ಭಾನುವಾರ, ಅಕ್ಟೋಬರ್ 2, 2022
19 °C
ಡಿಡಿಪಿಐ (ಪ್ರಭಾರ) ಓಂಕಾರ ರೂಗನ್‌ರಿಂದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ

ಶಿಥಿಲಾವಸ್ಥೆಯಲ್ಲಿ ಶಾಲೆಗಳು: ದುರಸ್ತಿಗೆ ಪಾಲಕರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು ಹಾಗೂ ಗುಣಮಟ್ಟದ ಶಿಕ್ಷಣ ಕುರಿತಾಗಿಯೇ ಪಾಲಕರು ಗುರುವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌' ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳಿದರು.

ಗಡಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮೂಲಸೌಕರ್ಯ ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶಾಲಾ ಕಟ್ಟಡಗಳ ದುರಸ್ತಿಗೆ ಗ್ರಾಮ ಪಂಚಾಯಿತಿಗಳಿಗೂ ನಿರ್ದೇಶನ ನೀಡಬೇಕು ಎಂದು ಅನೇಕ ಪಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು ಒದಗಿಸಬೇಕು. ಕೆಸರು ತುಂಬಿದ ಶಾಲಾ ಆವರಣದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಕೋರಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಓಂಕಾರ ರೂಗನ್ ಅವರು ಪಾಲಕರ ಹಾಗೂ ಸಾರ್ವಜನಿಕರ ಪ್ರತಿಯೊಂದು ಪ್ರಶ್ನೆಯನ್ನೂ ಗಂಭೀರವಾಗಿ ಆಲಿಸಿದರು. ಕೆಲ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಆದೇಶ ನೀಡಿದರು. ಕೆಲ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

* * *

ಪ್ರ: ಮಳೆಯಲ್ಲಿ ಸಂತಪುರದ ಶಾಲೆ ಸೋರುತ್ತಿದೆ. ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳಿ

ತುಕಾರಾಮ, ಸಂತಪುರ

ಉ: ಶಿಥಿಲಗೊಂಡ ಶಾಲಾ ಕಟ್ಟಡಗಳ ಪಟ್ಟಿ ತಯಾರಿಸಿ ಈಗಾಗಲೇ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ.

ಪ್ರ: ಗೌಡಗಾಂವ(ಆರ್) ಶಾಲೆ ಸೋರುತ್ತಿದೆ. ಶಾಲೆಯಲ್ಲಿ ಗಣಿತ ಶಿಕ್ಷಕರು ಇಲ್ಲ. ಅಗತ್ಯ ಕ್ರಮ ಕೈಗೊಳ್ಳಿ

ಲೋಕೇಶ ಕಾಂಬಳೆ, ಭಾಲ್ಕಿ

ಉ: ಶಾಲಾ ಕಟ್ಟಡ ದುರಸ್ತಿ ಕಾರ್ಯ ಮಳೆಗಾಲ ಮುಗಿದ ತಕ್ಷಣ ಶುರುವಾಗಲಿದೆ. ಶೀಘ್ರದಲ್ಲೇ ಗಣಿತ ಶಿಕ್ಷಕರನ್ನು ನಿಯೋಜಿಸಲಾಗುವುದು.

ಪ್ರ: ಸೋಲಪುರದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ವರ್ಗಾವಣೆಯಾಗಿದ್ದಾರೆ. 40 ವಿದ್ಯಾರ್ಥಿಗಳಿಗೆ ಮೂರು ತಿಂಗಳಿಂದ ಒಬ್ಬರೇ ಶಿಕ್ಷಕರು ಬೋಧಿಸುತ್ತಿರುವ ಕಾರಣ ತೊಂದರೆಯಾಗಿದೆ. ಶಿಕ್ಷಕರನ್ನ ನೇಮಕ ಮಾಡಿ

ನರಸಗೊಂಡ, ಸೋಲಪುರ

ಉ: ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ.

ಪ್ರ: ವಡಗಾಂವದ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರು ಹೋಗಲು ವ್ಯವಸ್ಥೆ ಮಾಡಿ

ರವಿಕುಮಾರ ಮಠಪತಿ, ವಡಗಾಂವ

ಉ: ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲ ಸಮಸ್ಯೆ ನಿವಾರಣೆಯಾಗಲಿವೆ.

ಪ್ರ: 50 ವರ್ಷಗಳ ಹಿಂದಿನ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಗ್ರಾಮಸ್ಥರು ಶಾಲಾ ಆವರಣದಲ್ಲೇ ಬಯಲು ಶೌಚಕ್ಕೆ ಬರುತ್ತಿದ್ದಾರೆ. ಕ್ರಮ ಕೈಗೊಳ್ಳಿರಿ.

ಗುರುನಾಥ ರೆಡ್ಡಿ, ಖಟಕಚಿಂಚೋಳಿ

ಉ: ಪಾಲಕರು ಪಂಚಾಯಿತಿ ಅಧಿಕಾರಿಗಳಿಗೂ ಒಂದು ಪತ್ರ ಕೊಡಬೇಕು. ನೈರ್ಮಲ್ಯ ಕಾಪಾಡಲು ಪಂಚಾಯಿತಿ ಮೂಲಕವೂ ಕ್ರಮ ಕೈಗೊಳ್ಳಬಹುದು.

ಪ್ರ: ಕಮಲನಗರ ತಾಲ್ಲೂಕಿನ ಸಾವಳಿಯಲ್ಲಿ 1984 ರಿಂದ ಪಾಳು ಬಿದ್ದ ಶಾಲಾ ಕಟ್ಟಡ ಇದೆ. 25 ಕನ್ನಡ, 65 ಮರಾಠಿ ಮಾಧ್ಯಮ ಮಕ್ಕಳು ಇದ್ದಾರೆ. ಶಾಲೆಯಲ್ಲಿ ಒಬ್ಬ ಕನ್ನಡ ಶಿಕ್ಷಕರೂ ಇಲ್ಲ. ಕನ್ನಡ ಶಿಕ್ಷಕರನ್ನು ನಿಯೋಜಿಸಿ

ಬಸವರಾಜ ಪಾಟೀಲ, ಸಾವಳಿ

ಉ: ಹಳೆಯ ಕಟ್ಟಡ ತೆರವು ಕಾರ್ಯ ಶುರುವಾಗಲಿದೆ. ಕನ್ನಡ ಶಿಕ್ಷಕರನ್ನು ನೇಮಕ ಮಾಡಲಾಗುವುದು.

ಪ್ರ: ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವದಲ್ಲಿ ಶಾಲೆ ಸೋರುತ್ತಿದೆ. 100 ವಿದ್ಯಾರ್ಥಿಗಳು ಇದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.

ಸುಭಾಷ ಕೆನಾಡೆ, ಬೀದರ್‌

ಉ: ಪಂಚಾಯಿತಿಯವರೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿಇಒ ಮೂಲಕ ಪಂಚಾಯಿತಿಗೆ ನಿರ್ದೇಶನ ನೀಡಲಾಗುವುದು.

ಪ್ರ: ಕೌಡಗಾಂವ(ಕೆ)ದ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 200 ಮಕ್ಕಳು ಓದುತ್ತಿದ್ದಾರೆ. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಮವಸ್ತ್ರವನ್ನೂ ಕೊಟ್ಟಿಲ್ಲ.

ಗೌತಮ ಮೇತ್ರೆ, ಔರಾದ್‌

ಉ: ಈಗಾಗಲೇ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಶೀಘ್ರದಲ್ಲೇ ಸಮವಸ್ತ್ರ ಕೊಡುವ ವ್ಯವಸ್ಥೆ ಮಾಡಲಾಗುವುದು. ಶಾಲೆಗೆ ನೀರು ಪೂರೈಸುವಂತೆ ಪಂಚಾಯಿತಿಗೆ ಮನವಿ ಮಾಡಲಾಗುವುದು.

ಪ್ರಶ್ನೆ: ಮರಕಲ್‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೆಸರು ತುಂಬಿಕೊಂಡಿದ್ದು, ಕಾಂಕ್ರೀಟ್‌ ಹಾಕಿ ರಸ್ತೆ ನಿರ್ಮಿಸಲು ಸಾಧ್ಯವಿಲ್ಲವೆ?

ಲೋಕೇಶ, ಮರಕಲ್

ಉ: ಗ್ರಾಮ ಪಂಚಾಯಿತಿಯವರು ನರೇಗಾದಲ್ಲಿ ರಸ್ತೆ ನಿರ್ಮಾಣ ಮಾಡಲು ಅವಕಾಶ ಇದೆ. ಪಂಚಾಯಿತಿಗೆ ಪತ್ರ ಬರೆದು ರಸ್ತೆ ನಿರ್ಮಿಸುವಂತೆ ಕೋರಲಾಗುವುದು.

ಪ್ರ: ಅಲಿಯಂಬರ್‌ನಲ್ಲಿರುವ ಸಿಆರ್‌ಸಿ ಕಚೇರಿ ತೆರೆಯಲು ಕ್ರಮ ಕೈಗೊಳ್ಳಿರಿ

ಬಸವರಾಜ ಭಾವಿದೊಡ್ಡಿ, ಅಲಿಯಂಬರ್‌

ಉ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಶೀಘ್ರ ಕಚೇರಿ ಆರಂಭಿಸಲಾಗುವುದು.

ಪ್ರ: ಬೀದರ್‌ ತಾಲ್ಲೂಕಿನ ವಿಲಾಸಪುರದಲ್ಲಿ ಹಳೆಯ ಶಾಲಾ ಕಟ್ಟಡ ಕೆಡವಿ ಮಂದಿರ ನಿರ್ಮಾಣ ಮಾಡಲಾಗಿದ್ದು, ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ?

ವಿಲಾಸಪುರ ಗ್ರಾಮಸ್ಥರು

ಉ: ಶಾಲಾ ಆವರಣದಲ್ಲಿ ಮಂದಿರ ಕಟ್ಟುವ ಹಾಗಿಲ್ಲ. ಆದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ವರದಿ ತರಿಸಿಕೊಳ್ಳಲಾಗುವುದು. ಅತಿಕ್ರಮಣವಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಪ್ರ: ಬೀದರ್‌ನ ಶಹಾಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಎರಡು ಹುದ್ದೆಗಳಿವೆ. ಮುಖ್ಯ ಶಿಕ್ಷಕರು ಈಚೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಶಾಲೆಯಲ್ಲಿ ಸ್ವಚ್ಛತೆಯೂ ಇಲ್ಲ. ಶಾಲೆಗೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಿರಿ.

ತುಕಾರಾಮ ಪುಣೇಕರ್, ಶಹಾಪುರ

ಉ: ಹೊಕ್ರಾಣಕ್ಕೆ ಮುಖ್ಯ ಶಿಕ್ಷಕರ ವರ್ಗಾವಣೆಯಾಗಿದೆ. ಪಾಲಕರು ಲಿಖಿತ ಅರ್ಜಿ ಕೊಟ್ಟರೆ ಹೊಸ ಶಿಕ್ಷಕರನ್ನು ನಿಯೋಜಿಸಲಾಗುವುದು.

ಪ್ರ: ಮಲ್ಲಿಕಾರ್ಜುನವಾಡಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ತಕ್ಷಣ ನಿಯೋಜನೆ ಮಾಡಬೇಕು.

ಪ್ರವೀಣ, ಮಲ್ಲಿಕಾರ್ಜುನ ವಾಡಿ

ಉ: ಕ್ರಮ ಕೈಕೊಳ್ಳಲಾಗುವುದು

ಪ್ರ: ಸರ್ಕಾರ ಮೊಟ್ಟೆ ಹಣ ಬಿಡುಗಡೆ ಮಾಡಿಲ್ಲ. ಶಿಕ್ಷಕರೇ ಮೊಟ್ಟೆ ಖರೀದಿಸಿ ಮಕ್ಕಳಿಗೆ ಕೊಡಬೇಕಾಗಿದೆ. ತಕ್ಷಣ ಹಣ ಬಿಡುಗಡೆ ಮಾಡಿರಿ.

ಚೆನಶೆಟ್ಟಿ, ಬೋರಾಳ

ಉ: ಸರ್ಕಾರದಿಂದ ಈಚೆಗೆ ಅನುದಾನ ಬಿಡುಗಡೆಯಾಗಿದೆ. ಒಂದು ವಾರದಲ್ಲಿ ಸಂಬಂಧಪಟ್ಟವರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಲಿದೆ.

ಪ್ರ: ಬೀದರ್‌ನ ವಿಜ್ಞಾನ ಕೇಂದ್ರದಲ್ಲಿ ಒಂದೇ ಕುಟುಂಬದ ಅಪ್ಪ, ಮಗ, ಸೊಸೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬೇರೆಯವರು ನೌಕರಿ ಮಾಡಲು ಸಾಧ್ಯವಿಲ್ಲವೆ?

ನಾಗೇಶ ಭಾವಿಕಟ್ಟಿ, ಮಿರಾಗಂಜ್

ಉ: ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಲಾಗುವುದು. ಲೋಪವಾಗಿದ್ದರೆ ಸರಿ ಪಡಿಸಲಾಗುವುದು.

ಪ್ರ: ಔರಾದ್‌ ತಾಲ್ಲೂಕಿನ ಕೆಲ ಶಾಲೆಗಳ ಜಾಗ ಅತಿಕ್ರಮಣವಾಗಿದ್ದು, ತೆರವುಗೊಳಿಸಿರಿ

ಸೋಮನಾಥ ಮಧೋಳ, ಔರಾದ್‌

ಉ: ಅತಿಕ್ರಮಣ ತಡೆಯಲು ಅನೇಕ ಕಡೆ ಶಾಲೆಗಳಿಗೆ ಆವರಣ ಗೋಡೆ ನಿರ್ಮಿಸಲಾಗಿದೆ. ಅತಿಕ್ರಮಣವಾಗಿದ್ದರೆ, ತೆರವುಗೊಳಿಸಲಾಗುವುದು.

ಪ್ರ: ಸರ್ಕಾರಿ ಶಾಲೆಯ ಮಕ್ಕಳಿಗೆ ಈವರೆಗೂ ಶೂ, ಸಾಕ್ಸ್‌ ಕೊಟ್ಟಿಲ್ಲ ಏಕೆ?

ವೀರಭದ್ರಪ್ಪ ಉಪ್ಪಿನ್, ಬೀದರ್

ಉ: ಈಚೆಗಷ್ಟೇ ಅನುದಾನ ಬಂದಿದ್ದು, ಮಕ್ಕಳಿಗೆ ಶೂ ಹಾಗೂ ಸಾಕ್ಸ್‌ ಕೊಡಲಾಗುವುದು.

ಪ್ರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದು ಕೊಠಡಿಗಳು ಹಾಳಾಗಿದ್ದು, ದುರಸ್ತಿ ಮಾಡಿಸಿರಿ

ಮಾಣಿಕರಾವ್‌ ಪಾಟೀಲ, ಖಾನಾಪುರ

ಉ: ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ.

ಪ್ರ: ಚಾಂದೂರಿಯ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಶಾಲಾ ಆವರಣದಲ್ಲಿರುವ ತೆರೆದ ಬಾವಿಯ ಮೇಲೆ ಮುಚ್ಚಳ ಹಾಕಿಸಿ

ದೀಪಕ ಪಾಟೀಲ, ಚಾಂದೂರಿ

ಉ: ಬಾವಿಗೆ ಮುಚ್ಚಳಿಕೆ ಹಾಕುವ ಅಧಿಕಾರ ಪಂಚಾಯಿತಿಗೆ ಇದೆ. ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯುತ್ತೇವೆ.

ಪ್ರ: ನಾಗೂರ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈದಾನವೇ ಇಲ್ಲ.

ದತ್ತಾತ್ರೇಯ, ನಾಗೂರಬಿ,

ಉ: ಎಸ್‌ಡಿಎಂಸಿ ಪದಾಧಿಕಾರಿಗಳು ಗೊತ್ತುವಳಿ ಸ್ವೀಕರಿಸಿ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಬೇಕು. ಗೋಮಾಳ ಜಾಗ ಇರದಿದ್ದರೆ, ಕಂದಾಯ ಇಲಾಖೆಯ ಮೂಲಕ ಮೈದಾನಕ್ಕೆ ಜಾಗ ಪಡೆಯಲು ಪ್ರಯತ್ನಿಸಬಹುದು.

ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವದ ಶಿವಕುಮಾರ, ಬೀದರ್‌ನ ಸಂಗಮೇಶ ಜ್ಯಾಂತೆ, ಆನಂದ ಪಾಟೀಲ, ರಾಜೇಶ್ವರದ ಹರೀಶ್, ಪ್ರಕಾಶ ರಾವಣ, ಔರಾದ್‌ನ ಅಹಮ್ಮದ್‌ ಜಮಗಿ, ಹಳ್ಳಿಖೇಡ ಉಪೇಂದ್ರಶಾಸ್ತ್ರಿ ಕೃಷ್ಣಮೂರ್ತಿ. ಕಬಿರಬಾದ್‌ನ ಪಂಡಿತ ಬಾವಗೆ, ಘಾಳೆ‍ಪ್ಪ ಕಾಶೀನಾಥ, ಬಸವಕಲ್ಯಾಣ ತಾಲ್ಲೂಕಿನ ಗದ್ಲೆಗಾಂವದ ಚನ್ನವೀರ, ರೇಣುಕಾ ಶಹಾಪುರ, ಭಾಲ್ಕಿ ತಾಲ್ಲೂಕಿನ ಹುಣಜಿಯ ಚೆನ್ನು, ಸಂಗಮೇಶ ಗುಮ್ಮೆ, ಜಯದೇವ, ಅಟ್ಟರಗಾದ ಸಂಗಮೇಶ ಪ್ರಶ್ನೆಗಳನ್ನು ಕೇಳಿದರು.

ನಿರ್ವಹಣೆ: ಚಂದ್ರಕಾಂತ ಮಸಾನಿ, ಗಿರಿರಾಜ ವಾಲಿ, ಗುರುಪಾದಪ್ಪ ಸಿರ್ಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು