ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಗಣೇಶ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸಚಿವ ಚವಾಣ್

ಗಣೇಶ ಉತ್ಸವ ಸರಳ ಆಚರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಕಾರಣ ನಗರದಲ್ಲಿ ಈ ಬಾರಿ ಗಣೇಶ ಉತ್ಸವ ಸರಳವಾಗಿ ಆಚರಿಸಲು ಗಣೇಶ ಮಹಾ ಮಂಡಳ ನಿರ್ಧರಿಸಿದೆ.

ಗಣೇಶ ಮಹಾ ಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಗರದ ರಾಮ ಮಂದಿರದಲ್ಲಿ ನಡೆದ ಸಭೆಯಲ್ಲಿ ಉತ್ಸವಕ್ಕೆ ಸಂಬಂಧಿಸಿದಂತೆ ಅನೇಕರು ಸಲಹೆಗಳನ್ನು ನೀಡಿದರು.

ಸರ್ಕಾರದ ಮಾರ್ಗಸೂಚಿ ಅನ್ವಯ ದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಪರಿಸರ ಸ್ನೇಹಿ ಗಣಪನನ್ನು ಕೂಡಿಸಬೇಕು. ಸೆ. 10 ರಂದು ಪ್ರತಿಷ್ಠಾಪಿಸಿ 15 ರಂದು ವಿಸರ್ಜಿಸಬೇಕು. ಮಂಟಪಗಳನ್ನು ಸ್ಯಾನಿಟೈಸ್ ಮಾಡಬೇಕು. ಕೋವಿಡ್ ಜಾಗೃತಿಗೆ ಫ್ಲೆಕ್ಸ್ ಅಳವಡಿಸಬೇಕು. ಕರಪತ್ರ ವಿತರಿಸಬೇಕು. ಮಾಸ್ಕ್ ಧಾರಣೆ ಸೇರಿದಂತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಸಭೆಯಲ್ಲಿ ಮಹಾ ಮಂಡಳ ಪ್ರಮುಖರು ಹೇಳಿದರು.

ಕಳೆದ ವರ್ಷದ ಸ್ಥಳದಲ್ಲೇ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಬಾರದು. ಡಿಜೆ ಅಳವಡಿಸಬಾರದು ಎಂದು ತಿಳಿಸಿದರು.

ಈ ವರ್ಷ ಸಾರ್ವಜನಿಕ ಗಣೇಶ ಮೆರವಣಿಗೆ ಇರುವುದಿಲ್ಲ. ಗಣೇಶ ಪ್ರತಿಷ್ಠಾಪಿಸಿದ ಮಂಡಳಿಗಳ ಕೆಲವೇ ಜನರು ಮಧ್ಯಾಹ್ನ 12 ರಿಂದ ಸಂಜೆ 7 ರ ವರೆಗೆ ಗಣೇಶ ವಿಸರ್ಜಿಸಬೇಕು ಎಂದು ಹೇಳಿದರು.

ಗಣೇಶ ವಿಸರ್ಜನೆಗಾಗಿ ಕೌಠಾ ಹಾಗೂ ಕೆ.ಎಂ.ಎಫ್. ಕಚೇರಿ ಹಿಂದಿನ ಕರೆಗಳನ್ನು ವೀಕ್ಷಿಸಿ, ಜಿಲ್ಲಾ ಆಡಳಿತದ ಜತೆ ಚರ್ಚಿಸಿ ಸೂಕ್ತ ಸ್ಥಳ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕಳೆದ ವರ್ಷದ ಗಣೇಶ ಮಹಾ ಮಂಡಳ ಸಮಿತಿಯನ್ನೇ 2021ನೇ ಸಾಲಿಗೂ ಮುಂದುವರಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರನ್ನು ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗಣೇಶ ಮಹಾ ಮಂಡಳ ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಪ್ರಮುಖರಾದ ಎನ್.ಆರ್.ವರ್ಮಾ, ಸೂರ್ಯಕಾಂತ ಶೆಟಕಾರ್, ಈಶ್ವರಸಿಂಗ್ ಠಾಕೂರ್, ದೀಪಕ್ ವಾಲಿ, ರಜನೀಶ ವಾಲಿ, ಮಹೇಶ ಪಾಲಂ, ಬಸವರಾಜ ಪವಾರ್, ಭರತ ಶೆಟಕಾರ, ಸುರೇಶ ಮೊಟ್ಟಿ, ಮನೋಹರ ದಂಡೆ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.