಲ್ಕು ದಿನ ಸುರಿದ ಮಳೆಗೆ ಬೀದರ್ ತಾಲ್ಲೂಕು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.

ಚಿಲ್ಲರ್ಗಿ, ಚಿಮಕೋಡ, ಮಾಳೆಗಾಂವ್, ಜನವಾಡ, ಮನ್ನಳ್ಳಿ, ಬಗದಲ್, ಆಣದೂರು, ಕಮಠಾಣ ಮೊದಲಾದ ಗ್ರಾಮಗಳ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ.

ಮಾಂಜ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹಲವು ವರ್ಷಗಳ ನಂತರ ಜನವಾಡದ ಪಶು ಆಸ್ಪತ್ರೆ ಸಮೀಪದ ಕೆರೆ ತುಂಬಿದೆ. ಜನವಾಡ-ಚಾಂಬೋಳ ರಸ್ತೆಯ ಒಂದು ಬದಿ ಮಳೆ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT