ಗುರುವಾರ , ಮಾರ್ಚ್ 23, 2023
28 °C
ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಕಷ್ಟದಲ್ಲಿರುವವರ ನೆರವಿಗೆ ಹಿಂದೇಟು ಹಾಕದಿರಿ: ಜ್ಯೋತಿರ್ಮಯಾನಂದ ಸ್ವಾಮೀಜಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸೇವೆಗಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ. ಎಲ್ಲರೂ ಸೇವಾ ದೀಕ್ಷೆ ಪಡೆದು ಸಂಕಷ್ಟದಲ್ಲಿರುವವರ ನೆರವಿಗೆ ಬರಲು ಇದು ಅತ್ಯಂತ ಪ್ರಶಸ್ತ ಕಾಲವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣ ಎದುರಿನ ಸುಪ್ರಿಯಾ ಕಾಂಟಿನೆಂಟಲ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ವೈರಾಣು ಸಮಾಜಕ್ಕೆ ನಾನಾ ತರಹದ ಸಮಸ್ಯೆ, ಸವಾಲು, ಸಂಕಷ್ಟಗಳನ್ನು ತಂದಿಟ್ಟಿದೆ. ಇದರೊಟ್ಟಿಗೆ ವಿಪತ್ತಿನ ಈ ಪರಿಸ್ಥಿತಿಯು ಪ್ರತಿಯೊಬ್ಬರಿಗೂ ಹಲವು ರೀತಿಯಲ್ಲಿ ಪಾಠವನ್ನು ಸಹ ಕಲಿಸಿದೆ. ಇಂದು ನಾವೆಲ್ಲ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಕೊರೊನಾ ನಮ್ಮೆಲ್ಲರ ಜೀವನ ಶೈಲಿ, ಆಹಾರ ಶೈಲಿ, ಕಾರ್ಯಶೈಲಿ ಜತೆಗೆ ಆಚಾರ-ವಿಚಾರಗಳನ್ನು ಸಹ ಬದಲಿಸಿದೆ. ಯಾವ ಪರಿಸ್ಥಿತಿಗೆ ಹೇಗೆ ಒಗ್ಗಿಕೊಳ್ಳಬೇಕು ಎನ್ನುವ ಬಗ್ಗೆ ಕಲ್ಪನೆಗೂ ಮೀರಿದ ಪಾಠಗಳನ್ನು ಕಲಿಸಿದೆ. ಬರುವ ದಿನಗಳಲ್ಲಿನ ಯಾವುದೇ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ನಾವೆಲ್ಲ ಬಹಳ ಗಟ್ಟಿಯಾಗಬೇಕಿದೆ ಎಂದು ಹೇಳಿದರು.

ಸಮಾಜದ ಉಳ್ಳವರು, ಎಲ್ಲ ರೀತಿಯಿಂದ ಉತ್ತಮ ಸ್ಥಿತಿಯಲ್ಲಿದ್ದವರು ಕಷ್ಟದಲ್ಲಿರುವ ಹಾಗೂ ತೀರ ಅಗತ್ಯವಿರುವವರ ನೆರವಿಗೆ ಕೈಚಾಚಬೇಕಿದೆ. ಇದು ಪ್ರಾರ್ಥನೆ ಮಾಡುವ ಸಮಯವಲ್ಲ, ಬದಲಾಗಿ ಸಹಾಯಹಸ್ತ ಚಾಚುವ ಸಂದರ್ಭವಿದೆ. ನೊಂದವರ ಸೇವೆ ಮಾಡುವವರಲ್ಲೇ ಪರಮಾತ್ಮ ಬಂದು ನೆಲೆಸಿರುತ್ತಾನೆ ಎಂದು ತಿಳಿಸಿದರು.

ರೋಟರಿಯಂತಹ ಜನಪರ, ಜೀವಪರ, ಸಮಾಜಪರ ಕಾಳಜಿಯುಳ್ಳ ಸಂಸ್ಥೆಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸ.ದಾ. ಜೋಶಿ ಮಾತನಾಡಿ, ಕೇವಲ ಮೂವರಿಂದ ಶುರುವಾದ ರೋಟರಿ ಸಂಸ್ಥೆಯು ಇಂದು ಜಗತ್ತಿನ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿದೆ. ಭಾರತದಲ್ಲೇ 3 ಸಾವಿರಕ್ಕೂ ಹೆಚ್ಚು ರೋಟರಿ ಕ್ಲಬ್‍ಗಳು ಕೆಲಸ ಮಾಡುತ್ತಿವೆ. ಭಾರತವು ಪೆÇೀಲಿಯೊ ಮುಕ್ತವಾಗುವಲ್ಲಿ ರೋಟರಿ ಸಂಸ್ಥೆ ವಹಿಸಿರುವ ಪಾತ್ರ ಪ್ರಮುಖ ಮತ್ತು ಸ್ಮರಣೀಯವಾಗಿದೆ ಎಂದರು.

ರೋಟರಿ ಕ್ಲಬ್ ನೂತನ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಬರುವ ಒಂದು ವರ್ಷದ ತಮ್ಮ ಅವಧಿಯಲ್ಲಿ ಕೈಗೊಳ್ಳಲು ಉz್ದÉೀಶಿಸಿರುವ ಕಾರ್ಯ ಯೋಜನೆಗಳನ್ನು ವಿವರಿಸಿದರು.

ಪ್ರಮುಖರಾದ ಅಮರನಾಥ ಡೊಳ್ಳಿ, ಬಸವಕುಮಾರ ಪಾಟೀಲ, ಮಂಜುಳಾ ಮೂಲಗೆ, ಜ್ಯೋತ್ಸ್ನಾ ದೇಶಮುಖ, ಪ್ರಕಾಶ ಟೊಣ್ಣೆ, ರವಿ ಮೂಲಗೆ, ಡಾ. ರಾಜಶೇಖರ ಪಾಟೀಲ, ಜಹೀರ್ ಅನ್ವರ್, ಸುಮೀತ್ ಸಿಂದೋಲ್ ಇದ್ದರು.
ಇದಕ್ಕೂ ಮುನ್ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಆವರಣದಲ್ಲಿ ಕ್ಲಬ್ ವತಿಯಿಂದ ಸಸಿಗಳನ್ನು ನೆಡಲಾಯಿತು.

ಅಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ ಪದಗ್ರಹಣ

ಬೀದರ್: ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ, ಕಾರ್ಯದರ್ಶಿಯಾಗಿ ರಂಜೀತ ಪಾಟೀಲ ಪದಗ್ರಹಣ ಮಾಡಿದರು. ಹಾವಶೆಟ್ಟಿ ಅವರು ಎರಡನೇ ಸಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆಯಾಗಿ ಭಾರತಿ ಚನ್ನಶೆಟ್ಟಿ, ಕಾರ್ಯದರ್ಶಿಯಾಗಿ ಸುನೈನಾ ಗುತ್ತಿ ಅಧಿಕಾರ ವಹಿಸಿಕೊಂಡರು. ನಾಗೇಂದ್ರ ನಿಟ್ಟೂರೆ, ಉಜ್ವಲಾ ಟೊಣ್ಣೆ ಅವರು ಪದಗ್ರಹಣ ಅಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.