ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂಜಾ ಸಂತ್ರಸ್ತರಿಂದ ಬೃಹತ್ ವಾಹನಗಳ ಜಾಥಾ

ರಾಜ್ಯ ಸರ್ಕಾರದ ಗಮನ ಸೆಳೆಯಲು ವಿಭಿನ್ನ ಪ್ರತಿಭಟನೆ
Last Updated 5 ಜನವರಿ 2023, 13:29 IST
ಅಕ್ಷರ ಗಾತ್ರ

ಬೀದರ್‌: ಕಾರಂಜಾ ನೀರಾವರಿ ಯೋಜನೆ ಸಂತ್ರಸ್ತರು ಭೂಮಿಗೆ ವೈಜ್ಞಾನಿಕ ಪರಿಹಾರ ನೀಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಕುರಿತು ಆಡಳಿತದ ಗಮನ ಸೆಳೆಯಲು ಬೃಹತ್ ವಾಹನಗಳ ಜಾಥಾ ಮೂಲಕ ನಗರದಲ್ಲಿ ಗುರುವಾರ ವಿಭಿನ್ನ ಪ್ರತಿಭಟನೆ ನಡೆಸಿದರು.


ಕಾರಂಜಾ ಯೋಜನೆಯಲ್ಲಿ ಮನೆ, ಮಠ ಕಳೆದುಕೊಂಡ 28 ಗ್ರಾಮಗಳ ಸಂತ್ರಸ್ತರು ನೂರಾರು ಬೈಕ್, ಕಾರು, ಜೀಪ್, ಟ್ರ್ಯಾಕ್ಟರ್ ಮೊದಲಾದ ವಾಹನಗಳೊಂದಿಗೆ ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಸ್ಕೂಲ್ ಆವರಣಕ್ಕೆ ಬಂದು ಸೇರಿದರು.


ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಮುಂದಾಳತ್ವದಲ್ಲಿ ರೋಟರಿ ಕನ್ನಡಾಂಬೆ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ, ಶಿವನಗರ ಸಂಚಾರ ಸಿಗ್ನಲ್, ನ್ಯೂ ಆದರ್ಶ ಕಾಲೊನಿ, ಚಿದ್ರಿ ರಸ್ತೆ, ಮೈಲೂರು, ಗುಂಪಾ, ಬಿ.ವಿ.ಬಿ. ಕಾಲೇಜು, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೋಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ್, ಚೌಬಾರಾ, ಗವಾನ್ ಚೌಕ್, ಉಸ್ಮಾನ್ ಗಂಜ್, ಶಹಾಗಂಜ್ ಮಾರ್ಗವಾಗಿ ವಾಹನಗಳ ಜಾಥಾದಲ್ಲಿ ಅಂಬೇಡ್ಕರ್ ವೃತ್ತಕ್ಕೆ ಬಂದರು.


ಅಲ್ಲಿ ಕೆಲ ಕಾಲ ವಾಹನಗಳ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಬಳಿಕ ಶಿವಾಜಿ ವೃತ್ತದ ಸಮೀಪ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಬಹಿರಂಗ ಸಭೆ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಅವರು ಮನವಿ ಪತ್ರ ಸ್ವೀಕರಿಸಿದರು.


ಕಾರಂಜಾ ಯೋಜನೆಯಲ್ಲಿ ಮನೆ, ಮಠ ಕಳೆದುಕೊಂಡ ಕುಟುಂಬಗಳಿಗೆ ಸಂವಿಧಾನದ 371(ಜೆ) ಅಡಿ ಮಾನವೀಯ ನೆಲೆಯಲ್ಲಿ ವೈಜ್ಞಾನಿಕ ಪರಿಹಾರ ಒದಗಿಸಬೇಕು. ಕೃಷ್ಣಾ ಭಾಗ್ಯ ಜಲ ನಿಗಮದ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಮಾದರಿಯ ಪರಿಹಾರ ಕಲ್ಪಿಸಬೇಕು. ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಏಕರೂಪದ ಪರಿಹಾರ ಕೊಡಬೇಕು. ಗೋದಾವರಿ ಕಣಿವೆ ಪ್ರದೇಶದ ಕಾರಂಜಾ ನೀರಾವರಿ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ, ಕೃಷ್ಣ ಜಲಭಾಗ್ಯ ನಿಗಮಕ್ಕೆ ಸೇರಿಸಿ, ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಗೋದಾವರಿ ಜಲಾನಯನ ಪ್ರದೇಶದ ಜಿಲ್ಲೆಯ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅನಂತ ರೆಡ್ಡಿ ಟಿ. ಮಿರ್ಜಾಪುರ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಆರ್‍ಪಿಐ (ಅಂಬೇಡ್ಕರ್) ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್, ಕೆ.ಆರ್.ಎಸ್. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ವರ್ಮಾ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಘಂಟೆ, ಮುಸ್ಲಿಮ್ ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ವಹೀದ್ ಲಖನ್, ಮುಖಂಡರಾದ ಹಣ್ಮು ಪಾಜಿ, ವಿನಯ ಮಾಳಗೆ, ಶಿವಕುಮಾರ ತುಂಗಾ, ಅಭಿಷೇಕ ಮಠಪತಿ, ಮನಮೀತ್ ಸಿಂಗ್, ರೋಹನಕುಮಾರ್ ಪಾಲ್ಗೊಂಡಿದ್ದರು. ಸಂತ್ರಸ್ತರು ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT