ಸೋಮವಾರ, ಫೆಬ್ರವರಿ 17, 2020
27 °C
ಶಾಹೀನ್ ಸಂಸ್ಥೆಯ ವಿರುದ್ಧದ ಪ್ರಕರಣ ಹಿಂಪಡೆಯಲು ಶಾಸಕರ ಆಗ್ರಹ

ಜನರ ಧ್ವನಿ ಹತ್ತಿಕ್ಕುವ ಯತ್ನ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸಿಎಎ, ಎನ್‍ಆರ್‌ಸಿ ಹಾಗೂ ಎನ್‍ಪಿಆರ್‌ಗೆ ವಿರೋಧಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಜನರ ಧ್ವನಿ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ’ ಎಂದು ಶಾಸಕರಾದ ಬಿ.ನಾರಾಯಣರಾವ್, ರಹೀಂಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಆರೋಪಿಸಿದ್ದಾರೆ.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‌ಸಿ ಹಾಗೂ ಎನ್‍ಪಿಆರ್‌ಗೆ ಇಡೀ ದೇಶದಲ್ಲಿ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗುತ್ತಿದೆ. ಈ ಕಾಯ್ದೆಗಳು ಪ್ರಜಾಪ್ರಭುತ್ವ ಹಾಗೂ ಜನಹಿತಕ್ಕೆ ವಿರುದ್ಧವಾಗಿರುವುದು ಜನರ ವಿರೋಧಕ್ಕೆ ಕಾರಣವಾಗಿದೆ’ ಎಂದು ತಿಳಿಸಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಇಷ್ಟವಾಗದ ಹಾಗೂ ಜನಹಿತಕ್ಕೆ ಮಾರಕವಾದ ಕಾಯ್ದೆ ಗಳನ್ನು ವಿರೋಧಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗಿದೆ. ಅದರಂತೆ ಈಗ ಸಿಎಎ, ಎನ್‍ಆರ್‌ಸಿ ಹಾಗೂ ಎನ್‍ಪಿಆರ್ ವಿರೋಧಿಸಿ ರ‍್ಯಾಲಿ ಹಾಗೂ ಸಮಾವೇಶಗಳನ್ನು ಆಯೋಜಿ ಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿತ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಕಾಯ್ದೆಗಳನ್ನು ವಿರೋಧಿಸುವವರ ವಿರುದ್ಧ ದೇಶದ್ರೋಹ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಿ ಜನರ ಧ್ವನಿ ಅಡಗಿಸಲು ಪ್ರಯತ್ನಿ ಸಲಾಗುತ್ತಿದೆ ಎಂದು ದೂರಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆ ಜಾತ್ಯತೀತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಹಿಂದೂ, ಮುಸ್ಲಿಂ, ಸಿಖ್‌, ಜೈನ, ಪಾರ್ಸಿ ಸೇರಿದಂತೆ ಸಮುದಾಯಗಳ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಶಕಗಳ ಅವಧಿಯಲ್ಲಿ ಸಂಸ್ಥೆಯಲ್ಲಿ ಯಾರದೇ ಧಾರ್ಮಿಕ ಭಾವನೆಗಳಿಗೆ ಅಥವಾ ದೇಶದ ಗೌರವಕ್ಕೆ ಧಕ್ಕೆ ಉಂಟು ಮಾಡುವ ಒಂದೇ ಒಂದು ಘಟನೆ ನಡೆದ ಉದಾಹರಣೆಗಳಿಲ್ಲ ಎಂದು ತಿಳಿಸಿದ್ದಾರೆ.

ಇದೀಗ, ಸಿಎಎಗೆ ವಿರೋಧಿಸಿ ಮಕ್ಕಳು ನಾಟಕ ಪ್ರದರ್ಶಿಸಿದ್ದನ್ನು ಮುಂದೆ ಮಾಡಿಕೊಂಡು ಅಲ್ಪಸಂಖ್ಯಾತ ಸಂಸ್ಥೆಯೊಂದರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಹೂಡಿರುವ ದೇಶದ್ರೋಹ ಸೇರಿದಂತೆ ಎಲ್ಲ ಪ್ರಕರಣವನ್ನು ಕೈಬಿಡಬೇಕು. ಸರ್ಕಾರ, ಜನರ ಸ್ವಾತಂತ್ರ್ಯಗಳ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)