ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಾನ ಒತ್ತುವರಿ, ಅನ್ಯರ ಜಾಗ ಕಬಳಿಕೆ ನಿರಂತರ: ಶಾಸಕ ಶರಣು ಸಲಗರ

ಬಸವಕಲ್ಯಾಣದ ಶಾಸಕ ಶರಣು ಸಲಗರ ಗಂಭೀರ ಆರೋಪ
Published 5 ಮಾರ್ಚ್ 2024, 13:17 IST
Last Updated 5 ಮಾರ್ಚ್ 2024, 13:17 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ನಗರದಲ್ಲಿನ ಉದ್ಯಾನಗಳು ಹಾಗೂ ಸರ್ಕಾರಿ ಜಾಗ ಅತಿಕ್ರಮಣ, ಯಾರದೋ ಹೆಸರಿನ ಜಾಗ ಮತ್ತೊಬ್ಬರು ಕಬಳಿಸುವ ಕೆಲಸ ನಿರಂತರವಾಗಿ ನಡೆದಿದೆ’ ಎಂದು ಶಾಸಕ ಶರಣು ಸಲಗರ ದೂರಿದರು.

ತ್ರಿಪುರಾಂತದಲ್ಲಿನ ಗುಡದಪ್ಪ ಓಣಿ ಪಕ್ಕದ ಅರಾಫತ್ ಕಾಲೊನಿಯ ಉದ್ಯಾನದ ಜಾಗದಲ್ಲಿನ ಅಕ್ರಮ ಕಟ್ಟಡ ನೆಲಸಮಗೊಳಿಸುವಾಗ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಗರಸಭೆ ಹಾಗೂ ಇನ್ಯಾವುದೇ ಇಲಾಖೆ ಅನುಮತಿ ಪಡೆಯದೆ ಉದ್ಯಾನ ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ ಕುರಿತು ಮಾಹಿತಿ ಬಂದ ನಂತರ ಪೌರಾಯುಕ್ತರು ಹಾಗೂ ಪೊಲೀಸ್ ಇಲಾಖೆಯವರನ್ನು ಸ್ಥಳಕ್ಕೆ ಕರೆಸಿ ಬುಲ್ಡೋಜರ್‌ನಿಂದ ಎಲ್ಲವನ್ನೂ ತೆರವುಗೊಳಿಸಿದ್ದೇನೆ. ಅತಿಕ್ರಮಣ ನಡೆಸಿದವರ ವಿರುದ್ಧ ದೂರು ದಾಖಲಿಸಿಕೊಂಡು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ನಗರದಲ್ಲಿ ಭೂಗಳ್ಳರ ಸಂಖ್ಯೆ ಹೆಚ್ಚಿದೆ. ದುಡ್ಡಿರುವ ದುಷ್ಟ ಶಕ್ತಿಗಳು ಸರ್ಕಾರಿ ಜಾಗಗಳನ್ನು ಕಬಳಿಸಿ ಕಟ್ಟಡ ಕಟ್ಟುವುದು ಹಾಗೂ ಇತರರಿಗೆ ಮಾರಾಟ ಮಾಡುವುದು ನಡೆದೇ ಇದೆ. ಬಡವರು ಜೀವನದಲ್ಲಿ ಪೂರ್ತಿ ಕಷ್ಟಪಟ್ಟು ದುಡಿದ ಹಣದಲ್ಲಿ ನಿವೇಶನ ಖರೀದಿಸುತ್ತಾರೆ. ಆದರೆ ಕೆಲವರು ಅಂಥ ಜಾಗ ಕಬ್ಜ ಮಾಡಿ ತೊಂದರೆ ನೀಡುತ್ತಿರುವ ಬಗ್ಗೆ ಗೊತ್ತಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯವರು ಇಂಥವರ ವಿರುದ್ಧ ದೂರು ದಾಖಲಿಸಿ ಬಡವರಿಗೆ ನ್ಯಾಯ ಒದಗಿಸಬೇಕು. ನಾನು ಸಹ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳಿದರು.

ಪೌರಾಯುಕ್ತ ಮನೋಜಕುಮಾರ ಕಾಂಬಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT