ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್: ಎಸ್‌ಟಿಗೆ ಸೇರಿಸಲು ಆಗ್ರಹಿಸಿ ಪ್ರಣಾವನಂದ ಸ್ವಾಮೀಜಿ ನೇತೃತ್ವದಲ್ಲಿ ಉಪವಾಸ

Published 27 ಡಿಸೆಂಬರ್ 2023, 15:37 IST
Last Updated 27 ಡಿಸೆಂಬರ್ 2023, 15:37 IST
ಅಕ್ಷರ ಗಾತ್ರ

ಬೀದರ್‌: ಆರ್ಯ ಈಡಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಬೇಕು ಎಂದು ಆಗ್ರಹಿಸಿ ಚಿತ್ತಾಪುರ ಕರದಾಳ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣಾವನಂದ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘದವರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಂತರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಹಿಂದಿನ ಸರ್ಕಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನಕ್ಕೆ ₹25 ಲಕ್ಷ ಮೀಸಲಿಟ್ಟಿತ್ತು. ಅದನ್ನು ಬಳಸಿಕೊಂಡು ಅಧ್ಯಯನ ಮುಗಿಸಿ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹500 ಕೋಟಿ ಬಿಡುಗಡೆಗೊಳಿಸಬೇಕು. ಸಮಾಜದವರು ಕುಲ ಕಸುಬು ಬಿಟ್ಟಿದ್ದಾರೆ. ಅವರ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು. 

ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರ ಹೆಸರಿನಲ್ಲಿ ಸಮಾಜದವರು ಬದುಕು ನಡೆಸುತ್ತಿದ್ದಾರೆ. ನಿರ್ಗತಿಕರಿಗೆ ನಿವೇಶನ, ಮನೆ ಮಂಜೂರು ಮಾಡಬೇಕು. ಬೆಂಗಳೂರಿನಲ್ಲಿ  ವಿಧಾನಸೌಧದ ಎದುರು ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆ ಸ್ಥಾಪಿಸಬೇಕು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರೊಂದಿಗೆ ಅನುಭವ ಮಂಟಪದಲ್ಲಿದ್ದ ಶರಣ ಹೆಂಡದ ಮಾರಯ್ಯ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು. ಶಿವಮೊಗ್ಗದ ವಿಮಾನ ನಿಲ್ದಾಣ ಹಾಗೂ ದೇವದುರ್ಗದ ಕೆರೆಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹೆಸರಿಡಬೇಕು. ಸ್ವಯಂ ಉದ್ಯೋಗಕ್ಕಾಗಿ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಬೇಕು. ಸಮಾಜದ ಯುವಕರಿಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಐಎಎಸ್‌/ಐಪಿಎಸ್‌ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಮದ್ಯ ಮಾರಾಟದಲ್ಲಿ ಸಮಾಜಕ್ಕೆ ಶೇ 20ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ, ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಾಜಿ ತೇಲಂಗ, ಹುಮನಾಬಾದ್‌ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ತೇಲಂಗ ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT