ಮಂಗಳವಾರ, ಜನವರಿ 18, 2022
15 °C
ಬಂಧು ಬಳಗದೊಂದಿಗೆ ಭೋಜನ; ತೋಟದಲ್ಲಿ ಜೋಕಾಲಿ ಆಡಿ ನಲಿದ ಮಕ್ಕಳು

ಭೂಮಿತಾಯಿಗೆ ಎಳ್ಳ ಅಮಾವಾಸ್ಯೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಾದ್ಯಂತ ಸಂಭ್ರಮ ಸಡಗರದೊಂದಿಗೆ ಎಳ್ಳ ಅಮಾವಾಸ್ಯೆ ಆಚರಿಸಲಾಯಿತು. ರೈತರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಭೂದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹೊಲದ ಅಂಚಿನಲ್ಲಿ ಜೋಳದ ಕಣಿಕೆಯಿಂದ ಕೊಂಪೆ ಸಿದ್ಧಪಡಿಸಿ ಅದರ ಮೇಲೆ ಹೊಸ ಬಟ್ಟೆಯನ್ನು ಸುತ್ತಿ ಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳಿಗೆ ಪೂಜೆ ಸಲ್ಲಿಸಿದರು. ಕೋವಿಡ್‌ ತೊಲಗಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗೆ ಪ್ರಾರ್ಥಿಸಿ ದೇವರಿಗೆ ಆರತಿ ಬೆಳಗಿದರು. ನಂತರ ಸಾಮೂಹಿಕ ಭೋಜನ ಮಾಡಿದರು.

ಮಹಿಳೆಯರು ಜನಪದ ಹಾಡುಗಳನ್ನು ಹಾಡಿ ಸಂಭ್ರಮಿಸಿದರೆ, ಮಕ್ಕಳು ಮರಗಳಿಗೆ ಕಟ್ಟಿದ್ದ ಜೋಕಾಲಿಗಳಲ್ಲಿ ಉಯ್ಯಾಲೆ ಆಡಿದರು. ಕಮಠಾಣಾದ ಪ್ರಗತಿಪರ ರೈತ ವೈಜನಾಥ ಅವರ ಮಾವಿನ ತೋಟದಲ್ಲಿ ಮಕ್ಕಳು ಆಟ ಆಡಿ ಸಂಭ್ರಮಿಸಿದರು. ಬಹುತೇಕರು ದಿನವಿಡೀ ಹೊಲದಲ್ಲೇ ಸಮಯ ಕಳೆದರು.

ನಗರ ಪ್ರದೇಶದ ಜನ ಉದ್ಯಾನ ಹಾಗೂ ಗೆಳೆಯರ ತೋಟಗಳಿಗೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಭೋಜನ ಮಾಡಿದರು. ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ ಚಟ್ನಿ, ಮೊಸರು ಹಾಗೂ ಶೇಂಗಾ ಹೋಳಿಗೆ ಸೇವಿಸಿದರು.

ಕೆಲ ಸರ್ಕಾರಿ ಅಧಿಕಾರಿಗಳು ಹಾಗೂ ವೈದ್ಯರು ಸಹ ಈ ಬಾರಿ ರೈತರ ಹೊಲಗಳಿಗೆ ತೆರಳಿ ಒಂದಿಷ್ಟು ಸಮಯವನ್ನು ಕುಟುಂಬದ ಸದಸ್ಯರು ಹಾಗೂ ಗೆಳೆಯರೊಂದಿಗೆ ಕಳೆದರು. ಸಾಮೂಹಿಕ ಭೋಜನ ಮಾಡಿ ಸಂತಸ ಹಂಚಿಕೊಂಡರು.

ಖಟಕಚಿಂಚೋಳಿ: ಜಮೀನುಗಳಲ್ಲಿ ಸಂಭ್ರಮ

ಖಟಕಚಿಂಚೋಳಿ: ಹೋಬಳಿಯ ಚಳಕಾಪುರ, ದಾಡಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಭಾನುವಾರ ಸಡಗರ, ಸಂಭ್ರಮದಿಂದ ಎಳ್ಳ ಅಮಾವಾಸ್ಯೆ ಹಬ್ಬವನ್ನು ಆಚರಿಸಲಾಯಿತು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಹರಡುವಿಕೆಯಿಂದ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಆಗಿರಲಿಲ್ಲ. ಈ ವರ್ಷ ಕೋವಿಡ್ ಹರಡುವಿಕೆ ಕಡಿಮೆಯಾಗಿರುವುದರಿಂದ ಎಲ್ಲರ ಮೊಗದಲ್ಲಿ ಸಂತಸ ಮೂಡಿಸಿದೆ. ಅಲ್ಲದೇ ವರ್ಷದ ಮೊದಲ ಹಬ್ಬ ಇದಾಗಿರುವುದರಿಂದ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಹೋಬಳಿಯ ನೆಲವಾಡ, ಮದಕಟ್ಟಿ, ದಾಡಗಿ, ಡಾವರಗಾಂವ್ ಎಣಕೂರ ಸೇರಿದಂತೆ ವಿವಿಧೆಡೆ ರೈತರು ರೊಟ್ಟಿಯ ಗಂಟು ಕಟ್ಟಿಕೊಂಡು ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಎಳ್ಳ ಅಮಾವಾಸ್ಯೆಯನ್ನು ಆಚರಿಸಿದರು.

ರೈತರು ಬಂಧುಗಳು ಹಾಗೂ ಸ್ನೇಹಿತರನ್ನು ತಮ್ಮ ಹೊಲಕ್ಕೆ ಊಟಕ್ಕೆ ಆಹ್ವಾನಿಸಿದರು. ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ಅನ್ನ, ಶೇಂಗಾ ಚಟ್ನಿ, ಕರ್ಚಿಕಾಯಿ, ಅಂಬಲಿ ಮೊದಲಾದ ಖಾದ್ಯಗಳನ್ನು ಉಣಬಡಿಸಿದರು.

ಗೆಳೆಯರು, ಮಕ್ಕಳು ಸೇರಿ ಹೊಲದಲ್ಲಿ ಗಾಳಿಪಟ ಹಾರಿಸಿದರು. ಮಹಿಳೆಯರು ಜೋಕಾಲಿ ಆಡಿ ಸಂಭ್ರಮಿಸಿದರು. ಬರದ ನಡುವೆಯೂ ರೈತರ ಸಂಭ್ರಮ ಮುಗಿಲು ಮುಟ್ಟಿತ್ತು.

ಹಿಂಗಾರು ಹಂಗಾಮಿನಲ್ಲಿ ಮಳೆ, ಬೆಳೆ ಎರಡೂ ಕೈಕೊಟ್ಟಿದ್ದನ್ನು ಸ್ಮರಿಸುತ್ತ ಬರುವ ದಿನಗಳಲ್ಲಾದರೂ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಬೆಳೆಯುವಂತೆ ಕರುಣಿಸು ಎಂದು ದೇವರಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರು.

ನಗರಪ್ರದೇಶದಲ್ಲಿ ವಾಸವಾಗಿರುವ ಕೆಲ ಕುಟುಂಬ ಸದಸ್ಯರು ಅಂಗಡಿಗಳಲ್ಲಿ ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ ಚಟ್ನಿ, ಮೊಸರು, ಶೇಂಗಾ-ಎಳ್ಳಿನ ಹೋಳಿಗೆ ಖರೀದಿಸಿಕೊಂಡು ಕಾರಿನಲ್ಲಿ ಹೊಲಗಳಿಗೆ ತೆರಳಿ ದೇಸಿ ಊಟ ಮಾಡಿ ಮಕ್ಕಳೊಂದಿಗೆ ಸಮಯ ಕಳೆದರು.

ಬಸವಕಲ್ಯಾಣ: ಎಲ್ಲೆಡೆ ಸಂಭ್ರಮದ ಎಳ್ಳ ಅಮಾವಾಸ್ಯೆ

ಬಸವಕಲ್ಯಾಣ: ತಾಲ್ಲೂಕಿನ ಎಲ್ಲೆಡೆ ಭಾನುವಾರ ಎಳ್ಳ ಅಮಾವಾಸ್ಯೆ ಸಂಭ್ರಮದಿಂದ ಆಚರಿಸಲಾಯಿತು.

ರೈತರು ಹೊಲಗಳಿಗೆ ಹೋಗಿ ಪಾಂಡವರ ಪೂಜೆ ನೆರವೇರಿಸಿ ಚರಗ ಚೆಲ್ಲಿ ಭೋಜನ ಸವಿದರು. ಭಜ್ಜಿ, ಜೋಳದ ಹಾಗೂ ಸಜ್ಜೆಯ ಕಟಕ್ ರೊಟ್ಟಿ, ಅನ್ನ, ಸಾಂಬಾರು, ಹುಗ್ಗಿ, ಕಡಬು, ಅಂಬಲಿಯ ಊಟ ಸವಿಯಲಾಯಿತು.

ಹೊಲಗಳಿಗೆ ಕೆಲವರು ಎತ್ತಿನ ಬಂಡಿಯಲ್ಲಿಯೂ ಬಂದಿದ್ದರು. ಅನೇಕರು ಬೈಕ್, ಕಾರುಗಳನ್ನು ತೆಗೆದುಕೊಂಡು ಹೊಲಕ್ಕೆ ಹೋಗಿ ಎಳ್ಳ ಅಮಾವಾಸ್ಯೆ ಆಚರಿಸಿದರು. ಹೀಗಾಗಿ ಹೊಲಗಳ ಬದುಗಳಲ್ಲಿ ಮತ್ತು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡು ಬಂತು. ಕುಟುಂಬದವರು ಅಷ್ಟೇ ಅಲ್ಲ, ಸ್ನೇಹಿತರು, ನೆಂಟರಿಷ್ಟರನ್ನು ಆಹ್ವಾನಿಸಿ ಭೋಜನ ಏರ್ಪಡಿಸಲಾಗಿತ್ತು. ಊಟದ ನಂತರ ಯುವಕರು ಕಡಲೆ, ಕಬ್ಬು ಕೂಡ ತಿಂದರು. ಕೆಲವರು ಜೇನುಗಳನ್ನು ಹುಡುಕಿ ತಂದು ಅದರ ರುಚಿಯೂ ಸವಿದರು.

ಕೋವಿಡ್ ಕಾರಣ ಎರಡು ವರ್ಷಗಳಿಂದ ಎಳ್ಳ ಅಮಾವಾಸ್ಯೆ ಸರಿಯಾಗಿ ಆಚರಿಸಿರಲಿಲ್ಲ. ಆದರೆ, ಈ ವರ್ಷ ಬಹಳಷ್ಟು ಜನರು ಹಬ್ಬ ಆಚರಿಸಿದರು. ನಗರದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಇಟ್ಟು ವ್ಯಾಪಾರಿಗಳು ಹಬ್ಬ ಆಚರಿಸಲು ಹೊಲಗಳಿಗೆ ಹೋಗಿದ್ದರಿಂದ ಎಲ್ಲೆಡೆ ಬಂದ್ ವಾತಾವರಣ ಇತ್ತು.

ಭಾಲ್ಕಿ: ಲಕ್ಷ್ಮಿ, ಪಾಂಡವರಿಗೆ ಪೂಜೆ

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಭಾನುವಾರ ಸಂಭ್ರಮ, ಸಡಗರದಿಂದ ರೈತರು, ಸಾರ್ವಜನಿಕರು ಎಳ್ಳ ಅಮಾವಾಸ್ಯೆ ಆಚರಿಸಿದರು.

ಹಬ್ಬದ ಸಂಪ್ರದಾಯದಂತೆ ತರಹೇವಾರಿ ಭಕ್ಷ, ಭೋಜನದ ಬುತ್ತಿಯೊಂದಿಗೆ ಎತ್ತಿನ ಬಂಡಿ, ಕಾರು, ಬೈಕ್‌ಗಳಲ್ಲಿ ಜಮೀನುಗಳಿಗೆ ತೆರಳಿದ ರೈತರು ಲಕ್ಷ್ಮಿ ಹಾಗೂ ಪಾಂಡವರಿಗೆ ಪೂಜೆ ಸಲ್ಲಿಸಿ, ಹೊಲದಲ್ಲಿ ‘ಓಲಗ್ಯಾ, ಓಲಗ್ಯಾ ಚೆಲ್ಲಂ ಪೋಲಗ್ಯಾ’ ಎಂದು ಕೂಗುತ್ತಾ ಚರಗಾ ಚೆಲ್ಲಿದರು.

ಬಳಿಕ, ನೆಂಟರು, ಸ್ನೇಹಿತರೊ ಡಗೂಡಿ ಹಸಿರು ಪರಿಸರದಲ್ಲಿ ಹಬ್ಬದ ವಿಶೇಷ ಖಾದ್ಯವಾದ ಭಜ್ಜಿ, ಕಡಬು, ಹೋಳಿಗೆ, ಹುಗ್ಗಿ, ಅಂಬಲಿ, ಸಜ್ಜೆ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಅನ್ನ, ಸಾರು, ಹೀಗೆ ವಿವಿಧ ನಮೂನೆಯ ಭೋಜನ ಸವಿದರು. ಊಟದ ಬಳಿಕ ಕೆಲ ಕಡೆ ಮಹಿಳೆಯರು, ಯುವತಿಯರು, ಮಕ್ಕಳು ಜೋಕಾಲಿಯಾಡಿದರೆ, ಗಂಡಸರು ಕಬ್ಬಡ್ಡಿ ಆಟವಾಡಿದರು. ತಾಲ್ಲೂಕಿನ ಕೆಲವೆಡೆಯ ಯುವಕರು ಗಾಳಿಪಟವನ್ನೂ ಹಾರಿಸಿ ಸಂಭ್ರಮಿಸಿದರು.

ಚಿಟಗುಪ್ಪ ವರದಿ:

ಚಿಟಗುಪ್ಪ: ಕಲ್ಯಾಣ ಕರ್ಣಾಟಕದ ರೈತಾಪಿ ವರ್ಗದವರ ಮುಖ್ಯ ಹಬ್ಬ ಎಳ್ಳ ಅಮಾವಾಸ್ಯೆಯನ್ನು ಭಾನುವಾರ ತಾಲ್ಲೂಕಿನಾದ್ಯಂತ ರೈತರು ಸಂಭ್ರಮದಿಂದ ಆಚರಿಸಿದರು.

ತಾಲ್ಲೂಕಿನ ನಿರ್ಣಾ, ಬೇಮಳಖೇಡಾ, ಚಾಂಗಲೇರಾ, ತಾಳಮಡಗಿ, ಶಾಮತಾಬಾದ್‌, ಬೆಳಕೇರಾ, ಕಂದಗೂಳ, ಕುಡಂಬಲ್‌ ವಿವಿಧೆಡೆ ರೈತರು ಬೆಳಿಗ್ಗೆಯಿಂದಲೇ ಹಬ್ಬದ ಸಂಭ್ರಮದಲ್ಲಿದ್ದರು. ಹಬ್ಬದ ನಿಮಿತ್ತ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು, ಕೆಲವರು ಎತ್ತಿನ ಗಾಡಿ, ಹಲವರು ಆಟೋಗಳಲ್ಲಿ ಕುಳಿತು ಜಮೀನಿಗೆ ತೆರಳಿದರು.

ಕುಟುಂಬದ ಹೆಣ್ಣು ಮಕ್ಕಳು ಜೋಳದ, ಕಡಲೆ ಹೊಲದಲ್ಲಿ ಬನ್ನಿ ಮರಕ್ಕೆ ಹಾಗೂ ಪಾಂಡವರಿಗೆ ಪೂಜೆ ಸಲ್ಲಿಸಿ, ಭೂ ಮಾತೆಗೆ ಸೀರೆ ಅರ್ಪಿಸಿದರು. ತಾವು ತಂದಿದ್ದ ಬಾನ, ಕಡಬು, ಭಜ್ಜಿ, ಅಂಬಲಿಗಳ ನೈವೇದ್ಯವನ್ನು ಬೆಳೆಗಳಿಗೆ ಚೆಲ್ಲುವ ಮೂಲಕ ಚರಗದ ಹಬ್ಬ ಆಚರಿಸಿದರು.

ನಂತರ ಎಲ್ಲರೂ ಮರದ ಕೆಳಗೆ ಕುಳಿತು ಹಬ್ಬಕ್ಕಾಗಿಯೇ ತಯಾರಿಸಿದ ಸಜ್ಜೆ ಗಡಬು, ಭರ್ತ, ಭಜ್ಜಿ, ಪುಂಡಿಪಲ್ಲೆ, ಹೋಳಿಗೆ, ಖಡಕ್ ರೊಟ್ಟಿ, ಶೇಂಗಾ ಹಿಂಡಿ, ಶಾವಿಗೆ ಪಾಯಸ, ಅನ್ನ- ಸಾಂಬರ್, ಹಪ್ಪಳ—ಸೆಂಡಿಗೆ, ಈರುಳ್ಳಿ ಎಲೆಯ ಚಟ್ನಿ ಹೀಗೆ ಬಾಯಲ್ಲಿ ನೀರೂರಿಸುವ ಭೋಜನವನ್ನು ಮನೆಯವರು, ಸಂಬಂಧಿಗಳು ಮತ್ತು ಸ್ನೇಹಿತರೊಂದಿಗೆ ಸವಿದು ವಿಶಿಷ್ಟವಾಗಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಿದರು.

ಪಾಂಡವರ ಪೂಜೆ: ಮಹಾಭಾರತದಲ್ಲಿ ಪಾಂಡವರು, ಕೌರವರ ಮೇಲೆ ಯುದ್ಧ ಮಾಡಲು ಹೊರಟಾಗ ಮಾರ್ಗಮಧ್ಯೆ ಹೊಲ ಕಾಣುತ್ತದೆ. ಪಾಂಡವರೆಲ್ಲರೂ ಹೊಲದ ಹತ್ತಿರ ಹೋದಾಗ ಬನ್ನಿ ಮರ ಇರುತ್ತದೆ. ಆ ಮರಕ್ಕೆ ಪೂಜೆ ಸಲ್ಲಿಸುವ ಪಾಂಡವರು, ತಾವು ತಂದಿದ್ದ ಆಹಾರವನ್ನು ಹೊಲದ ತುಂಬೆಲ್ಲ ಚೆಲ್ಲಿ, ಅಲ್ಲಿಯೇ ಊಟ ಮಾಡಿ ಯುದ್ಧಕ್ಕೆ ಹೊರಡುತ್ತಾರೆ ಎನ್ನುವ ಪ್ರತೀತಿ ಇದೆ.

ಈ ಹಿನ್ನೆಲೆಯಲ್ಲಿ ರೈತರು ತಮ್ಮ ಹೊಲಗಳಲ್ಲಿ ಐದು ಸಣ್ಣ ಕಲ್ಲುಗಳನ್ನು ಸಾಲಾಗಿ ಜೋಡಿಸಿ, ಬನ್ನಿ ಮರದ ಕೆಳಗಿಟ್ಟು ಪಾಂಡರವರೆಂದು ಪೂಜಿಸುತ್ತಾರೆ. ನಂತರ ಹೊಲದ ತುಂಬೆಲ್ಲ ಚರಗ ಚೆಲ್ಲಿ, ಗೆಳೆಯರು, ಕುಟುಂಬದವರು, ಸ್ನೇಹಿತರು ಒಟ್ಟಾಗಿ ಊಟ ಮಾಡುತ್ತಾರೆ. ಸಂಜೆ ಹೊಲದಿಂದ ಬರುವಾಗ ಜೋಳದ ಐದು ತೆನೆಗಳನ್ನು ತಂದು, ಮನೆಯ ಜಗುಲಿಯ ಮೇಲಿಟ್ಟು
ಪೂಜಿಸುತ್ತಾರೆ.

ಭಾನುವಾರ ನಾಗರಿಕರು ವ್ಯಾಪಾರಿ ವರ್ಗದವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹೊಲಗಳಿಗೆ ತೆರಳಿದ್ದರಿಂದ ಮಾರುಕಟ್ಟೆ ಬಿಕೊ ಎನ್ನುತ್ತಿತ್ತು.

ಔರಾದ್ ವರದಿ:

ಔರಾದ್: ರೈತರ ದೊಡ್ಡ ಹಬ್ಬಗಳಲ್ಲಿ ಒಂದಾದ ಎಳ್ಳ ಅಮಾವಾಸ್ಯೆಯನ್ನು ಭಾನುವಾರ ತಾಲ್ಲೂಕಿನಾದ್ಯಂತ ಸಂಭ್ರಮದದಿಂದ ಆಚರಿಸಲಾಯಿತು.

ಈ ವರ್ಷ ಉತ್ತಮ ಮಳೆಯಾಗಿ ಜೋಳ, ಕಡಲೆ, ತೊಗರಿ ಸೇರಿದಂತೆ ವಿವಿಧ ಹಿಂಗಾರು ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮಧ್ಯೆ ಎಳ್ಳ ಅಮಾವಾಸ್ಯೆ ಹಬ್ಬ ಬಂದಿರುವುದು ರೈತರಲ್ಲಿ ಖುಷಿ ತಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬೋಂತಿ ತಾಂಡಾದ ತಮ್ಮ ಹೊಲದಲ್ಲಿ ರೈತರ ಜತೆ ಎಳ್ಳ ಅಮಾವಾಸ್ಯೆ ಆಚರಿಸಿದರು. ಭೂ ಮಾತೆಗೆ ಚರಗ ಚಲ್ಲಿ (ಪೂಜೆ) ಹಬ್ಬಕ್ಕೆ ಚಾಲನೆ ನೀಡಿದರು. ನಂತರ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರನ್ನು ಭೇಟಿ ಮಾಡಿ ಎಳ್ಳ ಅಮಾವಾಸ್ಯೆ ಶುಭ ಕೋರಿದರು. ಕೆಲ ಹೊತ್ತು ಮಕ್ಕಳ ಜತೆ ಜೋಕಾಲಿ ಹಾಗೂ ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ಔರಾದ್ ಪಟ್ಟಣ: ಪಟ್ಟಣದ ಹೊರ ವಲದ ಜಿಲ್ಲಾ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಂದ್ಯಾರಾಣಿ ನರೋಟೆ, ಎಪಿಎಂಸಿ ಮಾಜಿ ಅಧ್ಯಕ್ಷ ಧೋಂಡಿಬಾ ನರೋಟೆ ಅವರ ಹೊಲದಲ್ಲಿ ಎಳ್ಳ ಅಮಾವಾಸ್ಯೆ ಆಚರಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯ ಗುಂಡಪ್ಪ ಮುದಾಳೆ, ರಾಧಾಬಾಯಿ, ಯಾದವರಾವ್ ಮೇತ್ರೆ, ಮುಖಂಡ ರಾಮ ನರೋಟೆ, ಶಿವಕುಮಾರ ಕೋರೆ, ನಾರಾಯಣ ಮುಳೆ, ದೇವಿಪ್ರಸಾದ ಘೋಡ್ಕೆ, ಸಂಜುಕುಮಾರ ಚಲವಾ ಇದ್ದರು.

ಸಾಮೂಹಿಕ ಭೋಜನ: ಎಳ್ಳ ಅಮಾವಾಸ್ಯೆ ಅಂಗವಾಗಿ ರೈತರು ತಮ್ಮ ಹೊಲಗಳಲ್ಲಿ ಸಾಮೂಹಿಕ ಭೋಜನ  ಮಾಡಿದರು. ಬಜ್ಜಿ ಮತ್ತು ವಿವಿಧ ಕಾಳಿನ ಪಲ್ಲೆ, ಹೋಳಿಗೆ, ಹುಗ್ಗಿ, ತುಪ್ಪ, ಮೊಸರು, ರೊಟ್ಟಿ, ಸಜ್ಜಿ ರೊಟ್ಟಿ ತಯಾರಿಸಿ ಆಪ್ತರು, ಬಂಧು ಮಿತ್ರರಿಗೆ ಊಟ ಬಡಿಸಿದರು.

ಬೆಳಿಗ್ಗೆ ಪಾಂಡವರು ದೇವರಿಗೆ ನೈವೇದ್ಯ ಅರ್ಪಿಸಿ ಸಾಂಪ್ರದಾಯಿಕ ಗೀತೆ ಹಾಡಿ ಬೆಳೆಗಳಿಗೆ ಪೂಜೆ ಸಲ್ಲಿಸಿದರು.
ರೈತ ಮುಖಂಡ ಗೋವಿಂದ ಇಂಗಳೆ ಅವರ ಹೊಲದಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ
ಮಾಡಲಾಯಿತು.

ಹುಮನಾಬಾದ್ ವರದಿ:

ಹುಮನಾಬಾದ್: ಎಳ್ಳ ಅಮಾವಾಸ್ಯೆ ತಾಲ್ಲೂಕಿನಾದ್ಯಂತ ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಹಳ್ಳಿಖೇಡ್.ಬಿ. ದುಬಲಗುಂಡಿ, ಹುಡಗಿ, ಘಾಟಬೋರಾಳ್, ಕುಮಾರ್ ಚಿಂಚೋಳಿ, ಹಳ್ಳಿಖೇಡ್ ಕೆ. ಸೀತಾಳಖೇರಾ, ಮೋಳಕೇರಾ, ನಿಂಬೂರ್, ನಂದಗಾಂವ ಗ್ರಾಮಗಳು ಸೇರಿದಂತೆ ತಾಲ್ಲೂಕಿನ ವಿವಿಧೆಡೆ ರೈತ ಕುಟುಂಬಗಳು ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಬದನೆಕಾಯಿ ಪಲ್ಯಾ, ಖಡಕ್‌ ರೊಟ್ಟಿ, ಕಡಬು, ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಬಜ್ಜಿ, ಅಂಬಲಿ ಸೇರಿದಂತೆ ಇನ್ನು ವಿವಿಧ ಬಗೆ ಬಗೆಯ ತಿಂಡಿಗಳನ್ನು ಮಾಡಿಕೊಂಡು, ತಮ್ಮ ಬಂಧು ಮಿತ್ರರೊಂದಿಗೆ ಹೊಲಗಳಿಗೆ ತೆರಳಿದರು.

ಜೋಳ ಮತ್ತು ಕಡಲೆ ಬೆಳೆಯ ಹೊಲದಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ನಂತರ ಜಮೀನು ತುಂಬೆಲ್ಲಾ ಸುತ್ತಾಡಿ ಚೆರಗ ಚೆಲ್ಲಿ ಭೂತಾಯ ಕೃಪೆಗೆ ಪಾತ್ರರಾದರು.

ಕಮಲನಗರ ವರದಿ

ಕಮಲನಗರ: ತಾಲ್ಲೂಕಿನ ದಾಬಕಾ, ಕಮಲನಗರ ಮುರ್ಕಿ, ಹಕ್ಯಾಳ, ಹೊಳಸಮುದ್ರ, ಹಾಲಹಳ್ಳಿ, ಡಿಗ್ಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಲಾಯಿತು.

ರೈತರು ಪಾಂಡವರ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಿ ಸಾಂಪ್ರದಾಯಿಕ ಗೀತೆ ಹಾಡಿ ಬೆಳೆಗೆ ಪೂಜೆ ಸಲ್ಲಿಸಿದರು

ಮನೆಯಿಂದ ತಂದಿದ್ದ ಭಜ್ಜಿ ಮತ್ತು ವಿವಿಧ ಕಾಳಿನ ಪಲ್ಲೆ, ಹುಗ್ಗಿ, ತುಪ್ಪ, ಜೋಳದ ಅನ್ನ, ಅಂಬಲಿ, ರೊಟ್ಟಿ, ಸಜ್ಜಿ ರೊಟ್ಟಿ ಊಟವನ್ನು ಸವಿದರು.

ಸಚಿವ ಪ್ರಭು ಚವಾಣ್ ಹಾಗೂ ಬೆಂಬಲಿಗರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಕಾರ್ಯಕರ್ತರ ಹೊಲಗಳಿಗೆ ಭೇಟಿ ನೀಡಿ ಎಳ್ಳ ಅಮಾವಾಸ್ಯೆ ಹಬ್ಬದಲ್ಲಿ ಪಾಲ್ಗೊಂಡು ರೈತರ ಕುಶಲೋಪರಿ ವಿಚಾರಿಸಿ ಸಂಭ್ರಮಿಸಿದರು.

ಎಳ್ಳ ಅಮಾವಾಸ್ಯೆ ಹಬ್ಬದ ವೇಳೆ ಹೊಲದಲ್ಲಿ ಕಡಲೆ, ಜೋಳ, ಕುಸುಬೆ, ಅವರೆ ಬೆಳೆ ವಿಫುಲವಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಅದ್ಯಾವುದು ಇಂದು ಹೊಲದಲ್ಲಿ ಕಾಣುತ್ತಿಲ್ಲ. ಸಂಪ್ರದಾಯ ಮುರಿದು ಹೋಗಬಾರದು ಎಂಬ ಕಾರಣಕ್ಕೆ ಒಣತೊಗರಿ ಹೊಲದಲ್ಲಿ, ಕಬ್ಬಿನ ಗದ್ದೆಯಲ್ಲಿ ಎಳ್ಳ ಅಮಾವಾಸ್ಯೆ ಆಚರಿಸಲಾಗುತ್ತಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಜಿ.ಪಂ. ಮಾಜಿ ಸದಸ್ಯ ಮಾರುತಿ ಚವಾಣ್, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ, ಯುವಮುಖಂಡ ಪ್ರತೀಕ ಚವಾಣ್, ಹಣಮಂತ, ಜ್ಞಾನೇಶ್ವರ ಪಾಟೀಲ ಕಿರಣ ಪಾಟೀಲ, ಕೊಂಡಿಬಾ ಬಿರಾದಾರ, ಜ್ಞಾನೇಶ್ವರ ಪಾಟೀಲ, ಭರತ ಕದಂ, ಮನೋಜ ಬಿರಾದಾರ, ದಿಲೀಪ ಚವಾಣ್, ನೇತಾಜಿ ಬಿರಾದಾರ, ತಾನಾಜಿ ಝಂಡೆ, ಸತೀಶ್‌ ಶಿವರಾಮಜಿ, ದಯಾನಂದ ಪಾಟೀಲ, ನರಸಿಂಗ್ ಕಾಂಬಳೆ, ವಿಷ್ಣು ನುದನೂರೆ, ವಿಜಯಕುಮಾರ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.