ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಹಸಿ ಮಾವಿನಿಂದ ಉತ್ತಮ ಆದಾಯ

ಉಪ್ಪಿನಕಾಯಿ, ಚಟ್ನಿ ತಯಾರಿಕೆಗೆ ಮಾವು ಖರೀದಿಸುತ್ತಿರುವ ಜನ
Published 21 ಮಾರ್ಚ್ 2024, 5:56 IST
Last Updated 21 ಮಾರ್ಚ್ 2024, 5:56 IST
ಅಕ್ಷರ ಗಾತ್ರ

ಜನವಾಡ (ಬೀದರ್): ಹೆಚ್ಚಿನ ಮಾವಿನ ಗಿಡಗಳಲ್ಲಿ ಇನ್ನೂ ಮಿಡಿಗಾಯಿಗಳು ಇವೆ. ಆಗಲೇ ಚಿಟ್ಟಾ ಗ್ರಾಮದ ಪ್ರಗತಿ ಪರ ರೈತ ಜಾಫರ್‌ ಮಿಯಾ ಹಸಿ ಮಾವಿನಕಾಯಿ ಮಾರಾಟದಿಂದ ₹ 75 ಸಾವಿರ ಆದಾಯ ಗಳಿಸಿದ್ದಾರೆ.

15 ದಿನಗಳಿಂದ ನಿತ್ಯ ಸರಾಸರಿ ₹ 5 ಸಾವಿರ ಆದಾಯ ಪಡೆಯುತ್ತಿದ್ದಾರೆ. ಇನ್ನೂ 15 ದಿನ ಇದೇ ಪ್ರಮಾಣದ ಗಳಿಕೆಯ ನಿರೀಕ್ಷೆಯಲ್ಲಿ ಇದ್ದಾರೆ.

ಬೀದರ್‌ನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಅವರ ಹಸಿ ಮಾವಿನಕಾಯಿ ಕೆಜಿಗೆ ₹ 60 ರಂತೆ ಮಾರಾಟ ಆಗುತ್ತಿವೆ.

‘ಬಡಾ ಮದ್ರಾಸಿ, ಛೋಟಾ ಮದ್ರಾಸಿ, ನವಾಬ್ ಪುರುಷ್ ತಳಿಗಳು ಸೇರಿದಂತೆ 15 ದಿನಗಳಿಂದ ನಿತ್ಯ ಒಂದು ಕ್ವಿಂಟಲ್ ಹಸಿ ಮಾವು ಮಾರಾಟ ಮಾಡುತ್ತಿದ್ದೇನೆ. ಯೋಗ್ಯ ಧಾರಣೆ ಇರುವುದರಿಂದ ಉತ್ತಮ ಆದಾಯ ಬರುತ್ತಿದೆ’ ಎಂದು ಹೇಳುತ್ತಾರೆ ಜಾಫರ್‌ ಮಿಯಾ.

‘ಒಂದು ಹಸಿ ಮಾವಿನಕಾಯಿ ತೂಕ 500 ಗ್ರಾಂ.ನಿಂದ 750 ಗ್ರಾಂ. ವರೆಗೆ ಇದೆ. ಜನ ಉಪ್ಪಿನಕಾಯಿ, ಚಟ್ನಿ ತಯಾರಿಸಲು ಖರೀದಿಸುತ್ತಿದ್ದಾರೆ. ಮಾವು ಗಿಡಗಳ ನಿರ್ವಹಣೆ ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿದರೆ ಕ್ವಿಂಟಲ್‍ಗೆ ಸರಾಸರಿ ₹5 ಸಾವಿರ ಗಳಿಕೆ ಆಗುತ್ತಿದೆ’ ಎಂದು ತಿಳಿಸುತ್ತಾರೆ.

‘ನನಗೆ 15 ಎಕರೆ ಜಮೀನು ಇದೆ. ಐದು ವರ್ಷಗಳ ಹಿಂದೆ ಏಳು ಎಕರೆಯಲ್ಲಿ 900 ಮಾವಿನ ಸಸಿಗಳನ್ನು ಹಚ್ಚಿದ್ದೇನೆ. 200 ಗಿಡಗಳು ಈಗ ಅಧಿಕ ಫಲ ನೀಡುತ್ತಿವೆ’ ಎಂದು ಹೇಳುತ್ತಾರೆ.


‘ಕರೆ ಕೊಬ್ಬರಿ, ಗೋಲಾ, ಬಡಾ ಸೇಬ್ ತಳಿಯ ಮಾವಿನ ಮರಗಳೂ ತೋಟದಲ್ಲಿ ಇವೆ. ಮಾರುಕಟ್ಟೆಗೆ ಬೇರೆಯವರ ಹಸಿ ಮಾವು ಬರಲು ಇನ್ನೂ 15 ದಿನಗಳು ಆಗಲಿವೆ. ಆ ವೇಳೆಗೆ ನಮ್ಮ ತೋಟದಲ್ಲಿನ ಮಾವು ಮಾಗಲಿವೆ. ಸುವಾಸಿತ ಹಾಗೂ ತಿನ್ನಲು ರುಚಿಕರವಾಗಿರಲಿವೆ. ಮಾಗಿದ ಮಾವು ಮಾರಾಟದಿಂದ ಹಸಿ ಮಾವಿಗಿಂತ ಎರಡು-ಮೂರು ಪಟ್ಟು ಹೆಚ್ಚು ಆದಾಯ ಬರಲಿದೆ’ ಎಂದು ತಿಳಿಸುತ್ತಾರೆ.

ಗಿಡದಿಂದ ಹಸಿ ಮಾವು ಇಳಿಸುತ್ತಿರುವ ಜಾಫರ್‌ ಮಿಯಾ
ಗಿಡದಿಂದ ಹಸಿ ಮಾವು ಇಳಿಸುತ್ತಿರುವ ಜಾಫರ್‌ ಮಿಯಾ

‘ಪ್ರತಿ ವರ್ಷ ಕಲಬುರಗಿ, ಬೆಂಗಳೂರು, ಮುಂಬೈನಿಂದ ಪರಿಚಯಸ್ಥರು ಖಾತೆಗೆ ಹಣ ಜಮೆ ಮಾಡಿ, ಮಾವು ಕಳಿಸಲು ತಿಳಿಸುತ್ತಾರೆ. ಅವರಿಗೆ ಬಸ್ ಮೂಲಕ ಮಾವು ಕಳುಹಿಸಿಕೊಡುತ್ತೇನೆ’ ಎಂದು ನುಡಿಯುತ್ತಾರೆ.

‘ಮಾವಿನ ಗಿಡಗಳ ಮಧ್ಯೆ ಶ್ರೀಗಂಧ, ಪಪ್ಪಾಯಿ, ಕಲ್ಲಂಗಡಿ, ಮೆಣಸಿನಕಾಯಿ ಸಹ ಬೆಳೆದಿದ್ದೇನೆ. ಮಿಶ್ರ ಬೇಸಾಯದಿಂದಾಗಿ ಕೃಷಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯವಾಗುತ್ತಿದೆ’ ಎಂದು ತಿಳಿಸುತ್ತಾರೆ.

ಮಾರುಕಟ್ಟೆಗೆ ಒಯ್ಯಲು ಸಂಗ್ರಹಿಸಿರುವ ಮಾವು
ಮಾರುಕಟ್ಟೆಗೆ ಒಯ್ಯಲು ಸಂಗ್ರಹಿಸಿರುವ ಮಾವು
ಹಸಿ ಮಾವಿನಿಂದ ₹1.5 ಲಕ್ಷ ಸೇರಿದಂತೆ ಈ ವರ್ಷ ಮಾವಿನಿಂದ ₹ 5 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ.
ಜಾಫರ್‌ ಮಿಯಾ ಚಿಟ್ಟಾದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT