ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುನಾನಕ ಸಂಸ್ಥೆ ಎಲ್ಲದಕ್ಕೂ ಮಾದರಿ: ಪ್ರೊ.ಬಿ.ಜಿ.ಮೂಲಿಮನಿ

Last Updated 4 ನವೆಂಬರ್ 2022, 15:21 IST
ಅಕ್ಷರ ಗಾತ್ರ

ಬೀದರ್‌: ‘ಇಂದು ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ. ಗುರುನಾನಕ ಶಿಕ್ಷಣ ಸಂಸ್ಥೆ ಮಾತ್ರ ಗುರುನಾನಕರ ತತ್ವ ಹಾಗೂ ಆದರ್ಶಗಳನ್ನು ಪಾಲಿಸುತ್ತಿದೆ. ವೈಚಾರಿಕತೆ, ಸಹಿಷ್ಣುತೆ ಹಾಗೂ ಮಾನವೀಯತೆ ಸಂಸ್ಥೆಯಲ್ಲಿ ಅಡಕವಾಗಿದೆ. ಈ ಸಂಸ್ಥೆ ಇನ್ನುಳಿದ ಎಲ್ಲ ಸಂಸ್ಥೆಗಳಿಗೂ ಮಾದರಿಯಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಹೇಳಿದರು.

ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್‌ ಸಿಂಗ್ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಬಲಬೀರ್‌ ಸಿಂಗ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗೆ ಸಂದ ಗೌರವವಾಗಿದೆ’ ಎಂದು ಬಣ್ಣಿಸಿದರು.

‘ಹಿಂದುಳಿದ ಕ್ಷೇತ್ರದಲ್ಲಿ ಬಂದು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಂಸ್ಥೆ ಆರಂಭಿಸಿರುವ ಎಂಜಿನಿಯರಿಂಗ್‌ ಕಾಲೇಜಿಗೆ ವಿಶ್ವವಿದ್ಯಾಲಯವಾಗುವ ಎಲ್ಲ ಅರ್ಹತೆಯೂ ಇದೆ. ಬಲಬೀರ್‌ಸಿಂಗ್‌ ಅಂಥವರು ಇಲ್ಲಿಗೆ ಬಂದರೆ ಬೀದರ್‌ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್‌ ಮಾತನಾಡಿ, ’ಜೋಗಾ ಸಿಂಗ್‌ರ ನಿಧನದ ನಂತರ ಬೀದರ್‌ ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಸೇವೆಗಾಗಿಯೇ ಗಟ್ಟಿ ನಿರ್ಧಾರ ಮಾಡಿ ಇಲ್ಲಿ ಉಳಿದುಕೊಂಡೇವು. ಇಂದು ಗುರುನಾನಕ ಶಿಕ್ಷಣ ಸಂಸ್ಥೆ ಹೆಮ್ಮೆರವಾಗಿ ಬೆಳೆದಿದೆ. ಬೀದರ್‌ ಅಭಿವೃದ್ಧಿಯಲ್ಲೂ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.

‘ಇಂದು ನಾವು ಬೀದರ್‌ನವರು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಸಂಸ್ಥೆಯ ಅಡಿ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಆಸ್ಪತ್ರೆಯ ಮೂಲಕ ವೈದ್ಯಕೀಯ ಸೇವೆ ಕೊಡಲಾಗುತ್ತಿದೆ. ಸರ್ಕಾರ ಸಂಸ್ಥೆಯ ಸೇವೆ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದರು.

ನಾಗರಿಕ ಸನ್ಮಾನ ಸ್ವೀಕರಿಸಿದ ಬಲಬೀರ್‌ ಸಿಂಗ್‌ ಮಾತನಾಡಿ, ‘ಪ್ರಶಸ್ತಿಯ ಶ್ರೇಯ ಸಂಸ್ಥೆಯನ್ನು ಕಟ್ಟಿದ ನಮ್ಮ ಹಿರಿಯರು ಹಾಗೂ ಜೋಗಾಸಿಂಗ್‌ ಅವರಿಗೆ ಸಲ್ಲುತ್ತದೆ. ನಾನು ಅವರ ಸೇವೆಯನ್ನು ಮುಂದುವರಿಸಿಕೊಂಡು ಹೊರಟಿದ್ದೇನೆ. ಸಂಸ್ಥೆಯ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ ರಾಜ್ಯ ಸರ್ಕಾರಕ್ಕೆ ಋಣಿಯಾಗಿದ್ದೇನೆ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

‘ಪ್ರಶಸ್ತಿ ನನ್ನೊಬ್ಬನಿಗೆ ದೊರಕಿಲ್ಲ. ಜಿಲ್ಲೆಯ ಜನರಿಗೆ ಲಭಿಸಿದೆ. ಗುರುನಾನಕರು ತೋರಿಸಿದ ಮಾರ್ಗದಲ್ಲಿ ಸೇವೆ ಮುಂದುವರಿಸುವೆ’ ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ, ಹಲಬರ್ಗಾದ ಹಾವಲಿಂಗೇಶ್ವರ ಶಿವಾಚಾರ್ಯ, ಗುರುದ್ವಾರ ಪ್ರಬಂಧಕ ಕಮಿಟಿ ವ್ಯವಸ್ಥಾಪಕ ದರ್ಬಾರಾ ಸಿಂಗ್, ರೌಜಾ ಗ್ರುಪ್ ಆಫ್‌ ಸ್ಕೂಲ್‌ನ ಮುಫ್ತಿ ಸೈಯದ್ ಸಿರಾಜುದ್ದಿನ್, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಜನೀಶ ವಾಲಿ ಪಾಲ್ಗೊಂಡಿದ್ದರು.

ಸಮಿತಿ ಉಪಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ಕಾರ್ಯದರ್ಶಿ ಅಬ್ದುಲ್‌ ಖದೀರ್, ಸಂಯೋಜಕ ಜಗನ್ನಾಥ ಹೆಬ್ಬಾಳೆ, ಸದಸ್ಯರಾದ ಬಿ.ಎಸ್‌.ಕುದರೆ, ಶಿವಯ್ಯ ಸ್ವಾಮಿ, ವೀರಶೆಟ್ಟಿ ಮಣಗೆ, ರೇವಣಸಿದ್ದಪ್ಪ ಜಲಾದೆ, ಪಂಡಿತರಾವ್ ಚಿದ್ರಿ, ಶಂಕರರಾವ್ ಹೊನ್ನಾ, ಅಶೋಕಕುಮಾರ ಹೆಬ್ಬಾಳೆ, ವೀರೇಂದ್ರ ಶಾಸ್ತ್ರಿ, ಬಸವರಾಜ ಜಾಬಶೆಟ್ಟಿ, ದೇವೇಂದ್ರ ಕಮಲ, ಎಸ್‌.ವಿ.ಕಲ್ಮಠ ಇದ್ದರು.

ಅಶ್ವಿನಿ ಬಂಪಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಾಜಕುಮಾರ ಹೆಬ್ಬಾಳೆ, ಮಹಾರುದ್ರ ಡಾಕುಳಗಿ, ಸುನೀತಾ ಕೂಡ್ಲಿಕರ್, ಮಹಾನಂದಾ ಮಡಕಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT