ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್‌ಸ್ಪೆಕ್ಟರ್‌ ಮೇಲೆ ಮಾರಣಾಂತಿಕ ಹಲ್ಲೆ: ರೌಡಿಶೀಟರ್‌ ಕಾಲಿಗೆ ಗುಂಡು

Published 30 ಮೇ 2024, 6:59 IST
Last Updated 30 ಮೇ 2024, 6:59 IST
ಅಕ್ಷರ ಗಾತ್ರ

ಬೀದರ್‌: ರೌಡಿಶೀಟರ್‌ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಇಲ್ಲಿನ ನ್ಯೂ ಟೌನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗೆ ಇನ್‌ಸ್ಪೆಕ್ಟರ್‌ ಹಾರಿಸಿದ ಗುಂಡಿಗೆ ರೌಡಿಯ ಎಡಕಾಲಿಗೆ ಗಾಯವಾದ ಘಟನೆ ನಗರದ ಸಾಯಿ ಶಾಲೆ ಬಳಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಇನ್‌ಸ್ಪೆಕ್ಟರ್‌ ಸಂತೋಷ ಎಲ್‌. ತಟ್ಟೆಪಳ್ಳಿ ಅವರ ತಲೆ, ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನಗರದ ಬ್ರಿಮ್ಸ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಲಬುರಗಿಗೆ ಕರೆದೊಯ್ಯಲಾಗಿದೆ. ಗುಂಡೇಟಿನಿಂದ ಗಾಯಗೊಂಡಿರುವ ರೌಡಿಶೀಟರ್‌ ರಸೂಲ್‌ ಎಂಬಾತನಿಗೆ ನಗರದ ಬ್ರಿಮ್ಸ್‌ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಸೂಲ್‌ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 11 ಅಪರಾಧಿಕ ಪ್ರಕರಣಗಳಿವೆ.

‘ಸಾರ್ವಜನಿಕ ಸ್ಥಳದಲ್ಲಿ ವೈದ್ಯರು, ಸಾರ್ವಜನಿಕರಿಗೆ ರಸೂಲ್‌ ತೊಂದರೆ ಉಂಟು ಮಾಡಿದ್ದಾನೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆತನ ವಿರುದ್ಧ ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

ಆಗಿದ್ದೇನು?:

‘ರಸೂಲ್‌ ಬುಧವಾರ ರಾತ್ರಿ ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಚೀರಾಡುತ್ತ, ಕೂಗಾಡುತ್ತ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳಿಗೆ ಚಾಕು ತೋರಿಸಿ, ಹೆದರಿಸಿ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಆಸ್ಪತ್ರೆಯವರು ವಿಷಯ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಸೂಲ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ರಸೂಲ್‌ ಮಾರ್ಗದುದ್ದಕ್ಕೂ ಚೀರಾಡುತ್ತ, ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆನಂತರ ಠಾಣೆಯ ಗೋಡೆಗೆ ತಲೆ ಹೊಡೆದುಕೊಂಡಿದ್ದಾನೆ. ಮೈಮೇಲಿನ ಹಳೆಯ ಗಾಯಗಳನ್ನು ಪರಚಿಕೊಂಡು ರಕ್ತ ಬರುವಂತೆ ಮಾಡಿಕೊಂಡಿದ್ದಾನೆ. ‘ನನಗೆ ಏಡ್ಸ್‌ ಇದೆ. ನಿಮಗೂ ಬರುವಂತೆ ಮಾಡುತ್ತೇನೆ’ ಎಂದು ಹೇಳಿ ರಸೂಲ್‌ ಪೊಲೀಸರ ಮೇಲೆ ರಕ್ತ ಸಿಂಪಡಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಇನ್‌ಸ್ಪೆಕ್ಟರ್‌ ಸಂತೋಷ ಎಲ್‌. ತಟ್ಟೆಪಳ್ಳಿ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದ ಸಾಯಿ ಶಾಲೆ ಬಳಿ ಜೀಪಿನಲ್ಲಿ ಪುನಃ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಆಸ್ಪತ್ರೆಗೆ ಬರುವುದಿಲ್ಲ ಎಂದು ರಸೂಲ್‌ ಹಠ ಹಿಡಿದಿದ್ದಾನೆ. ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿ, ಜೀಪಿನ ಹಿಂದಿನ ಬಾಗಿಲು ತೆಗೆದು ಕೆಳಗಿಳಿದು, ಅಲ್ಲಿದ್ದ ಕಲ್ಲುಗಳಿಂದ ಮನಬಂದಂತೆ ತೂರಿದ್ದಾನೆ. ಈ ವೇಳೆ ನನ್ನ ತಲೆಯ ಹಿಂಭಾಗದಲ್ಲಿ ಗಾಯವಾಗಿದೆ. ತನ್ನ ಬಳಿ ಬಚ್ಚಿಟ್ಟುಕೊಂಡಿದ್ದ ಚಾಕು ತೆಗೆದು ನನ್ನ ಕುತ್ತಿಗೆ ಮೇಲೆ ದಾಳಿ ನಡೆಸಲು ಮುಂದಾಗಿದ್ದಾಗ ನಾನು ಎಡಗೈ ಮುಂದೆ ತಂದಿದ್ದರಿಂದ ರಟ್ಟೆಗೆ ಚಾಕು ತಗುಲಿ ಭಾರಿ ಗಾಯವಾಗಿದೆ. ಪರಿಸ್ಥಿತಿ ಕೈಮೀರಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದೆ. ಆದರೂ ಆತ ಸುಮ್ಮನಾಗಿರಲಿಲ್ಲ. ಅನಿವಾರ್ಯವಾಗಿ ಆತನ ಎಡಗಾಲಿನ ಮೊಳಕಾಲಿನ ಭಾಗಕ್ಕೆ ಗುಂಡು ಹೊಡೆದೆ. ಸ್ಥಳದಲ್ಲೇ ಕುಸಿದು ಬಿದ್ದ ರಸೂಲ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ತಿಳಿಸಿದ್ದಾರೆ.

ರಸೂಲ್‌ ಎಚ್‌ಐವಿ ಸೋಂಕಿತನಾಗಿದ್ದು, ಹಲ್ಲೆಯ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ ಮೇಲೆ ಆತನ ರಕ್ತ ಬಿದ್ದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT