ಕಬ್ಬು ಬಾಕಿ ಹಣ ಸಂಪೂರ್ಣ ಪಾವತಿಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

7

ಕಬ್ಬು ಬಾಕಿ ಹಣ ಸಂಪೂರ್ಣ ಪಾವತಿಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

Published:
Updated:
Deccan Herald

ಬೀದರ್: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಬಾಕಿ ಹಣ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದ ಪದಾಧಿಕಾರಿಗಳು ನಗರದ ಗಣೇಶ ಮೈದಾನದಿಂದ ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಮುಖಂಡರು ಹಿಂದೆ ಹೇಳಿಕೆ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರವನ್ನೂ ಮುಚ್ಚಲಾಗಿತ್ತು.

ಪ್ರವೇಶ ದ್ವಾರದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರಾದರೂ ಪೊಲೀಸರು ಅವಕಾಶ ನೀಡಲಿಲ್ಲ. ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಸ್ಥಳಕ್ಕೆ ಬಂದು ಸಂಘದ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ರೈತರು ಕಬ್ಬು ಪೂರೈಸಿ 9 ತಿಂಗಳಾದರೂ ಕೆಲ ಸಕ್ಕರೆ ಕಾರ್ಖಾನೆಗಳು ಇನ್ನೂ ಬಾಕಿ ಹಣ ಸಂದಾಯ ಮಾಡಿಲ್ಲ. ಹೀಗಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ದೂರಿದರು.
ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರೈತರ ತಲಾ 20 ಕ್ವಿಂಟಲ್ ಹೆಸರು ಖರೀದಿಸಲಾಗಿತ್ತು. ಈ ವರ್ಷ 4 ಕ್ವಿಂಟಲ್ ಮಾತ್ರ ಖರೀದಿಸುತ್ತಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.

ರೈತರು ಬೆಳೆದ ಸಂಪೂರ್ಣ ಹೆಸರು ಖರೀದಿಸಬೇಕು. ಬೆಂಬಲ ಬೆಲೆಯಲ್ಲಿ ಉದ್ದು ಖರೀದಿ ವ್ಯವಸ್ಥೆಯನ್ನೂ ಮಾಡಬೇಕು ಎಂದು ಆಗ್ರಹಿಸಿದರು.

ಸಾಲ ಮನ್ನಾ ಮಾಡಲು ಹಿಂದಿನ ಸಿದ್ದರಾಮಯ್ಯ ಸರ್ಕಾರ ಅನುಸರಿಸಿದ್ದ ಮಾನದಂಡವನ್ನೇ ಈಗಿನ ಸರ್ಕಾರವೂ ಅನುಸರಿಸಬೇಕು. ದಿನಕ್ಕೊಂದು ದಾಖಲೆಗಳನ್ನು ಕೇಳಿ ರೈತರಿಗೆ ತೊಂದರೆ ಕೊಡಬಾರದು. ಸಾಲ ಮನ್ನಾ ಪ್ರಕ್ರಿಯೆ ಸರಳೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಸಂಘದ ಬೇಡಿಕೆಗಳನ್ನು ಆಲಿಸಿದರು. ರೈತರ ಎಲ್ಲ ಹೆಸರು ಖರೀದಿಸಲಾಗುವುದು. ಇತರ ಬೇಡಿಕೆಗಳನ್ನೂ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು ಎಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಸಂಘದ ಸಿದ್ರಾಮಪ್ಪ ಆಣದೂರೆ, ಕಾಸಿಂ ಅಲಿ, ಶೇಷರಾವ್ ಕಣಜಿ, ಶ್ರೀಮಂತ ಬಿರಾದಾರ, ವಿಠ್ಠಲರೆಡ್ಡಿ ಆಣದೂರ, ಬಾಬುರಾವ್ ಜೊಳದಾಪಕಾ, ಚಂದ್ರಶೇಖರ ಜಮಖಂಡಿ, ಅನಿಲ ಬಾವಗಿ, ಶಿವಶೆಟ್ಟಿ ಚಲುವಾ, ಈರಪಣ್ಣ ದುಬಲಗುಂಡಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !