ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಸಂಪರ್ಕ ಕಳೆದುಕೊಂಡ ಕಮಲನಗರ

Last Updated 8 ಸೆಪ್ಟೆಂಬರ್ 2021, 4:01 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದ ನದಿಗಳಿಗೆ ಪ್ರವಾಹ ಬಂದಿದ್ದು, ಕಮಲನಗರ–ಔರಾದ್ ಮಧ್ಯೆ ಇರುವ ಸಂಪರ್ಕ ರಸ್ತೆಗಳು ಜಲಾವೃತ್ತಗೊಂಡಿವೆ.

ಕಳೆದ ರಾತ್ರಿಯಿಂದ ಎಡಬಿಡದೆ ಮಳೆ ಬೀಳುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಮಲನಗರ ಹೋಬಳಿ ವ್ಯಾಪ್ತಿಯಲ್ಲಿ 22.8 ಮಿ.ಮೀ., ದಾಬಕಾ ಹೋಬಳಿಯಲ್ಲಿ 41.2 ಮಿ.ಮೀ.ಮತ್ತುಠಾಣಾಕುಶನೂರ್ ವ್ಯಾಪ್ತಿಯಲ್ಲಿ 40ಮಿ.ಮೀ.ಮಳೆಯಾಗಿದೆ.

ಭೋಫಳಗಡ್ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ಕಮಲನಗರ -ಬೆಳಕುಣಿ(ಬಿ) ಮಧ್ಯೆಇರುವ ಸೇತುವೆಗೆ ಪ್ರವಾಹ ಬಂದಿದ್ದು, ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ಹರಿಯುತ್ತಿದೆ. ದೇವನಾಲಾ ನದಿ ಪ್ರವಾಹದಿಂದ ಬಾಲೂರ್, ಚಿಕಮುರಗ್, ಚಾಂಡೇಶ್ವರ ಮುಂತಾದ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಚಾರಕ್ಕೆ ಬಂದ್‍ ಆಗಿವೆ.

ಇದಲ್ಲದೆ ಕಮಲನಗರ–ಔರಾದ್ (ಬ) ವ್ಹಾಯಾ ಬೆಳಕುಣಿ (ಭೋ) ಸಂಪರ್ಕಿಸುವ ರಸ್ತೆಯಲ್ಲಿ ನದಿಗೆ ಪ್ರವಾಹ ಬಂದು ಮುರ್ಕಿ, ಹಕ್ಯಾಳ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಮಳೆಯಿಂದ ಮದನೂರ್‌ ಗ್ರಾಮದ ಒಂದು ಮನೆ ಕುಸಿದು ಬಿದ್ದಿದ್ದು, ಹೊಳಸಮುದ್ರ ಗ್ರಾಮದಲ್ಲಿ ಎರಡು ಮನೆ ಕುಸಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸೋನಾಳ, ಹೊರಂಡಿ, ಹಕ್ಯಾಳ, ಮುರ್ಕಿ, ರಂಡ್ಯಾಳ ಮತ್ತು ಬೆಳಕುಣಿ, ಖೇಡ , ಸಾವಳಿ, ಕಮಲನಗರ ಮುಂತಾದೆಡೆಗಳಲ್ಲಿ ಪ್ರವಾಹದ ನೀರು ಹೆಚ್ಚುತ್ತಿದ್ದು, ನೀರು ಹೊಲಗಳಿಗೆ ನುಗ್ಗಿದೆ. ಕಟಾವಿಗೆ ಬಂದ ಸೋಯಾ, ಉದ್ದು ಮತ್ತು ಹೆಸರು ಬೆಳೆಗಳ ಹೊಲಗಳಲ್ಲಿ ನೀರು ನಿಂತಿದ್ದು, ಪ್ರವಾಹದ ಹಿನ್ನೀರಿನಿಂದ ಸಾಕಷ್ಟು ಬೆಳೆ ಹಾನಿ ಆಗುವ ಸಾಧ್ಯತೆಗಳಿವೆ.

ತಹಶೀಲ್ದಾರ ರಮೇಶ ಪೆದ್ದೆಅವರು ಖೇಡ್, ಸಂಗಮ, ಠಾಣಾಕುಶನೂರ್, ಬೆಳಕುಣಿ(ಭ) ಮತ್ತು ಸೋನಾಳ-ಕಮಲನಗರ ಮಧ್ಯೆ ಇರುವ ಸೇತುವೆಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.

ಲಕ್ಷಾಂತರ ರೂಪಾಯಿ ಹಾನಿ
ಕಮಲನಗರ:
ಕಾರಂಜಾ ಡ್ಯಾಂನಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವುದರಿಂದ ಮಂಗಳವಾರ ತಾಲ್ಲೂಕಿನ ಸೋನಾಳ, ಹ್ರೆರಂಡಿ, ಕಳಗಾಪುರ, ಖೇಡ್ ಮುಂತಾದ ಗ್ರಾಮಗಳ ಹೊಲಗಳಿಗೆ ಪ್ರವಾಹ ನೀರು ನುಗ್ಗಿ ನೂರಾರು ಎಕರೆ ಜಲಾವೃತಗೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಗೀಡಾಗಿದೆ. ಬೆಳಿಗ್ಗೆ ಕಾರಂಜಾ ಮತ್ತು ಚುಳುಕಿ ನಾಲಾ ನೀರು ನದಿಗೆ ಬಿಟ್ಟ ಪರಿಣಾಮ ಮಾಂಜರಾ ನದಿಗೆ ಪ್ರವಾಹ ಬಂದಿದೆ.

ಲಖಣಗಾಂವ್-ಸೋನಾಳ ಮಧ್ಯೆ ಇರುವ ಸೇತುವೆ ಮೇಲೆ 6 ಅಡಿಗಳಷ್ಟು ಪ್ರವಾಹ ನೀರು ಹರಿದು ಹೋಗಿದೆ. ಬೆಳಕುಣಿ(ಬಿ)-ಡೋಣಗಾಂವ್(ಎಂ) ಮಧ್ಯೆ ಇರುವ ಕೆಳಸೇತುವೆ, ಕಮಲನಗರ- ರಾಂಪೂರು ಕೆಳ ಸೇತುವೆ, ಹೊಳಸಮುದ್ರ- ಹುಲಸೂರು ಸೇತುವೆ, ಕಮಲನಗರ ಸೋನಾಳ ಸೇತುವೆ, ಹಕ್ಯಾಳ-ರಂಡ್ಯಾಳ, ಮುರರ್ಕಿವಾಡಿ-ಗಣೇಶಪುರ ಕೆಳ ಸೇತುವೆ ಮೇಲಿಂದ ಅಧಿಕ ಪ್ರಮಾಣದ ಮಳೆ ನೀರು ಹರಿದು ಹೋಗಿದೆ. ಇದರಿಂದ ಕಮಲನಗರ, ಉದಗೀರ, ಭಾಲ್ಕಿ, ಭಾತಂಭ್ರಾ, ಶಿವಣಿ, ದಾಬಕಾ, ಖತಗಾಂವ್, ಮುರ್ಕಿ, ಔರಾದ್, ತೋರಣಾ, ಮುಧೋಳ ಮುಂತಾದ ಗ್ರಾಮಗಳಿಗೆ ತೆರಳುವ ಜನ ಎಂಟು ಗಂಟೆಗೂ ಹೆಚ್ಚು ಅವಧಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಪರದಾಡಿದರು.

ಪ್ರತಿ ಮಳೆಗಾಲದಲ್ಲಿಯೂ ಈ ಸಮಸ್ಯೆ ಇದ್ದೇ ಇದೆ. ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಹೊಳಸಮುದ್ರ ಪ್ರದೀಪ ಪಾಟೀಲ, ಸೋನಾಳ ಅಂಕುಶ ಹಣಮಶೇಟ್ಟೆ, ಬೆಳಕುಣಿ ವಿವೇಕ, ರಾಜೇಂದ್ರ ಮಾಳಿ, ಹಕ್ಯಾಳ, ಸಚಿಜು, ರಂಡ್ಯಾಳ ರಾಜು, ತೋರಣಾ ಶಿವಾ, ಡೋಣಗಾಂವ್ ವಿಜಯ, ಡಿಗ್ಗಿ ವಿಜಯಕುಮಾರ ಪಾಟೀಲ, ಬಾಬುರಾವ ಪಾಟೀಲ, ಸಂತೋಷ ಬನವಾಸೆ ಅವರು ಆಕ್ರೋಶ ವ್ಯಕ್ತಡಿಸಿದ್ದಾರೆ.

ದೇವನದಿ ನಾಲಾ ನೀರು ಅಧಿಕ ಪ್ರಮಾಣದ ನೀರು ಹರಿದು ಗ್ರಾಮದವರೆಗೆ ನೀರು ನುಗ್ಗಿದೆ. ಅವ್ಯವಸ್ಥೆ ಸರಿ ಇಲ್ಲದ ಕಾರಣ ಪದೇ ಪದೇ ಈ ಸಮಸ್ಯೆ ಕಾಡುತ್ತಿದೆ. ಕಂದಾಯ ಇಲಾಖೆಯು ಕಳೆದ ಬಾರಿಯ ಬೆಳೆ ನಷ್ಟದ ಪರಿಹಾರ ನೀಡಿಲ್ಲ. ಈಗ ಮತ್ತೇ ಪ್ರವಾಹ ಬಂದು ನದಿ ತೀರದ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಎಕರೆ ಜಲಾವೃತ್ತಗೊಂಡು ಬೆಲೆ ಹಾನಿ ಮಾಡಿದೆ ಎಂದು ಡಿಗ್ಗಿ, ಚ್ಯಾಂಡೇಶ್ವರೆ, ಹುಲಸೂರು, ಸಂಗಮ, ಸಾವಳಿ, ಬಳತ, ಹಾಲಹಳ್ಳಿ, ನಿಡೋದಾ, ಹೊಳಸಮುದ್ರ ಗ್ರಾಮದ ಅಲ್ಲಿಯ ನಿವಾಸಿಗಳು ದೂರಿದ್ದಾರೆ.

ದಾಬಕಾ ವಲಯದ ಗಂಗನಬಿಡ್, ಅಕನಾಪುರ, ಹೊಕರ್ಣಾ, ಹಂದಿಕೇರಾ , ವಾಗನಗೇರಾ ಗ್ರಾಮದ ಹೊಲಗಳಿಗೂ ನೀರು ನುಗ್ಗಿದೆ. ಕಟಾವಿಗೆ ಬಂದ ಹೆಸರು, ಉದ್ದು ಬೆಳೆಗೆ ಹಾನಿಯಾಗಿದೆ ಎಂದು ದಾಬಕಾ ನಾಡ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಪ್ರತಿ ಎಕರೆಗೆ ₹ 7,000 ರಂತೆ ಪರಿಹಾರ ನಿಡಬೇಕು ಎಂದು ಗ್ರಾ.ಪಂ ಸದಸ್ಯ ಸಂತೋಷ ಜಾಧವ, ಅಂಕುಶ ವಾಡೀಕರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT