ಮಂಗಳವಾರ, ಮೇ 11, 2021
27 °C
ಕೋವಿಡ್‌ ಸಕ್ರಿಯ ಪ್ರಕರಣಗಳು ಹೆಚ್ಚುತ್ತಿದ್ದರೂ ಜಿಲ್ಲಾ ಕೇಂದ್ರದಲ್ಲಷ್ಟೇ ಚಿಕಿತ್ಸೆ

ಸಹಾಯವಾಣಿ ಆರಂಭಿಸದ ಜಿಲ್ಲಾಡಳಿತ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಪ್ರತಿ ನಾಲ್ವರಲ್ಲಿ ಇಬ್ಬರಿಗೆ ಕೋವಿಡ್‌ ಹರಡುತ್ತಿರುವುದು ಧೃಡಪಟ್ಟಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು, ಸರಾಸರಿ 150ರಿಂದ 300 ಜನರಿಗೆ ಸೋಂಕು ತಗುಲುತ್ತಿದೆ. ನಿತ್ಯ ಇಬ್ಬರು ಸಾವಿಗೀಡಾಗಿದ್ದಾರೆ. ಕೋವಿಡ್‌ನಿಂದಾಗಿಯೇ ಏಳು ಜನರು ಮೃತಪಟ್ಟಿರುವ ವರದಿ ಮಂಗಳವಾರ ಬಂದಿದೆ. ಜನ ಆತಂಕಕ್ಕೆ ಒಳಗಾದರೂ ಜಿಲ್ಲಾಡಳಿತ ಸಹಾಯವಾಣಿ ಕೇಂದ್ರ ತೆರೆದಿಲ್ಲ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.

ಕೋವಿಡ್‌ ಸೋಂಕಿತರು ಬ್ರಿಮ್ಸ್‌ ಕೋವಿಡ್‌ ಆಸ್ಪತ್ರೆಯ ಬಾಗಿಲಲ್ಲಿ ಬಂದು ದಾಖಲು ಮಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ.

ಕಳೆದ ವರ್ಷ ಡಿ.ಎಚ್‌.ಒ ಡಾ.ವಿ.ಜಿ.ರೆಡ್ಡಿ ಅವರ ವಿರುದ್ಧ ಚುನಾಯಿತ ಪ್ರತಿನಿಧಿಗಳೇ ಆಕ್ರೋಶ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಕೋವಿಡ್‌ ಸೋಂಕಿತರು ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮೊಬೈಲ್‌ ಕರೆ ಮಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಕೊರತೆ ಉಂಟಾಗಿದೆ. ಶಿಫಾರಸು ಇದ್ದವರಿಗೆ ಹೇಗೋ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.

‘ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ, ಪತ್ತೆ ಹಾಗೂ ಚಿಕಿತ್ಸೆ ಸಮರ್ಪಕವಾಗಿಲ್ಲ. ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳಿಗೆ ಕರೆ ಮಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

‘ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜೀವ ಭಯದಿಂದ ಜನಪ್ರತಿನಿಧಿಗಳು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ತಕ್ಷಣ ಐಎಎಸ್‌ ಅಥವಾ ಕೆಎಎಸ್‌ ಹಿರಿಯ ಅಧಿಕಾರಿಯನ್ನು ನಿಯೋಜಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕೋವಿಡ್ ಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. 10 ಜನ ಸ್ಟಾಫ್‌ ನರ್ಸ್‌ಗಳು ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ಜನರ ಆತಂಕ ಕಡಿಮೆ ಮಾಡುವಲ್ಲಿ ಸಹಾಯವಾಣಿ ನೆರವಾಗಿತ್ತು. ಜಿಲ್ಲಾಡಳಿತದ ಸದ್ಯದ ಕಾರ್ಯ ವೈಖರಿಯ ಬಗ್ಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಇಂದಿಗೂ ಗಂಭೀರವಾಗಿಲ್ಲ ಎಂದು ಇಲಾಖೆಯ ಸಿಬ್ಬಂದಿಯೇ ಆಡಿಕೊಳ್ಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.