ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ನೆರವಿಗೆ ಸರ್ಕಾರ ಧಾವಿಸಲಿ: ಸಿದ್ರಾಮಪ್ಪ ಆಣದೂರೆ

ಪ್ರಗತಿಪರ ರೈತ ಶೇಷರಾವ್ ಹೊಲದಲ್ಲಿ ಮಾಸಿಕ ಸಭೆ
Last Updated 11 ಸೆಪ್ಟೆಂಬರ್ 2020, 2:49 IST
ಅಕ್ಷರ ಗಾತ್ರ

ಭಾಲ್ಕಿ: ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದ್ದರೂ ಸೂಕ್ತ ನೀರಾವರಿ ವ್ಯವಸ್ಥೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆ ಅರಿತು ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಒತ್ತಾಯಿಸಿದರು.

ತಾಲ್ಲೂಕಿನ ಕಣಜಿ ಗ್ರಾಮದ ಪ್ರಗತಿಪರ ರೈತ ಶೇಷರಾವ್ ಕಣಜಿಕರ್ ಅವರ ಹೊಲದಲ್ಲಿ ಗುರುವಾರ ಆಯೋಜಿಸಿದ್ದ ಮಾಸಿಕ ರೈತ ಸಭೆ ಹಾಗೂ ಬೆಳೆ ಪ್ರಾತ್ಯಕ್ಷಿತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇಂದಿಗೂ ರೈತರು ಸಾಂಪ್ರದಾಯಿಕ ಬೆಳೆಗಳಾದ ಕಬ್ಬು, ಸೋಯಾಬಿನ್, ಹೆಸರು, ಉದ್ದು, ಜೋಳ, ಕಡಲೆ ಬೆಳೆಯುತ್ತಿದ್ದಾರೆ. ಐದು ವರ್ಷಗಳಿಂದ ಸರಿಯಾಗಿ ಬೆಳೆ ಕೈಸೇರುತ್ತಿಲ್ಲ. ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ ರೈತರು ಆತ್ಮಹತ್ಯೆಯಂತಹ ದಾರಿ ತುಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಿಂದಲೇ ರೈತರ ಜೀವನಾಡಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‍ಎಸ್‍ಕೆ) ಆರಂಭಿಸಿ, ರೈತರ ಬಾಕಿ ಹಣ ಪಾವತಿಸಬೇಕು. ಅತಿವೃಷ್ಟಿಯಿಂದ ಹೆಸರು ಬೆಳೆ ಹಾಳಾಗಿದ್ದು, ಸಮೀಕ್ಷೆ ಮಾಡಿಸಿ ವೈಜ್ಞಾನಿಕ ಬೆಳೆ ಪರಿಹಾರ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3,500 ದರ ಘೋಷಣೆ ಮಾಡಿ ರೈತರಿಂದ ಕಬ್ಬು ಖರೀದಿಸುವುದು ಎಂದು ಆಗ್ರಹಿಸಿದರು.

ರೈತರ ಪಂಪ್‍ಸೆಟ್‍ಗೆ 24 ಗಂಟೆ ವಿದ್ಯುತ್ ಪೂರೈಸಬೇಕು. ಜಿಲ್ಲೆಯ ಎಲ್ಲ ಪಿಕೆಪಿಎಸ್‍ಗಳಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು. ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಭೂಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಪಡಿಸುವುದು ಮತ್ತು ವಿದ್ಯುತ್ ನಿಗಮಗಳ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಗಣಪತಿ ರಾವ್ ಖೂಬಾ, ಪ್ರಗತಿಪರ ರೈತ ಶೇಷರಾವ್ ಕಣಜಿಕರ್
ಮಾತನಾಡಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಉಪಾಧ್ಯಕ್ಷರಾದ ಸಿದ್ದಣ್ಣ ಭುಶೆಟ್ಟಿ, ಶಂಕ್ರೆಪ್ಪ ಪಾರಾ, ಚಂದ್ರಶೇಖರ ಜಮಖಂಡಿ, ಕಮಲನಗರ ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಹುಮಾನಾಬಾದ್ ಘಟಕದ ಅಧ್ಯಕ್ಷ ಸತೀಶ ನನ್ನೂರೆ, ಬೀದರ್ ಘಟಕದ ಅಧ್ಯಕ್ಷ ನಾಗಯ್ಯ ಸ್ವಾಮಿ, ಔರಾದ್ ಘಟಕದ ಅಧ್ಯಕ್ಷ ಪ್ರಕಾಶ ಬಾವುಗೆ, ಈರಣ್ಣ ದುಬಲಗುಂಡಿ, ಸುಭಾಷರಾವ್ ಕಣಜಿಕರ್, ಸಂಜೀವಕುಮಾರ ಕಣಜಿಕರ್, ಪ್ರಕಾಶ ಸೋನಜಿ, ಬಾಬುರಾವ ಸೋನಜಿ, ಗುಂಡಪ್ಪ ಭಾತಂಬ್ರಾ, ಸೋಮನಾಥ ಟೋಕರೆ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾವತಿ ಕಾರಬಾರಿ, ಬಸವಕಲ್ಯಾಣ ಘಟಕದ ಅಧ್ಯಕ್ಷ ಕಾಶಪ್ಪ ಶೇರಿಕಾರ್, ವೈಜಿನಾಥ ಬುಯ್ಯ, ಗುರಲಿಂಗಪ್ಪ ಮೇಲ್ದೊಡ್ಡಿ, ಸುಭಾಷ ರಗಟೆ, ಭಾಲ್ಕಿ ಮಹಿಳಾ ಘಟಕದ ಗೌರವಾಧ್ಯಕ್ಷೆ ಸುವರ್ಣ ಬಳತೆ, ಅಧ್ಯಕ್ಷೆ ಮಹಾನಂದಾ ದೇಶಮುಖ, ಉಪಾಧ್ಯಕ್ಷರಾದ ವನಿತಾ ಮಾಶೆಟ್ಟೆ, ಶ್ರೀದೇವಿ ಹುಣಜೆ, ಕಾರ್ಯದರ್ಶಿ ವಿಜಯಲಕ್ಷ್ಮಿ ಮಾಶೆಟ್ಟೆ, ಸಹ ಕಾರ್ಯದರ್ಶಿ ಶ್ರೀದೇವಿ ಖೇಡ್, ಸಂಘಟನಾ ಕಾರ್ಯದರ್ಶಿ ರಾಜೇಶ್ವರಿ ವಂಕೆ, ಕಲ್ಪನಾ ಮಾಶೆಟ್ಟೆ, ಉಮಾ ಮಾಶೆಟ್ಟೆ, ರೇಖಾ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT