ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣಕ್ಕೆ ಆರ್ಥಿಕ ನೆರವು

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಭರವಸೆ
Last Updated 19 ಮೇ 2021, 4:04 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ನಿಯಂತ್ರಣಕ್ಕೆ ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಆರೂ ಜಿಲ್ಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಗತ್ಯ ಆರ್ಥಿಕ ನೆರವು ನೀಡಲಾಗುವುದು ಎಂದು ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಹೇಳಿದರು.

ಕೋವಿಡ್ ನಿರ್ವಹಣೆ ಸಂಬಂಧ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕಿತರಿಗೆ ಆಮ್ಲಜನಕ ಪೂರೈಕೆಗೆ ನೆರವಾಗಲು ಕಲ್ಯಾಣ ಕರ್ನಾಟಕ ಭಾಗದ ತಲಾ ಮೂರು ಜಿಲ್ಲೆಗಳಿಗೆ ಒಂದರಂತೆ ಎರಡು ಆಮ್ಲಜನಕ ಟ್ಯಾಂಕರ್ ಖರೀದಿಗೆ ಅನುದಾನ ಒದಗಿಸಲಾಗುವುದು. ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗೆ ಒಂದು, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಮತ್ತೊಂದು ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಟ್ಯಾಂಕರ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ ಕೂಡಲೇ ಒಟ್ಟು ಹಣದ ಅರ್ಧದಷ್ಟನ್ನು ಜಿಲ್ಲಾಧಿಕಾರಿ ಕಚೇರಿಯ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.

ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಹಾಗೂ ತಾಲ್ಲೂಕು ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕ, ವೆಂಟಿಲೇಟರ್ ಹಾಸಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ಆಮ್ಲಜನಕ ಘಟಕ ಸ್ಥಾಪಿಸಬೇಕು. ಜನಸಂಖ್ಯೆ ಆಧರಿಸಿ ಅಗತ್ಯವಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು. 20 ಹಾಸಿಗೆಗಳು ಇರುವ ಕಡೆ, 30 ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಆಮ್ಲಜನಕ ಘಟಕ ಸ್ಥಾಪ ನೆಗೆ ಯೋಜನೆ ರೂಪಿಸಬೇಕು ಎಂದರು.

ಲಾಕ್‍ಡೌನ್ ಮುಕ್ತಾಯದ ನಂತರ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇರುವ ಕಾರಣ ಈಗಿನಿಂದಲೇ ಮುಂಜಾಗ್ರತೆ ವಹಿಸಬೇಕು. ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಐಸಿಯು ಮತ್ತು ಪೀಡಿಯಾಟ್ರಿಕ್ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಡಿಜಿಟಲ್ ಎಕ್ಸ್‌ರೇ ಯಂತ್ರ ಖರೀದಿಸಬೇಕು ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಆಮ್ಲಜನಕ ಘಟಕಗಳ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಕಮಲನಗರ, ಹುಲಸೂರು, ಚಿಟಗುಪ್ಪ ತಾಲ್ಲೂಕುಗಳಲ್ಲಿ ಮಿನಿ ಆಮ್ಲಜನಕ ಘಟಕ ಸ್ಥಾಪಿಸಲು ಮಂಡಳಿಗೆ ತಕ್ಷಣ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾಹಿತಿ ನೀಡಿದರು.

ಜಿಲ್ಲೆಯ ನಾಲ್ಕು ತಾಲ್ಲೂಕು ಆಸ್ಪತ್ರೆಗಳಲ್ಲಿ 100 ಹಾಸಿಗೆಗಳ ಪೈಕಿ ತಲಾ 50 ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. ನಾಲ್ಕೂ ಆಸ್ಪತ್ರೆಗಳಿಗೆ ಆಮ್ಲಜನಕದ ತಲಾ 50 ಜಂಬೋ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ. ಜಿಲ್ಲೆಯ 8 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಆಮ್ಲಜನಕ ಪೈಪ್ ಆಳವಡಿಸಿದ್ದು, ಡೆಮೋ ಕೂಡ ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ. ರೆಡ್ಡಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಸ್.ಎಸ್. ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT