ಶನಿವಾರ, ಮಾರ್ಚ್ 25, 2023
26 °C

ಬೀದರ್‌ನಲ್ಲಿ ಐಟಿ, ಬಿಟಿ ಕಂಪನಿ ಸ್ಥಾಪನೆ: ಡಾ. ಸಿ.ಎನ್. ಅಶ್ವಥ್ ನಾರಾಯಣ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್‌ನಲ್ಲಿ ಐಟಿ, ಬಿಟಿ ಕಂಪನಿಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಅವರನ್ನು ಭೇಟಿಯಾಗಿ ಮಾಡಿದ ಮನವಿಗೆ ಸ್ಪಂದಿಸಿ ಬೀದರ್‍ನಲ್ಲಿ ಬಂಡವಾಳ ಹೂಡಿಕೆಗೆ ಬಂಡವಾಳದಾರರಿಗೆ ಉತ್ತೇಜನ ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಎಂಜಿನಿಯರಿಂಗ್, ತಂತ್ರಜ್ಞಾನದ ಜ್ಞಾನ ಇರುವ ಸಾಕಷ್ಟು ಯುವಕರು ಇದ್ದಾರೆ. ಸದ್ಯ ದೂರದ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೀದರ್‌ನಲ್ಲೇ ಐಟಿ,ಬಿಟಿ ಕಂಪನಿಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಬೀದರ್‍ನಿಂದ ನಾಗರಿಕ ವಿಮಾನಯಾನ ಸೇವೆ ಸಹ ಆರಂಭವಾಗಿದೆ. ನೆರೆಯ ತೆಲಂಗಾಣದ ಹೈದರಾಬಾದ್ 140 ಕಿ.ಮೀ. ಅಂತರದಲ್ಲಿ ಇದೆ. ಜಿಲ್ಲೆ ಎರಡೂ ರಾಜ್ಯಗಳ ರಾಜಧಾನಿಗಳ ನಡುವೆ ವ್ಯವಹಾರ ಕೇಂದ್ರವಾಗಿದೆ ಎನ್ನುವುದನ್ನು ಮನವರಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಬೀದರ್‌ನಲ್ಲಿ ಹೊಸ ತಂತ್ರಜ್ಞಾನ ಆಧಾರಿತ ಐಟಿ, ಬಿಟಿ ಕಂಪನಿಗಳನ್ನು ಸ್ಥಾಪಿಸಿದರೆ ಕಲ್ಯಾಣ ಕರ್ನಾಟಕಕ್ಕೆ ಒಳ್ಳೆಯ ಕೊಡುಗೆಯಾಗಲಿದೆ. ಈ ಭಾಗದ ಯುವಕರಿಗೆ ಪ್ರೋತ್ಸಾಹಿಸಿದಂತೆಯೂ ಆಗಲಿದೆ ಎಂದು ಗಮನ ಸೆಳೆದಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು