ಸೋಮವಾರ, ಜನವರಿ 25, 2021
27 °C
ಚರ್ಮಗಡ್ಡೆ ರೋಗದಿಂದ ನಿತ್ರಾಣಗೊಂಡಿರುವ ಹೈನುರಾಸುಗಳು

ಬೀದರ್: ಹಾಲು ಉತ್ಪಾದನೆಯಲ್ಲಿ ಇಳಿಮುಖ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಚರ್ಮಗಡ್ಡೆ ರೋಗದಿಂದ ಬೀದರ್ ಜಿಲ್ಲೆಯಲ್ಲಿ ಹೈನುರಾಸುಗಳು ನಿತ್ರಾಣಗೊಂಡಿವೆ. ಇದರಿಂದ ಹಾಲು ಉತ್ಪಾದನೆ ಕಡಿಮೆಯಾಗಿ, ಹೈನುಗಾರಿಕೆ ಆದಾಯದಲ್ಲೂ ಇಳಿಕೆಯಾಗಿದೆ.

ಚರ್ಮಗಡ್ಡೆ ರೋಗ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆಯ ನಾಲ್ಕು ತಿಂಗಳಿಂದ ನಿರಂತರವಾಗಿ ಪರಿಶ್ರಮಿಸುತ್ತಿದೆ. ಜಿಲ್ಲೆಯ 72,500 ಜಾನುವಾರುಗಳಿಗೆ ಚರ್ಮಗಡ್ಡೆ ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಇದರಲ್ಲಿ 10,500 ರಾಸುಗಳಿಗೂ ಲಸಿಕೆ ಹಾಕಿ ಅವುಗಳ ಮೇಲೆ ನಿಗಾ ವಹಿಸಲಾಗಿದೆ.

ಅತಿವೃಷ್ಟಿಯಿಂದ ಫಸಲು ಕೈಗೆ ಬಂದಿಲ್ಲ. ರೋಗದಿಂದಾಗಿ ಜಾನುವಾರುಗಳೂ ಕಡಿಮೆ ಹಾಲು ಕೊಡುತ್ತಿವೆ. ಇದರಿಂದಾಗಿ ಆದಾಯದಲ್ಲಿ ಇಳಿಕೆಯಾಗಿ ಕೃಷಿಕರು ಹಾಗೂ ಜಾನುವಾರು ಮಾಲೀಕರು ಆತಂಕದಲ್ಲಿ ಇದ್ದಾರೆ.

‘25 ವರ್ಷಗಳಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಚರ್ಮಗಡ್ಡೆ ರೋಗ ಕಾಣಿಸಿಕೊಂಡಿದೆ. ಬಹುತೇಕ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ರೋಗ ನಿಯಂತ್ರಣಕ್ಕೆ ಬಂದರೂ ಜಾನುವಾರುಗಳಲ್ಲಿನ ಶಕ್ತಿ ಕಡಿಮೆಯಾಗಿದೆ. ಹೀಗಾಗಿ ಹಾಲು ಕಡಿಮೆ ಕೊಡುತ್ತಿವೆ’ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹಂಚನಾಳ ಹೇಳುತ್ತಾರೆ.

ಜಾನುವಾರುಗಳನ್ನು ಕಾಡುತ್ತಿರುವ ರೋಗ

ಔರಾದ್ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹಾಗೂ ಚರ್ಮಗಡ್ಡೆರೋಗ ರೋಗ ಬಂದು ಹಾಲು ಉತ್ಪಾದನೆಯಲ್ಲಿ ಇಳಿಮುಖವಾಗಿದೆ.

'ಮೇ ತಿಂಗಳಲ್ಲಿ ತಾಲ್ಲೂಕಿನ ಸುಮಾರು ಐದು ಸಾವಿರ ಜಾನುವಾರುಗಳಿಗೆ ಚರ್ಮಗಡ್ಡೆ ರೋಗ ಬಂದಿತ್ತು. ಸಕಾಲದಲ್ಲಿ ಚಿಕಿತ್ಸೆ ನೀಡಿದ ನಂತರ ಅವು ಚೇತರಿಸಿಕೊಳ್ಳುತ್ತಿವೆ. ಆದರೆ ಅವುಗಳಲ್ಲಿ ಇನ್ನೂ ನಿಶಕ್ತಿ ಇದೆ. ಹೀಗಾಗಿ ಸಹಜವಾಗಿಯೇ ಹಾಲು ಕಡಿಮೆ ಕೊಡುತ್ತಿವೆ' ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಬಿರಾದಾರ.

'ನಾಗೂರಿನ ಹಾಲು ಉತ್ಪಾದನಾ ಸಂಘ ಆರು ಗ್ರಾಮಗಳನ್ನು ಒಳಗೊಂಡಿದೆ. ನಿತ್ಯ ಆರು ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತದೆ. ಚರ್ಮಗಡ್ಡೆ ರೋಗದಿಂದ ಎರಡು ತಿಂಗಳು ಉತ್ಪಾನೆ ಕಡಿಮಾಗಿದ್ದರೂ ಈ ತಿಂಗಳು ಕೊಂಚ ಸುಧಾರಣೆಯಾಗಿದೆ' ಎಂದು ನಾಗೂರ ಗ್ರಾಮದ ಹೆರಿಟೇಜ್ ಹಾಲು ಉತ್ಪಾದಕ ಸಂಘದ ರಾಜಕುಮಾರ ಮೇತ್ರೆ ಹೇಳುತ್ತಾರೆ.

'ಸಂಘದ ಹಾಲು ರಿಲಾಯನ್ಸ್ ಸಂಸ್ಥೆ ಸಹಕಾರದಿಂದ ನೇರವಾಗಿ ಹೈದರಾಬಾದ್‌ಗೆ ಹೋಗುತ್ತಿದೆ. ಗುಣಮಟ್ಟ ಆಧರಿಸಿ ಲೀಟರ್ ಹಾಲಿಗೆ ₹ 35 ರಿಂದ ₹ 70ರ ವರೆಗೆ ಹಾಲು ಖರೀದಿಸಲಾಗುತ್ತಿದೆ. ವಾರಕ್ಕೊಮ್ಮೆ ರೈತರ ಖಾತೆಗೆ ಹಣ ಜಮಾ ಆಗುತ್ತದೆ' ಎಂದು ಜೋಜನಾ ಹಾಲು ಉತ್ಪಾದಕ ಸಂಘದ ಗಂಗಶೆಟ್ಟಿ ಪಾಟೀಲ ತಿಳಿಸುತ್ತಾರೆ.

'ನಮ್ಮಲ್ಲಿ ನಿತ್ಯ ಐದು ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತದೆ. ಆದರೆ ಜಾನುವಾರುಗಳಿಗೆ ರೋಗ ಬಂದಾಗಿನಿಂದ ಒಂದು ಸಾವಿರ ಲೀಟರ್‌ ಉತ್ಪಾದನೆ ಕಡಿಮೆಯಾಗಿದೆ’ ಎಂದು ಠಾಣಾಕುಶನೂರ ಹಾಲು ಸಂಗ್ರಹಣಾ ಘಟಕದ ಅಧಿಕಾರಿಗಳು ವಿವರಿಸುತ್ತಾರೆ.

ತ್ರಾಣಗೊಂಡಿರುವ ಜಾನುವಾರುಗಳು

ಕಮಲನಗರ: ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಚರ್ಮಗಡ್ಡೆ ರೋಗ ಕಾಣಿಸಿ ಕೊಂಡಿದೆ. ಇದು ಮಾರಣಾಂತಿಕ ರೋಗ ಅಲ್ಲ. ಚಿಕಿತ್ಸೆಯ ಬಳಿಕ ಜಾನುವಾರುಗಳು ಗುಣಮುಖಗೊಳ್ಳುತ್ತವೆ. ರೈತರು ಭಯ ಪಡುವ ಅಗತ್ಯವಿಲ್ಲ ಎಂದು ಕಮಲನಗರ ಪಶು ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸುರೇಶ ದಿನಕರ್ ತಿಳಿಸುತ್ತಾರೆ.

‘ಚರ್ಮ ಗಂಟು ರೋಗದಿಂದ ಹೈನುಗಾರಿಕೆ ಮೇಲೆ ಶೇಕಡ 22 ರಷ್ಟು ಪರಿಣಾಮ ಬೀರಿದೆ. ನಿತ್ಯ 10 ಲೀಟರ್ ಹಾಲು ಕೊಡುವ ರಾಸು 6-7 ಲೀಟರ್ ಹಾಲು ಕೊಡುತ್ತಿದೆ’ ಎನ್ನುತ್ತಾರೆ ತೋರಣಾವಾಡಿ ಸಂತೋಷ.

‘ಎರಡು ತಿಂಗಳಿಂದ ಹಾಲು ಸಂಗ್ರಹಣೆಯಲ್ಲಿ ಇಳಿಕೆಯಾಗಿದೆ. ಮೊದಲು ಪ್ರತಿ ದಿನ 200 ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಎರಡು ತಿಂಗಳ ಹಿಂದೆ ₹ 150 ಲೀಟರ್‌ಗೆ ಇಳಿದ ಉತ್ಪಾದನೆ ಇನ್ನೂ ಹೆಚ್ಚಾಗಿಲ್ಲ’ ಎಂದು ಹೊಳಸಮುದ್ರ ಹಾಲಿನ ಡೈರಿ ಮಾಲೀಕ ಮದನ್ ಜಾಧವ ಹೇಳುತ್ತಾರೆ.

ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ನಿರ್ಣಾವಾಡಿ, ಮುತ್ತಂಗಿ, ಬೇಮಳಖೇಡ, ನಾಗನಕೇರಾ, ಮಂಗಲಗಿ ಇತರ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಉತ್ಪಾದನೆಯಲ್ಲಿ ಕಡಿಮೆಯಾಗಿದೆ.

‘ಆಕಳು, ಎಮ್ಮೆಗಳಿಗೆ ಎಷ್ಟು ಮೇವು, ಪೊಷಕಾಂಶಗಳನ್ನು ಕೊಟ್ಟರೂ ಸದ್ಯ ಉತ್ಪಾದನೆಯಲ್ಲಿ ಹೆಚ್ಚಳವಾಗಿಲ್ಲ’ ಎನ್ನುತ್ತಾರೆ ರೈತ ಸುಬ್ಬಣ್ಣ.

ಬಸವಕಲ್ಯಾಣ: 5 ಸಾವಿರ ಲೀಟರ್ ಹಾಲು ಉತ್ಪಾದನೆ

ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹುಲಸೂರನಲ್ಲಿನ ಹಾಲು ಶಿಥಿಲೀಕರಣ ಘಟಕಕ್ಕೆ ನಿತ್ಯ 5 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ.

ಕೋವಿಡ್‌ ಸಂಕಷ್ಟದಲ್ಲೇ ಜಾನುವಾರುಗಳಿಗೆ ಕಾಲುಬಾಯಿ ಹಾಗೂ ಚರ್ಮಗುಳ್ಳೆ ರೋಗ ಕಾಣಿಸಿಕೊಂಡರೂ ಕೆಎಂಎಫ್‌ಗೆ ಹಾಲಿನ ಪೂರೈಕೆ ಹೇಳಿಕೊಳ್ಳುವಷ್ಟು ಕಡಿಮೆಯಾಗಿಲ್ಲ ಎಂದು ಬೀದರ್- ಕಲಬುರಗಿ ಹಾಲು ಉತ್ಪಾದಕರ ಒಕ್ಕೂಟದ ಹುಲಸೂರ ಶಿಥಿಲೀಕರಣ ಘಟಕದ ಅಧಿಕಾರಿಗಳ ಹೇಳುತ್ತಾರೆ.

ಸಸ್ತಾಪುರ ಹಾಗೂ ಲಾಡವಂತಿ ಹಾಲು ಉತ್ಪಾದಕರಿಂದ ನಿತ್ಯ 300 ಲೀಟರ್ ಹಾಲು ಬರುತ್ತಿದೆ. ಪ್ರತಿ ಲೀಟರ್‌ಗೆ ₹24 ರಿಂದ ₹ 78ರ ವರೆಗೆ ಬೆಲೆ ನಿಗದಿ ಆಗುತ್ತದೆ. ಹೀಗಾಗಿ ಪ್ರತಿದಿನ ₹ 2 ಲಕ್ಷ ಮೌಲ್ಯದ ಹಾಲು ಲಭ್ಯವಾಗುತ್ತಿದೆ.

ಹೈನುಗಾರಿಕೆಯಲ್ಲಿ ತೊಡಗುವವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಶಿಥಿಲೀಕರಣ ಘಟಕದ ಹೊಸ ಕಟ್ಟಡಕ್ಕೆ ₹ 1 ಕೋಟಿ ಮಂಜೂರಾಗಿದ್ದರೂ ಜಾಗ ದೊರಕುತ್ತಿಲ್ಲ. ಜಾಗ ದೊರಕಿದರೆ ಹಾಲು ಸಂಗ್ರಹಣೆ ಹಾಗೂ ಮಾರಾಟಕ್ಕೆ ಇನ್ನಷ್ಟು ಅನುಕೂಲವಾಗಿದೆ.

ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳ

ಭಾಲ್ಕಿ: ತಾಲ್ಲೂಕಿನಲ್ಲಿ ಕೊರೊನಾ, ಕಾಲುಬಾಯಿ ರೋಗದ ಮಧ್ಯೆಯೂ ಏಪ್ರಿಲ್‌ ಎರಡನೇ ವಾರದಿಂದ ನಿಧಾನವಾಗಿ ರೈತರಿಂದ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

ತಾಲ್ಲೂಕಿನ ಹಲಬರ್ಗಾ, ಖಟಕಚಿಂಚೋಳಿ, ಲಖನಗಾಂವ, ಸಾಯಿಗಾಂವ ಸೇರಿದಂತೆ ಒಟ್ಟು ಆರು ಹೋಬಳಿಗಳಲ್ಲಿ 41 ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಮೇನಲ್ಲಿ ಎಲ್ಲ ಸಂಘಗಳಿಂದ ಪ್ರತಿದಿನ 2,595 ಲೀಟರ್‌, ತಿಂಗಳಿಗೆ 77,886 ಲೀಟರ್‌ ಹಾಲಿನ ಸಂಗ್ರಹವಾಗುತ್ತಿತ್ತು . ಅಕ್ಟೋಬರ್‌ನಲ್ಲಿ 92,160 ಲೀಟರ್‌ ಹಾಲು ಉತ್ಪಾದನೆ ಆಗಿದೆ.

ತಾಲ್ಲೂಕಿನ ಏಣಕೂರ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿಯೇ ನಿತ್ಯ 200 ಲೀಟರ್‌ ಹಾಲು ಸಂಗ್ರಹವಾಗುತ್ತದೆ ಎಂದು ಕೆಎಂಎಫ್‌ನ ಅಧಿಕಾರಿ ಬಿ.ಸಿ. ಬಿರಾದರ ಹೇಳುತ್ತಾರೆ.

ಹೈನುಗಾರಿಕೆಗೆ ಕೆಎಂಎಫ್‌ ಬಲ

ಬೀದರ್‌: ಗ್ರಾಮೀಣ ಭಾಗದ ಅರ್ಥಿಕತೆಯು ಬಹುಪಾಲು ಹೈನುಗಾರಿಕೆಯನ್ನು ಅವಲಂಬಿಸಿದೆ. ಕೋವಿಡ್‌ ಸೋಂಕು ತಡೆಗೆ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಮನೆ ಮನೆಗೆ ತೆರಳಿ ಹಾಲು ಮಾರಾಟ ಮಾಡುವುದು ಸೇರಿದಂತೆ ಎಲ್ಲ ವ್ಯವಹಾರಗಳಿಗೂ ಹಿನ್ನಡೆ ಉಂಟಾಯಿತು. ಆದರೆ, ಬೀದರ್ ಜಿಲ್ಲೆಯಲ್ಲಿ ಕೆಎಂಎಫ್‌ ಹಾಲು ಉತ್ಪಾದಕರ ಬೆನ್ನಿಗೆ ನಿಂತ ಕಾರಣ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳು ಲಾಕ್‌ಡೌನ್‌ ಅವಧಿಯಲ್ಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

ಲಾಕ್‌ಡೌನ್‌ ಕಾರಣ ಜಿಲ್ಲೆಯಲ್ಲಿನ ಹೋಟೆಲ್‌, ರೆಸ್ಟೋರಂಟ್‌ ಹಾಗೂ ಚಹಾ ಅಂಗಡಿಗಳು ಮುಚ್ಚಿದ್ದವು. ಹಾಲು ಕೊಳ್ಳುವವರು ಇಲ್ಲವಾದ್ದರಿಂದ ಹಾಲು ಉತ್ಪಾದಕರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಸರ್ಕಾರ ರಾಜ್ಯ ಸರ್ಕಾರ ಕೆಎಂಎಫ್‌ನಿಂದ ಹಾಲು ಖರೀದಿಸಿ ವಲಸೆ ಕಾರ್ಮಿಕರು, ರೋಗಿಗಳು ಹಾಗೂ ಬಡವರಿಗೆ ವಿತರಿಸಿತು. ಹೋಟೆಲ್‌ಗೆ ಹಾಲು ಕೊಡುತ್ತಿದ್ದ ಹಳ್ಳಿಗರು ನೇರವಾಗಿ ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಿದರು.

ಬೀದರ್‌ ಜಿಲ್ಲೆಯಲ್ಲಿ ನಿತ್ಯ 30 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ನಿತ್ಯ 10 ಸಾವಿರ ಲೀಟರ್‌ ಹಾಲು, ಒಂದು ಸಾವಿರ ಲೀಟರ್ ಮೊಸರು ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಪೇಡೆ ತಯಾರಿಸಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. 18 ಸಾವಿರ ಲೀಟರ್‌ ಹಾಲು ಕಲಬುರ್ಗಿಗೆ ಕಳಿಸಲಾಗುತ್ತಿದೆ.

ಜಿಲ್ಲೆಯಿಂದ ನೆರೆಯ ತೆಲಂಗಾಣದ ಜಹೀರಾಬಾದ್, ಸದಾಶಿವಪೇಟ, ತಾಂಡೂರ, ಸಂಗಾರೆಡ್ಡಿಗೆ ಹಾಲು ಪೂರೈಕೆ ಮಾಡಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ 48 ಮಿಲ್ಕ್‌ ಪಾರ್ಲರ್‌ಗಳನ್ನು ತೆರೆಯಲಾಗಿದೆ. ನಿತ್ಯ ₹ 1ಲಕ್ಷ ಮೌಲ್ಯದ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿವೆ.

ಕರ್ನಾಟಕ ಹಾಲು ಒಕ್ಕೂಟವು ಹಾಲು ಉತ್ಪಾದಕರ ಸಂಘಗಳ ಮೂಲಕ ಪ್ರತಿವಾರ ನೇರವಾಗಿ ಹಾಲು ಉತ್ಪಾದಕರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡುತ್ತಿದೆ. ಈ ಮೂಲಕ ಗ್ರಾಮೀಣರ ಬದುಕಿಗೆ ಆಸರೆ ಮತ್ತು ಆರ್ಥಿಕ ಚೈತನ್ಯ ತುಂಬಿದೆ’ ಎಂದು ಕೆಎಂಎಫ್‌ ಬೀದರ್‌ ಘಟಕದ ಉಪ ವ್ಯವಸ್ಥಾಪಕ ಶಾಲಿವಾನ ವಾಡೆ ಹೇಳುತ್ತಾರೆ.

ಕೆಎಂಎಫ್‌ ಅಧ್ಯಕ್ಷ ಆರ್.ಕೆ.ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ ಕುಮಾರ ಅವರ ವಿಶೇಷ ಆಸಕ್ತಿಯ ಫಲವಾಗಿ ಬೀದರ್‌ ಘಟಕದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ.

ಹಾಲಿನ ಇಳುವರಿ ಹೆಚ್ಚಿಸಲು ಹಾಗೂ ದೇಸಿ ತಳಿಗಳನ್ನು ಉನ್ನತೀಕರಣಗೊಳಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕಮದಲ್ಲಿ ಆಯ್ಕೆಯಾದ 17 ಜಿಲ್ಲೆಗಳಲ್ಲಿ ಬೀದರ್ ಜಿಲ್ಲೆಯೂ ಸೇರಿದೆ.

ಕಡಿಮೆ ಇಳುವರಿಯ ರಾಸುಗಳನ್ನು ಗುರುತಿಸಿ, ಅವುಗಳಿಗೆ ಉತ್ಕೃಷ್ಟ ದೇಸಿ ತಳಿಗಳ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಮಾಡುವ ಮೂಲಕ ಜಾನುವಾರುಗಳ ಹಾಲಿನ ಇಳುವರಿ ಹೆಚ್ಚಿಸುವ ಕಾರ್ಯ ಆರಂಭವಾಗಬೇಕಿದೆ. ಜಾನುವಾರು ಪಾಲನೆಗೆ ಬೀದರ್‌ ಜಿಲ್ಲೆ ಸೂಕ್ತ ಹವಾಮಾನ ಹಾಗೂ ಪ್ರದೇಶವನ್ನು ಹೊಂದಿದೆ. ರೈತರು ಅದರ ಲಾಭ ಪಡೆದುಕೊಳ್ಳಬೇಕಿದೆ.

ಸಹಕಾರ: ಮನ್ಮತಪ್ಪ ಸ್ವಾಮಿ, ಮಾಣಿಕ ಭುರೆ, ಬಸವರಾಜ ಭಾಲ್ಕಿ, ಮನೋಜಕುಮಾರ ಹಿರೇಮಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.