ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಶು ಘಟಕಕ್ಕೆ ಆಕ್ಸಿಜನ್ ಪೂರೈಕೆ ಸ್ಥಗಿತ ಪ್ರಕರಣ: ಬ್ರಿಮ್ಸ್‌ಗೆ ಖಂಡ್ರೆ ಭೇಟಿ

Published : 6 ಸೆಪ್ಟೆಂಬರ್ 2024, 14:14 IST
Last Updated : 6 ಸೆಪ್ಟೆಂಬರ್ 2024, 14:14 IST
ಫಾಲೋ ಮಾಡಿ
Comments

ಬೀದರ್‌: ನಗರದ ಬೀದರ್‌ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬ್ರಿಮ್ಸ್‌) ಮಳೆ ನೀರು ಸೋರಿಕೆಯಿಂದ ಉದ್ಭವಗೊಂಡಿರುವ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಶುಕ್ರವಾರ ಸಂಜೆ ಭೇಟಿ ಕೊಟ್ಟು ಅವಲೋಕಿಸಿದರು.

ಬ್ರಿಮ್ಸ್‌ ನೆಲಮಹಡಿಯಲ್ಲಿ ಸಂಗ್ರಹಗೊಂಡಿರುವ ನೀರು, ಅದರಿಂದಾದ ಉಂಟಾಗಿರುವ ಸಮಸ್ಯೆಯನ್ನು ಖುದ್ದು ವೀಕ್ಷಿಸಿದ ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದಾದ ನಂತರ ಸಾಮಾನ್ಯ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಇತರೆ ವಿಭಾಗಗಳಿಗೆ ಭೇಟಿ ಕೊಟ್ಟು, ರೋಗಿಗಳ ಆರೋಗ್ಯ ವಿಚಾರಿಸಿದರು.

‘ಬ್ರಿಮ್ಸ್‌ ನೆಲಮಹಡಿಯಲ್ಲಿ ಮಳೆ ನೀರು ಸಂಗ್ರಹಗೊಂಡು ಕೆಲವೊಂದು ಸಮಸ್ಯೆ ನಿರ್ಮಾಣವಾಗಿದೆ. ಅದನ್ನು ಪರಿಶೀಲಿಸಿದ್ದು, ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಅಗತ್ಯಬಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಸಿಕೊಳ್ಳಲಾಗುವುದು’ ಎಂದು ಸಚಿವ ಖಂಡ್ರೆಯವರು ಪತ್ರಕರ್ತರಿಗೆ ತಿಳಿಸಿದರು.

ಬ್ರಿಮ್ಸ್‌ ರೋಗಿಗಳು ಮತ್ತು ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತುರ್ತು ಮತ್ತು ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಶಾಶ್ವತ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಶಿಫಾರಸಿನೊಂದಿಗೆ ಮೂರು ದಿನಗಳ ಒಳಗೆ ಪ್ರಸ್ತಾವವನ್ನು ಕಡತದಲ್ಲಿ ಸಲ್ಲಿಸಬೇಕು ಎಂದು ಖಂಡ್ರೆಯವರು ಗುರುವಾರ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಬ್ರಿಮ್ಸ್‌ ನಿರ್ದೇಶಕ ಶಿವಕುಮಾರ ಶೆಟಕಾರ ಮತ್ತಿತರರು ಹಾಜರಿದ್ದರು.

ಮಂಗಳವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಬ್ರಿಮ್ಸ್‌ ನೆಲಮಹಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು, ಅಲ್ಲಿದ್ದ ವಿದ್ಯುತ್‌ ಪ್ಯಾನಲ್‌ ಮತ್ತು ಜನರೇಟರ್‌ನೊಳಗೆ ನೀರು ಹೊಕ್ಕಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಆಸ್ಪತ್ರೆಯ ಮೂರು ಮತ್ತು ಆರನೇ ಮಹಡಿಯ ನವಜಾತ ಶಿಶು ಘಟಕದಲ್ಲಿ ವಿದ್ಯುತ್‌ ಪೂರೈಕೆ ಇಲ್ಲದೆ ಆಕ್ಸಿಜನ್‌ ಪೂರೈಕೆ ಸ್ಥಗಿತಗೊಂಡಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಬುಧವಾರ ನಸುಕಿನ ಜಾವ 40 ಮಕ್ಕಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಆಕ್ಸಿಜನ್‌ ಇಲ್ಲದೆ ಪರದಾಡುತ್ತಿದ್ದ ರೋಗಿಯೊಬ್ಬರಿಗೆ ಕೈಪಂಪ್‌ ಸಹಾಯದಿಂದ ಆಕ್ಸಿಜನ್‌ ಪೂರೈಸಿ ಜೀವ ಉಳಿಸಿರುವ ಘಟನೆಯೂ ನಡೆದಿತ್ತು.

ಇನ್ನು, ಆಸ್ಪತ್ರೆಯ ನೆಲಮಹಡಿಯಲ್ಲಿ ಪುರಾತನ ಬಾವಿಯಿದ್ದು, ಮಳೆ ನೀರು ಸಂಗ್ರಹಗೊಂಡು ಇಡೀ ನೆಲಮಹಡಿಯಲ್ಲಿ ನೀರು ಸಂಗ್ರಹಗೊಂಡಿದೆ. ಸತತವಾಗಿ ಎಂಟು ಮೋಟಾರ್‌ಗಳನ್ನು ಅಳವಡಿಸಿ ನೀರು ಹೊರಹಾಕಲಾಗುತ್ತಿದೆ. ಅಗ್ನಿಶಾಮಕ ದಳದವರ ನೆರವು ಕೂಡ ಪಡೆಯಲಾಗಿತ್ತು.

ಬ್ರಿಮ್ಸ್‌ ನೆಲಮಹಡಿಯಲ್ಲಿ ಮಳೆ ನೀರು ಸಂಗ್ರಹಗೊಂಡಿರುವ ದೃಶ್ಯ

ಬ್ರಿಮ್ಸ್‌ ನೆಲಮಹಡಿಯಲ್ಲಿ ಮಳೆ ನೀರು ಸಂಗ್ರಹಗೊಂಡಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT