ಗುರುವಾರ , ಜನವರಿ 23, 2020
28 °C
ಸಂಸದ ಖೂಬಾ ವಿರುದ್ಧ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕಿಡಿ

ವೈಫಲ್ಯ ಮುಚ್ಚಲು ಇನ್ನೊಬ್ಬರ ಮೇಲೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀದರ್‌: ‘ಸಂಸದ ಭಗವಂತ ಖೂಬಾ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಶಾಸಕ ಈಶ್ವರ ಖಂಡ್ರೆ ಟೀಕಿಸಿದರು.

‘ಭಾಲ್ಕಿ ಕ್ಷೇತ್ರದಲ್ಲಿ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಶುದ್ಧ ಸುಳ್ಳು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಮುಖಂಡರು ಯಾವ ಸಂಸ್ಥೆಯಿಂದಾದರೂ ತನಿಖೆ ನಡೆಸಲಿ. ಅದಕ್ಕೆ ನನ್ನ ಆಕ್ಷೇಪ ಇಲ್ಲ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

‘ಫಲಾನುಭವಿಗಳ ಆಯ್ಕೆಯನ್ನು ಶಾಸಕರು ಮಾಡುವುದಿಲ್ಲ. ಸರ್ಕಾರದ ಮಾರ್ಗಸೂಚಿ ಅನ್ವಯ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವಸತಿ ಯೋಜನೆಯ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಭಗವಂತ ಖೂಬಾ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲದಂತೆ ಆರೋಪ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಕೇಂದ್ರದ ಜನ ವಿರೋಧಿ ನೀತಿಯಿಂದ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಅನೇಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರದ ಅನೇಕ ಯೋಜನೆಗಳು ಮಂದಗತಿಯಲ್ಲಿ ಸಾಗಿವೆ. ಈ ಎಲ್ಲ ಅಂಶಗಳನ್ನು ಮರೆ ಮಾಚಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಹಿಂದಿನ ಸರ್ಕಾರದ ಅವಧಿಯಲ್ಲಿಯೇ ವಿಮಾನ ಹಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ 2019ರ ಆಗಸ್ಟ್ 15 ರಂದು ನಾಗರಿಕ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಜನರಿಗೆ ಹೇಳಿದ್ದರು. ಈಗ ಜನವರಿ 26 ರಂದು ವಿಮಾನ ಸಂಚಾರ ಶುರುವಾಗಲಿದೆ ಎನ್ನುತ್ತಿದ್ದಾರೆ. ಅವರು ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಏನನ್ನೂ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಜಿಲ್ಲೆಯ ಎರಡು ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ನಂತರ ಬೀದರ್–ಹುಮನಾಬಾದ್ ಹಾಗೂ ಬೀದರ್–ಕಮಲನಗರವರೆಗೆ ಹಿಂದಿನ ಸರ್ಕಾರ ನಿರ್ಮಿಸಿದ್ದ ಗುಣಮಟ್ಟದ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ. ಕಳೆದ ವರ್ಷವೇ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಗುತ್ತಿಗೆ ಕಂಪನಿಯೊಂದು ದಿವಾಳಿಯಾಗಿದೆ. ಅಪೂರ್ಣ ಕಾಮಗಾರಿಯಿಂದ ಪ್ರಯಾಣಿಕರು ಹಾಗೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದು ಖೂಬಾ ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನ ಹುಣಜಿ ಬಳಿ ಟೋಲ್‌ಗೇಟ್ ನಿರ್ಮಾಣ ಮಾಡಲು ಹೊರಟಿದ್ದಾರೆ. ಇದಕ್ಕೆ ಜನ ಪ್ರತಿನಿಧಿಗಳ ಒಪ್ಪಿಗೆ ಪಡೆದಿಲ್ಲ. ಭಗವಂತ ಖೂಬಾ ಅವರ ಸರ್ವಾಧಿಕಾರಿ ಧೋರಣೆ ಸರಿಯಲ್ಲ’ ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು