ಭಾನುವಾರ, ಸೆಪ್ಟೆಂಬರ್ 19, 2021
30 °C
ಗಣೇಶನ ಹಬ್ಬಕ್ಕೆ ನಾಲ್ಕೇ ದಿನ ಬಾಕಿ, ಗರಿ ಬಿಚ್ಚಿಕೊಳ್ಳದ ಮಾರುಕಟ್ಟೆ, ಸದ್ದು ಮಾಡದ ಪಟಾಕಿ ವ್ಯಾಪಾರ: ಹಲವು ಕುಟುಂಬಗಳಿಗೆ ಸಂಕಷ್ಟ

ಬೀದರ್‌: ವಿಘ್ನೇಶ್ವರನ ಭರವಸೆಯಲ್ಲಿ ಮೂರ್ತಿ ತಯಾರಕರು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಗೆ ಗಣನಾಯಕನ ಸ್ವಾಗತ ಮಾಡಿಕೊಳ್ಳಲು ಒಂದು ತಿಂಗಳ ಮೊದಲೇ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ಅಲ್ಲಲ್ಲಿ ಗಣಪತಿ ಮೂರ್ತಿಗಳ ಮಾರಾಟ ಮಳಿಗೆ ತೆರೆದುಕೊಂಡರೂ ಭಕ್ತರು ಖರೀದಿಗೆ ಇನ್ನೂ ಆಸಕ್ತಿ ತೋರಿಸಿಲ್ಲ.

ಹಬ್ಬಕ್ಕೆ ನಾಲ್ಕು ದಿನಗಳು ಬಾಕಿ ಉಳಿದರೂ ಮಾರುಕಟ್ಟೆಯಲ್ಲಿ ಖರೀದಿ ರಂಗೇರಿಲ್ಲ. ಕೋವಿಡ್‌ನಿಂದ ಆದಾಯ ಕುಸಿದು ಗ್ರಾಹಕರು ಅಲಂಕಾರಿಕ ವಸ್ತುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮೂರ್ತಿ ತಯಾರಕರು ಮನೆ ಗಣಪತಿಗಳನ್ನು ಮಾತ್ರ ಸಿದ್ಧಪಡಿಸಿ ಕಳೆದ ವರ್ಷ ಉಳಿದಿದ್ದ ದೊಡ್ಡ ಗಣಪತಿಗಳಿಗೆ ಬಣ್ಣ ಹಚ್ಚಿ ಮತ್ತೆ ಮಾರಾಟಕ್ಕೆ ಇಟ್ಟಿದ್ದಾರೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ಇದೀಗ ವ್ಯವಹಾರ ಸಹ ಅರ್ಧದಷ್ಟು ಕುಸಿದಿದೆ.

ಪ್ರತಿವರ್ಷ ಹೈದರಾಬಾದ್, ಸೊಲ್ಲಾಪುರ ಹಾಗೂ ಉದಗಿರನಿಂದ ದೊಡ್ಡ ಪ್ರಮಾಣದಲ್ಲಿ ಏಕದಂತನ ಮೂರ್ತಿಗಳು ಜಿಲ್ಲೆಯ ನಗರಪಟ್ಟಣಗಳಿಗೆ ಬರುತ್ತಿದ್ದವು. ಆದರೆ, ಈ ವರ್ಷ ಬಹಳ ಕಡಿಮೆ ಮೂರ್ತಿಗಳು ನಗರಕ್ಕೆ ಬಂದಿವೆ. ಸಂಪ್ರದಾಯ ಬದ್ಧವಾಗಿ ಪೂಜಿಸುವವರು ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲಿದ್ದಾರೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಮಣ್ಣಿನ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಕಲಾವಿದರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಭಕ್ತರಿಂದ ದೇಣಿಗೆಯನ್ನೂ ಸಂಗ್ರಹಿಸಿಲ್ಲ. ಕೊನೆಯ ಕ್ಷಣದಲ್ಲಿ ಸರ್ಕಾರ ಒಪ್ಪಿಗೆ ಸೂಚಿಸಿದರೂ ಮಂಡಳಿಗಳು ಮೂರ್ತಿ ಪ್ರತಿಷ್ಠಾಪಿಸುವುದು ಅನುಮಾನ.

ಪ್ರತಿವರ್ಷ ಏಕದಂತನ ಮೂರ್ತಿಗಳನ್ನು ತಯಾರಿಸಿ ಕೈತುಂಬ ಹಣ ಸಂಪಾದಿಸುತ್ತಿದ್ದ ಕಲಾವಿದರಿಗೆ ಸಂಕಟ ಎದುರಾಗಿದೆ. ಪ್ರತಿಮೆಗಳಿಗೆ ಬೇಡಿಕೆ ಇಲ್ಲದೆ ನಮ್ಮ ಕಲೆಗೂ ಬೆಲೆ ಇಲ್ಲದಂತಾಗಿದೆ ಎಂದು ಔರಾದ್‌ನ ಕಲಾವಿದರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ಬರುವ ಮೊದಲು ವಿವಿಧ ವಿನ್ಯಾಸದ 50 ಸಾವಿರ ಗಣೇಶ ಪ್ರತಿಮೆ ತಯಾರಿಸುತ್ತಿದ್ದೆವು. ಆದರೆ ಈಗ 20 ಸಾವಿರ ಮೂರ್ತಿ ತಯಾರಿಸಿದರೂ ಬೇಡಿಕೆ ಇಲ್ಲವಾಗಿದೆ. ಅದಕ್ಕಾಗಿ ಖರ್ಚು ಮಾಡಿದ ಹಣ ವಾಪಸ್ ಬರುತ್ತಿಲ್ಲ’ ಎಂದು ಮುಂಗನಾಳದ ಮೂರ್ತಿಕಾರ ತಯಾರಕ ದಿಲೀಪ್ ಕದಮ್ ಹೇಳುತ್ತಾರೆ.

‘ಗಣೇಶ ಹಬ್ಬ ಇನ್ನೂ ವಾರ ಇರುವಾಗಲೇ ವ್ಯಾಪಾರ ಜೋರು ನಡೆಯುತ್ತಿತ್ತು. ಆದರೆ ಈಗ ಜನ ಖರೀದಿಗೆ ಉತ್ಸಾಹ ತೋರುತ್ತಿಲ್ಲ’ ಎಂದು ಇಲ್ಲಿನ ಅಲಂಕಾರಿಕ ವಸ್ತುಗಳ ಮಾರಾಟ ವ್ಯಾಪಾರಿಗಳು ನಿರಾಶೆ ವ್ಯಕ್ತಪಡಿಸುತ್ತಾರೆ.

‘ಕೋವಿಡ್‌ ಕಾರಣ ಕಳೆದ ವರ್ಷ ಗಣೇಶ ಮೂರ್ತಿಗಳು ಮಾರಾಟವಾಗದ್ದರಿಂದ ಸುಮಾರು ₹15 ಲಕ್ಷ ನಷ್ಟ ಅನುಭವಿಸಿದ್ದೇವೆ. ಈ ವರ್ಷ ಸರ್ಕಾರ ಗಣೇಶ ಚತುರ್ಥಿಗೆ ಅವಕಾಶ ನೀಡಿದರೂ ಇಲ್ಲಿಯವರೆಗೆ ದೊಡ್ಡ ಗಣೇಶ ವಿಗ್ರಹಗಳಿಗೆ ಯಾವುದೇ ಬೇಡಿಕೆ ಬಂದಿಲ್ಲ’ ಎಂದು ಭಾಲ್ಕಿಯ ದತ್ತಾತ್ರಿ ಜಾಧವ ಹೇಳುತ್ತಾರೆ.

‘ಸಣ್ಣ ಮೂರ್ತಿಗಳ ಮಾರಾಟದಿಂದ ಹೆಚ್ಚಿನ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ. ಈ ವರ್ಷವೂ ಅಂಗಡಿ ಬಾಡಿಗೆ, ಕೂಲಿಕಾರರ ನಿತ್ಯದ ವೇತನ, ವಿಗ್ರಹ ನಿರ್ಮಾಣಕ್ಕೆ ಖರೀದಿಸಿದ ವಸ್ತುಗಳ ಹಣವನ್ನು ಸಾಲದಿಂದಲೇ ಭರಿಸಬೇಕಾಗಿದೆ. ಸರ್ಕಾರ ಕಲಾವಿದರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಅಗತ್ಯ ನೆರವು ನೀಡಬೇಕು’ ಎಂದು ಮನವಿ ಮಾಡುತ್ತಾರೆ.

‘ಹುಮನಾಬಾದ್ ಹೊರವಲಯದ ಚಿದ್ರಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಕಲಾವಿದರೊಬ್ಬರು ಒಟ್ಟು 11 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ 150 ಮೂರ್ತಿಗಳನ್ನು ತಯಾರಿಸಿದ್ದಾರೆ. ಹಬ್ಬ ಹತ್ತಿರ ಬಂದರೂ ಭಕ್ತರು ಬುಕ್‌ ಮಾಡಲು ಮುಂದೆ ಬಂದಿಲ್ಲ. ಆದರೂ ಆಶಾಭಾವನೆಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಮೂರ್ತಿಕಾರ ಬಾಲಾಜಿ ಹೇಳುತ್ತಾರೆ.

ಚಿಟಗುಪ್ಪ ತಾಲ್ಲೂಕಿನ ರಾಮಪುರದ ಕಾಶೀನಾಥ ಶಾಂತಪ್ಪ ಗಿರಗಿರಿ ಐದು ವರ್ಷಗಳಿಂದ ಮಣ್ಣಿನ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕೋವಿಡ್‌ ಅಪ್ಪಳಿಸಿದ ನಂತರ ಲಾಭದ ಲೆಕ್ಕಾಚಾರ ಬುಡಮೇಲಾಗಿದೆ. ಕಲಾವಿದರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ.

‘₹ 30 ರಿಂದ 1,500 ಬೆಲೆಯ ‌ಗಣೇಶನ ಮೂರ್ತಿಗಳು ಮಾರಾಟವಾಗುತ್ತವೆ. ಕಳೆದ ವರ್ಷ ನಷ್ಟ ಅನುಭವಿಸಿದ್ದೇವೆ. ಈ ವರ್ಷವೂ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಕಾಶೀನಾಥ ಗಿರಗಿರಿ ವಿವರಿಸುತ್ತಾರೆ.

ಮೂರ್ತಿಗಳ ತಯಾರಿಕೆಗೆ ಅಗ್ಯವಿರುವ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಕಲಾವಿದರು ಮನೆಯಲ್ಲಿ ಮೂರ್ತಿಗಳನ್ನು ತಯಾರಿಸುವ ಸ್ಥಿತಿಯಲ್ಲಿ ಇಲ್ಲ. 50 ವರ್ಷಗಳಿಂದ ಮೂರ್ತಿ ತಯಾರಿಕೆ ಮಾಡುವುದನ್ನು ಬಿಟ್ಟು ಅವರೇ ಬೇರೆ ಊರುಗಳಿಂದ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

‘ವಿಘ್ನೇಶ್ವರ ನಮ್ಮ ಕೈಬಿಡಲಾರ ಎನ್ನುವ ನಂಬಿಕೆಯಿಂದ ದೊಡ್ಡ ಮೂರ್ತಿಗಳನ್ನೂ ಖರೀದಿಸಿ ತಂದಿದ್ದೇವೆ. ಸರ್ಕಾರ ಸಾರ್ವಜನಿಕ ಗಣಪತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಿದರೆ ಸಮಸ್ಯೆಯಾಗದು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗಲಿದೆ’ ಎಂದು ಹುಲಸೂರಿನ ಕಲಾವಿದರು ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.