ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಕೋವಿಡ್‌-19 ನಿಯಂತ್ರಣಕ್ಕೆ ಡಾ.ಸೋಹೆಲ್‌ ಬಿಡುವಿಲ್ಲದ ಹೋರಾಟ

Last Updated 30 ಜೂನ್ 2020, 18:30 IST
ಅಕ್ಷರ ಗಾತ್ರ

ಬೀದರ್: ಮಾರ್ಚ್‌ ಮೂರನೇ ವಾರ ಬೀದರ್‌ನಲ್ಲಿ ಮೊದಲ ಬಾರಿಗೆ ವೃದ್ಧರೊಬ್ಬರಿಗೆ ಕೋವಿಡ್ –19 ದೃಢಪಟ್ಟಿತು. ಓಲ್ಡ್‌ಸಿಟಿಯ ನೂರು ಹಾಸಿಗೆಗಳ ತಾಯಿ, ಮಗು ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಸೋಹೆಲ್‌ ಹುಸೇನ್ ಅವರು ಅಂದು ಆರಂಭಿಸಿದ ಕೊರೊನಾ ಸೋಂಕಿನ ವಿರುದ್ಧದ ಹೋರಾಟವನ್ನು ಇಂದಿಗೂ ಬಿಡುವಿಲ್ಲದಂತೆ ಮುಂದುವರಿಸಿದ್ದಾರೆ.

ಬ್ರಿಮ್ಸ್‌ನ 250 ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಹತ್ತು ವೈದ್ಯರು ನಗರದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ.ಸೋಹೆಲ್‌ ಹುಸೇನ್ ಜನ ಸೇವೆಯ ಆಸಕ್ತಿಯಿಂದ ಕೋವಿಡ್ –19 ಪೀಡಿತರಿಗೆ ಚಿಕಿತ್ಸೆ ನೀಡಲು ಒಲವು ತೋರಿದರು. ಇವರಿಗೆ ಜಿಲ್ಲಾಡಳಿತ ಬೆಂಬಲವನ್ನೂ ನೀಡಿತು. ಮಾರಕ ರೋಗವನ್ನು ಸವಾಲಾಗಿ ಸ್ವೀಕರಿಸಿ ಸಕಾಲದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿ ಹರ್ಷದಿಂದ ಮನೆಗೆ ಕಳಿಸುವ ಮೂಲಕ ವೃತ್ತಿ ಧರ್ಮವನ್ನು ನಿಭಾಯಿಸಿದ್ದಾರೆ.

ಅವರ ಪತ್ನಿ ಡಾ.ಸುಮಯ್ಯ ಫಾತಿಮಾ ಅವರೂ ಸ್ತ್ರೀರೋಗ ತಜ್ಞೆಯಾಗಿದ್ದಾರೆ. ಡಾ.ಸೋಹೆಲ್‌ ದಂಪತಿಗೆ ಆರು ವರ್ಷದ ಝೋಹಿಬಾ ಸೈಯ್ಯಾನ್ ಹಾಗೂ ಮೂರು ವರ್ಷದ ಅರ್ಫಾ ತಹರೀಮ್ ಹೆಸರಿನ ಇಬ್ಬರು ಮಕ್ಕಳು ಇದ್ದಾರೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪತ್ನಿ ವಹಿಸಿಕೊಂಡಿದ್ದಾರೆ. ಡಾ.ಸೋಹೆಲ್ ಹುಸೇನ್ ಅವರು ಮೂರು ತಿಂಗಳ ಅವಧಿಯಲ್ಲಿ ಓಲ್ಡ್‌ಸಿಟಿಯ ಕಂಟೇನ್ಮೆಂಟ್‌ ಝೋನ್‌ನಲ್ಲಿ ನಿರಂತರವಾಗಿ ಸಂಚರಿಸಿ ಪ್ರತಿಯೊಂದು ರೋಗಿಯ ಮೇಲೆ ನಿಗಾ ಇಟ್ಟು ಸೋಂಕು ಸಮುದಾಯಕ್ಕೆ ಹರಡದಂತೆ ನೋಡಿಕೊಂಡರು. ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿರುವ ಅಲ್ಲಿ ಸಮುದಾಯವರಿಗೆ ತಿಳಿವಳಿಕೆ ಕೊಟ್ಟು ಎಂಟು ಸಾವಿರ ಜನರ ಕೋವಿಡ್ 19 ಪರೀಕ್ಷೆ ಮಾಡಿಸಿದ್ದಾರೆ.

‘ಮಾರ್ಚ್‌ 19 ರಿಂದ ಮೇ 19ರ ವರೆಗೂ ನಿದ್ದೆಗೆಟ್ಟು ಕೆಲಸ ಮಾಡಬೇಕಾಯಿತು. ಒಂದೊಮ್ಮೆ ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ಓಲ್ಡ್‌ಸಿಟಿಯ ರೋಗಿಗೆ ಕೋವಿಡ್‌ ಸೋಂಕು ಇರುವ ಮಾಹಿತಿ ದೊರಕುತ್ತಿತ್ತು. ಒಂದು ಕ್ಷಣವೂ ವಿಳಂಬ ಮಾಡದೆ ಅವರನ್ನು ಆಸ್ಪತ್ರೆಗೆ ಕರೆಸಿಕೊಳ್ಳುತ್ತಿದ್ದೆ. ಇದೇ ಕಾರಣಕ್ಕೆ ನನಗೆ 27 ದಿನಗಳ ವರೆಗೆ ಮನೆಗೆ ಬರಲು ಸಾಧ್ಯವಾಗಿರಲಿಲ್ಲ’ ಎಂದು ಡಾ.ಸೋಹೆಲ್ ತಿಳಿಸಿದರು.

‘ನಂತರ ನಾನು ಮನೆಗೆ ಬಂದಾಗ ನನ್ನನ್ನು ಅಪ್ಪಿಕೊಳ್ಳಲು ಮಕ್ಕಳು ಓಡಿ ಬರುತ್ತಿದ್ದರು. ಮಕ್ಕಳನ್ನು ಗದರಿಸಿ ದೂರ ಇರುವಂತೆ ಸೂಚಿಸುತ್ತಿದ್ದೆ. ಇದೇ ಕಾರಣಕ್ಕೆ ಈಗ ಮಕ್ಕಳು ನನ್ನ ಬಳಿ ಬರಲು ಸ್ವಲ್ಪ ಹಿಂಜರಿಯುತ್ತಿದ್ದಾರೆ. ನನಗೆ ಮನೆ ಅಷ್ಟೇ ಅಲ್ಲ: ಸಾಮಾಜಿಕ ಜವಾಬ್ದಾರಿಯೂ ಇದೆ’ ಎಂದು ಹೇಳಿ ಕರ್ತವ್ಯ ಪ್ರಜ್ಞೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT