ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್| ಅಕ್ಷರ ಜ್ಯೋತಿಗೆ ಇಂದು ವಾರ್ಷಿಕೋತ್ಸವ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯ
Last Updated 22 ಜನವರಿ 2020, 11:45 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿಯ ಹಿರೇಮಠದಲ್ಲಿ 84 ವರ್ಷಗಳಿಂದ ನಡೆಯುತ್ತಿರುವ ಶ್ರೀಹಾನಗಲ್ಲ ಕುಮಾರೇಶ್ವರ ಉಚಿತ ಪ್ರಸಾದ ನಿಲಯ ಜಾತಿ, ಮತ, ಪಂಥ ಭೇದವಿಲ್ಲದೆ ಸಮಾಜದಲ್ಲಿರುವ ದೀನ, ದಲಿತ, ಬಡ, ನಿರ್ಗತಿಕ ವಿದ್ಯಾರ್ಥಿಗಳಿಗೆ ಉಚಿತ ಅನ್ನ, ಆಶ್ರಯ, ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುತ್ತಿದೆ.

ಶತಾಯುಷಿ ಲಿಂ.ಡಾ.ಚನ್ನಬಸವ ಪಟ್ಟದ್ದೇವರು ಈಗಿನ ತೆಲಂಗಾಣದ ಮೋರ್ಗಿಯಲ್ಲಿ 1936ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಕನ್ನಡ ಪಾಠ ಶಾಲೆ ಸ್ಥಾಪಿಸುವುದರ ಜತೆಗೆ ಮುಷ್ಠಿಫಂಡ್ ಮೂಲಕ ಧಾನ್ಯ ಸಂಗ್ರಹಿಸಿ ಉಚಿತ ಪ್ರಸಾದ ನಿಲಯ ನಡೆಸುತ್ತಿದ್ದರು.

ಅಂದಿನ ಕಾಲದ ನಿಜಾಮನ ಉಪಟಳ, ಭೀಕರ ಬರಗಾಲ ಸೇರಿ ಇತರ ಕಾರಣಗಳಿಂದ ಪ್ರಸಾದ ನಿಲಯವನ್ನು ಔರಾದ್ ತಾಲ್ಲೂಕಿನ ಖೇಡ ಸಂಗಮ, ಡಾ.ಜಯದೇವಿ ತಾಯಿ ಲಿಗಾಡೆ, ಬಾಬಾ ಸಾಹೇಬ ವಾರದ ಅವರ ಸಹಕಾರದಿಂದ ಮಹಾರಾಷ್ಟ್ರದ ಸೊಲ್ಲಾಪುರದ ಕುಂಟೋಜಿ ಮಠ, ಕಮಲನಗರಕ್ಕೆ ಸ್ಥಳಾಂತರಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದದೊಂದಿಗೆ ಅಕ್ಷರ ಜ್ಞಾನ ನೀಡಿ ಬದುಕು ರೂಪಿಸಿಕೊಳ್ಳಲು ನೆರವಾಗಿದೆ.

‘1968 ರಲ್ಲಿ ಭಾಲ್ಕಿ ಮಠದಲ್ಲಿ ಉಚಿತ ಪ್ರಸಾದ ನಿಲಯ ಆರಂಭಿಸಲಾಯಿತು. ಆರಂಭದಲ್ಲಿ 8 ರಿಂದ 10 ಇದ್ದ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತ ಸದ್ಯ 400ಕ್ಕೆ ತಲುಪಿದೆ’ ಎಂದು ಹಿರಿಯರು, ಶ್ರೀಮಠದ ಆಪ್ತರಾದ ರಮೇಶ ಪಟ್ನೆ ತಿಳಿಸುತ್ತಾರೆ.

ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ವಿದ್ಯಾರ್ಥಿಗಳು ಹಾನಗಲ್ಲ ಕುಮಾರೇಶ್ವರ ಉಚಿತ ಪ್ರಸಾದ ನಿಲಯದಲ್ಲಿದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ.

ಖ್ಯಾತ ಸಾಹಿತಿ ಶಾಂತರಸರು ಪ್ರಸಾದ ನಿಲಯದ ವಿದ್ಯಾರ್ಥಿಯಾಗಿದ್ದರು. ಪ್ರಸಾದ ನಿಲಯದಲ್ಲಿದ್ದುಕೊಂಡು ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ಶಿಕ್ಷಕ, ಉಪನ್ಯಾಸಕ, ಜೆಇ, ಶಾಲೆಯ ಸಂಸ್ಥಾಪಕ, ಡಾಕ್ಟರ್ ಸೇರಿದಂತೆ ಇತರ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳುತ್ತಾರೆ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿ ಸಂತೋಷ ಸುಂಧಾಳ.

ಸರ್ಕಾರದಿಂದಲೂ ಮಾಡಲು ಕಷ್ಟಕರವಾದ ಕಾರ್ಯಗಳನ್ನು ಬಸವಲಿಂಗ ಪಟ್ಟದ್ದೇವರು, ಶ್ರೀಮಠ ಮಾಡುತ್ತಿದೆ. ಇನ್ನು ಹೆಚ್ಚಿನ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂದು ಜಿಲ್ಲಾ ಕೇಂದ್ರದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯ ನಡೆಸುತ್ತಿದ್ದಾರೆ.

ಪಟ್ಟದ್ದೇವರು ಬಡ, ನಿರ್ಗತಿಕ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಪರ ಇಟ್ಟಿರುವ ಕಾಳಜಿಯಿಂದಲೇ ನಾವಿಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗೌರವಯುತ ಜೀವನ ಸಾಗಿಸುತ್ತಿದ್ದೇವೆ ಎಂದು ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳಿಗಾಗಿರುವ ವಿಜಯಕುಮಾರ, ಬಸವರಾಜ, ಮೋಹನರೆಡ್ಡಿ ಹಾಗೂ ಧನರಾಜ ಸಂತಸದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT