ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ವಜಾ: ಕ್ರಮಕ್ಕೆ ಒತ್ತಾಯ

Last Updated 29 ಅಕ್ಟೋಬರ್ 2021, 14:34 IST
ಅಕ್ಷರ ಗಾತ್ರ

ಬೀದರ್: ತನಿಖೆಯ ವರದಿಯಲ್ಲಿ ಆರೋಪಗಳು ಸಾಬೀತಾಗದಿದ್ದರೂ ಅನೇಕ ಚಾಲಕ ಹಾಗೂ ನಿರ್ವಾಹಕರನ್ನು ಸೇವೆಯಿಂದ ವಜಾಗೊಳಿಸಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶಾನ್ಯ ವಲಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ಬೀದರ್ ವಿಭಾಗದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗಾಯಕವಾಡ ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಧ್ವನಿ ಎತ್ತುವ ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ವಿನಾಕಾರಣ ಸೇವೆಯಿಂದ ಅಮಾನತುಗೊಳಿಸುತ್ತಿದ್ದಾರೆ. ತನಿಖೆ ವರದಿಯಲ್ಲಿ ಆರೋಪಗಳು ಸಾಬೀತಾಗದಿದ್ದರೂ ಅನೇಕರನ್ನು ವಜಾಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾಲ್ಕಿ ಘಟಕದ ಇಬ್ಬರು ಚಾಲಕರು, ಒಬ್ಬರು ಚಾಲಕ ಕಂ ನಿರ್ವಾಹಕ ಹಾಗೂ ಬಸವಕಲ್ಯಾಣ ಘಟಕದ ಇಬ್ಬರು ಕುಶಲಕರ್ಮಿಗಳನ್ನು ವಿವಿಧ ಆರೋಪಗಳಲ್ಲಿ ಆಮಾನತುಗೊಳಿಸಿ, ಇಲಾಖೆ ವಿಚಾರಣೆ ನಡೆಸಲಾಗಿತ್ತು. ಐದೂ ಪ್ರಕರಣಗಳಲ್ಲಿ ಆರೋಪಗಳು ಸಾಬೀತಾಗಿಲ್ಲ. ಆದರೆ, ನಾಲ್ವರನ್ನು ಪುನಃ ಸೇವೆಗೆ ಸೇರಿಸಿಕೊಂಡು, ತಮಗೆ ಮಾತ್ರ ಅನ್ಯಾಯ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.

ಹಿಂದಿನ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಅವರು ಜಿಲ್ಲಾ ಸಂಚಾರ ಅಧಿಕಾರಿಯಾಗಿದ್ದಾಗ ಅವ್ಯವಹಾರ ನಡೆಸಿ, ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದರು. ಹೀಗಾಗಿ ಸಂಘಟನೆ ವತಿಯಿಂದ ಅವರ ವಿರುದ್ಧ ಮೇಲಧಿಕಾರಿಗೆ ದೂರು ಸಲ್ಲಿಸಲಾಗಿತ್ತು. ಕಾರಣ, ಅವರು ಹಗೆತನದಿಂದ ಭಾಲ್ಕಿ ಘಟಕದ 177 ಸಂಖ್ಯೆಯ ಚಾಲಕ ಕಂ ನಿರ್ವಾಹಕ ಆಗಿರುವ ತಮ್ಮನ್ನು, ಆರೋಪಗಳು ಸಾಬೀತಾಗದಿದ್ದರೂ, ತನಿಖೆ ವರದಿ ಲೆಕ್ಕಿಸದೆ ವಜಾಗೊಳಿಸಿದ್ದಾರೆ ಎಂದು ದೂರಿದ್ದಾರೆ.

ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ತಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.

ತಪ್ಪು ಎಸಗದಿದ್ದರೂ, ಸೇವೆಯಿಂದ ವಜಾಗೊಂಡಿರುವ ನೌಕರರು ಎದೆಗುಂದಬಾರದು. ಅನ್ಯಾಯವನ್ನು ಪ್ರತಿಭಟಿಸಬೇಕು. ನ್ಯಾಯ ಸಿಗುವವರೆಗೆ ವಿರಮಿಸಬಾರದು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT