ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಭವನ ನಿರ್ಮಾಣಕ್ಕೆ ₹ 3 ಕೋಟಿ ಬಿಡುಗಡೆ: ಸಚಿವ ಬಂಡೆಪ್ಪ ಕಾಶೆಂಪೂರ

Last Updated 2 ಅಕ್ಟೋಬರ್ 2018, 14:13 IST
ಅಕ್ಷರ ಗಾತ್ರ

ಬೀದರ್: ‘ನಗರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹ 3 ಕೋಟಿ ಬಿಡುಗಡೆ ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಗಾಂಧೀಜಿ ಸಾಕ್ಷ್ಯಚಿತ್ರ, ಉಪನ್ಯಾಸ, ಸಂಗೀತ–ನೃತ್ಯ ನಮನ, ಗಾಂಧೀಜಿ ವಿಶೇಷಾಂಕಗಳ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಸತ್ಯದ ಪರಿಪಾಲನೆ ಸರಳತೆ ನಮ್ಮೆಲ್ಲರಿಗೆ ಮಾದರಿಯಾಗಿದೆ’ ಎಂದು ತಿಳಿಸಿದರು.

‘ಬೀದರ್‌ ನಗರದಲ್ಲಿ ಯಾವುದಾದರೊಂದು ಮಾರ್ಗಕ್ಕೆ ಮಹಾತ್ಮ ಗಾಂಧಿ ಹೆಸರು ಇಡುವ ಮೂಲಕ ಅವರನ್ನು ಸ್ಮರಿಸಬೇಕಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅವರು ಗಾಂಧೀಜಿ ವಿಶೇಷಾಂಕಗಳನ್ನು
ಬಿಡುಗಡೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಇದ್ದರು.

ಸಾಹಿತಿ ಪ್ರೊ. ಕಾಶೀನಾಥ ಅಂಬಲಗೆ ಉಪನ್ಯಾಸ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಸ್ವಾಗತಿಸಿದರು. ಸಾಹಿತಿ ಸಂಜೀವಕುಮಾರ ಅತಿವಾಳೆ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ವಂದಿಸಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರಿನ ಶ್ರೀಪದ ಗಡ್ಡಿ ನೇತೃತ್ವದ ತಂಡದಿಂದ ಸಂಗೀತ ನಮನ, ಬೀದರ್‌ನ ಉಷಾ ಪ್ರಭಾಕರ್ ಹಾಗೂ ನೂಪುರ ನೃತ್ಯ ಅಕಾಡೆಮಿ ತಂಡ, ರಾಣಿ ಸತ್ಯಮೂರ್ತಿ ಹಾಗೂ ನಾಟ್ಯಶ್ರೀ ನೃತ್ಯಾಲಯ ತಂಡ, ಜೀವರಾಜ ಮತ್ತು ಶಾಂತ ಕಲಾ ನೃತ್ಯ ಕೇಂದ್ರ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಬೀದರ್‌ನ ಅಬಿದ್‌ ಅಲಿ ತಂಡದವರು ದೇಶ ಭಕ್ತಿ ಗೀತೆಗಳನ್ನು ಹಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಜನಪದ, ಮಾರ್ಚ್ ಆಫ್ ಕರ್ನಾಟಕ ಸಂಚಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ‘ಪಾಪು ಗಾಂಧಿ–ಗಾಂಧಿ ಬಾಪು ಆದ ಕಥೆ’ ಪುಸ್ತಕ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT