ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್| ಹೆದ್ದಾರಿ ಕಾಮಗಾರಿ ಅಪೂರ್ಣ; ಅತಿವೃಷ್ಟಿಗೂ ರಸ್ತೆ ಹಾಳು

ಜಿಲ್ಲೆಯಲ್ಲಿ ಸಂಚರಿಸುವ ಅಂತರರಾಜ್ಯ ಪ್ರಯಾಣಿಕರಿಗೂ ಸಮಸ್ಯೆ
Last Updated 1 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯನ್ನು ಸೀಳಿಕೊಂಡು ಹೋಗಿರುವ ಹೈದರಾಬಾದ್‌–ಸೋಲಾಪುರ ರಸ್ತೆಯನ್ನು ಬಿಟ್ಟರೆ ಜಿಲ್ಲೆಯಲ್ಲಿ ಒಂದು ಹೆದ್ದಾರಿಯೂ ಚೆನ್ನಾಗಿಲ್ಲ. ಕೆಲ ಕಡೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅಪೂರ್ಣವಾಗಿದ್ದರೆ, ಮತ್ತೆ ಕೆಲಕಡೆ ಅತಿವೃಷ್ಟಿಯಿಂದಾಗಿ ಇದ್ದ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಜಿಲ್ಲೆಯ ಜನ ಅಷ್ಟೇ ಅಲ್ಲ; ಅಂತರರಾಜ್ಯ ಪ್ರಯಾಣಿಕರೂ ತೊಂದರೆ ಅನುಭವಿಸುತ್ತಿದ್ದಾರೆ.

ಜನಹಿತವನ್ನು ಗಮನದಲ್ಲಿಟ್ಟುಕೊಂಡು ಸಾಮೂಹಿಕ ಪ್ರಯತ್ನ ನಡೆಸಿ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಬೇಕಾದ ಜನಪ್ರತಿನಿಧಿಗಳು ಸ್ವ‍ಪ್ರತಿಷ್ಠೆಗಾಗಿ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ರಾಜಕಾರಣಿಗಳ ಗುದ್ದಾಟದಲ್ಲಿ ಸಾರ್ವಜನಿಕರು ನಿತ್ಯ ಸಂಕಟ ಎದುರಿಸುತ್ತಿದ್ದಾರೆ.

ಬೀದರ್-ಔರಾದ್ ಮಧ್ಯದ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 161ಎ)ಯನ್ನು ದುರಸ್ತಿ ಮಾಡುವಂತೆ ಜಿಲ್ಲೆಯ ಜನ ಐದು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲ್ಲೇ ಇದ್ದಾರೆ. ಆದರೆ, ಯಾರೊಬ್ಬರೂ ಗಂಭೀರವಾಗಿಲ್ಲ. ಹೆದ್ದಾರಿ ಸುಧಾರಣೆ ಜನರ ಪಾಲಿಗೆ ಕನಸಾಗಿದೆ.

ಮಾಂಜ್ರಾ ನದಿಗೆ ನಿರ್ಮಿಸಿದ ಸೇತುವೆಯನ್ನು ಅದೆಷ್ಟು ಬಾರಿ ದುರಸ್ತಿ ಮಾಡಿದ್ದಾರೋ ಲೆಕ್ಕವಿಲ್ಲ. ಅಧಿಕಾರಿಗಳು ಖರ್ಚು ಮಾಡಿರುವ ಮೊತ್ತವನ್ನು ನೋಡಿದರೆ ಎರಡು ಹೊಸ ಸೇತುವೆಗಳನ್ನು ನಿರ್ಮಿಸಬಹುದಿತ್ತು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡದಿರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ, ಜನರ ತೆರಿಗೆ ಹಣವೂ ರಸ್ತೆ ಅಭಿವೃದ್ಧಿ ಹೆಸರಲ್ಲಿ ಪೋಲಾಗುತ್ತಿದೆ.

ಕಳಪೆ ಕಾಮಗಾರಿ ಹಾಗೂ ಸೇತುವೆಯ ಎರಡೂ ಬದಿ ಭೂಕುಸಿತ ಆಗಿ ಈ ರಸ್ತೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ. ಒಂದೂವರೆ ವರ್ಷದಲ್ಲಿ ಎರಡನೇ ಬಾರಿ ಸಂಚಾರ ನಿರ್ಬಂಧಿಸಲಾಗಿದೆ. ಔರಾದ್‌ ಹಾಗೂ ಬೀದರ್ ತಾಲ್ಲೂಕಿನ ಜನ ಕೌಠಾ ಸೇತುವೆ ಬದಲು ಕಂದಗೂಳ ಸೇತುವೆ ಮಾರ್ಗವಾಗಿ ಸಂಚರಿಸಬೇಕಾಗಿದೆ. ಸಂಚಾರ ನಿರ್ಬಂಧದಿಂದಾಗಿ ವ್ಯಾಪಾರ ವಹಿವಾಟಿನ ಮೇಲೂ ದುಷ್ಪರಿಣಾಮ ಬೀರಿದೆ.

ಬೀದರ್‌–ಔರಾದ್‌ ಹೆದ್ದಾರಿ ಮೇಲ್ದರ್ಜೆಗೇರಿಸಲು ₹135 ಕೋಟಿ ಮಂಜೂರಾಗಿದೆ. ಹೆದ್ದಾರಿ ಪ್ರಾಧಿಕಾರ ಕಾಮಗಾರಿಯ ಟೆಂಡರ್‌ ಸಹ ಕರೆದಿದೆ. ಆದರೆ, ಹೈದರಾಬಾದ್‌ನ ಕಂಪನಿಯೊಂದು ಹೈಕೋರ್ಟ್‌ ಮೊರೆ ಹೋಗಿರುವ ಕಾರಣ ಹೈಕೋರ್ಟ್‌ ಟೆಂಡರ್‌ಗೆ ತಡೆಯಾಜ್ಞೆ ನೀಡಿದೆ ಎಂದು ಅಧಿಕಾರಿಗಳು ಮೇಲಿಂದ ಮೇಲೆ ಹೇಳುತ್ತಲೇ ಇದ್ದಾರೆ.

* * * *

ದೊರೆಯದ ಅರಣ್ಯ ಇಲಾಖೆ ಅನುಮತಿ

ಬೀದರ್‌ನ ನೌಬಾದ್‌ನಿಂದ ಕಮಲನಗರ ಸಮೀಪದ ಮಹಾರಾಷ್ಟ್ರದ ಗಡಿ ವರೆಗೆ ₹ 309 ಕೋಟಿ ವೆಚ್ಚದಲ್ಲಿಹೆದ್ದಾರಿ (ಎನ್‌.ಎಚ್‌ 50) ನಿರ್ಮಾಣಕ್ಕೆ 2016ರ ನವೆಂಬರ್ 29ರಂದು ಟೆಂಡರ್‌ ಕರೆಯಲಾಗಿತ್ತು. ಗುಜರಾತ್‌ನ ಪಟೇಲ್‌ ಇನ್ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. 54 ಕಿ.ಮೀ. ಉದ್ದದ ಚತುಷ್ಪಥ ಹೆದ್ದಾರಿ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಬೀದರ್‌ನ ನೌಬಾದ್‌ನಿಂದ ಭಾಲ್ಕಿ ತಾಲ್ಲೂಕಿನ ಖಾನಾಪುರ ವರೆಗೆ ಅರಣ್ಯ ಇಲಾಖೆ ಹೆದ್ದಾರಿ ವಿಸ್ತರಣೆಗೆ ಅನುಮತಿ ನೀಡಿಲ್ಲ. ಇದ್ದ ರಸ್ತೆಯೂ ಹಾಳಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಬೀದರ್‌–ಹುಮನಾಬಾದ್‌ ಮಧ್ಯದ 47 ಕಿ.ಮೀ ಉದ್ದದ ಹೆದ್ದಾರಿ (ಎನ್‌ಎಚ್‌50) ಯನ್ನು ಮೇಲ್ದರ್ಜೆಗೇರಿಸಲು 2016ರ ಸೆಪ್ಟೆಂಬರ್ 29ರಂದು ಟೆಂಡರ್‌ ಕರೆಯಲಾಗಿತ್ತು. ಹೈದರಾಬಾದ್‌ನ ಐಎಲ್ ಆ್ಯಂಡ್ ಎಫ್‌ಎಸ್‌ ಎಂಜಿನಿಯರಿಂಗ್‌ ಆ್ಯಂಡ್‌ ಕನ್‌ಸ್ಟ್ರಕ್ಷನ್‌ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಎರಡು ವರ್ಷಗಳ ಅವಧಿಯಲ್ಲಿ ಹೆದ್ದಾರಿ ಕಾಮಗಾರಿ ಮುಗಿಯಬೇಕಿತ್ತು.
ಗುತ್ತಿಗೆ ಪಡೆದ ಕಂಪನಿ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಗುತ್ತಿಗೆ ಕಂಪನಿಯವರು ಯಂತ್ರೋಪಕರಣಗಳನ್ನು ಹೆದ್ದಾರಿ ಮದ್ಯೆಯೇ ಬಿಟ್ಟು ಹೋಗಿದ್ದಾರೆ. ಕೆಲವು ಕಡೆ ಅರ್ಧ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಬೀದರ್‌ ತಾಲ್ಲೂಕಿನ ಅಣದೂರ ಸೇರಿದಂತೆ ಅನೇಕ ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ.

‘ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಎರಡು ವರ್ಷಗಳಾಗಿವೆ. ಯಂತ್ರಗಳು ತುಕ್ಕು ಹಿಡಿದಿವೆ. ವಾಹನಗಳ ಓಡಾಟದಿಂದ ದೂಳು ಬೆಳೆಗಳ ಮೇಲೆ ಬಿದ್ದು ಹಾಳಾಗುತ್ತಿವೆ. ಮನೆಗಳಿಗೂ ದೂಳು ನುಗ್ಗುತ್ತಿದೆ. ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲ’ ಎಂದು ಬೀದರ್ ತಾಲ್ಲೂಕಿನ ಆಣದೂರಿನ ಚೇತನ ಸೋರಳ್ಳಿ ಬೇಸರ ವ್ಯಕ್ತಪಡಿಸುತ್ತಾರೆ.

* * * *

ಭಾಲ್ಕಿ: ಅತಿವೃಷ್ಟಿಗೆ 137 ಕಿ.ಮೀ ರಸ್ತೆ ಹಾಳು

-ಬಸವರಾಜ್‌ ಎಸ್‌.ಪ್ರಭಾ

ಭಾಲ್ಕಿ: ಅತಿವೃಷ್ಟಿಗೆ ಖಟಕಚಿಂಚೋಳಿ, ಹಲಬರ್ಗಾ, ಲಖನಗಾಂವ, ಸಾಯಿಗಾಂವ ಸೇರಿದಂತೆ ತಾಲ್ಲೂಕಿನ ಆರು ಹೋಬಳಿಗಳಲ್ಲಿ ಒಟ್ಟು 137 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ರಸ್ತೆ ಮಧ್ಯೆ ಅಲ್ಲಲ್ಲಿ ತಗ್ಗು, ಗುಂಡಿಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.

ಪಂಚಾಯತ್‌ ರಾಜ್‌ ಇಲಾಖೆ ಅಡಿಯಲ್ಲಿ ಬರುವ 36 ರಸ್ತೆಗಳ ಮಧ್ಯದಲ್ಲಿ ಮೊಳಕಾಲುದ್ದ ತಗ್ಗುಗಳು ಬಿದ್ದಿವೆ. ರಸ್ತೆಯ ಕೊನೆಯ, ಮೇಲ್ಪದರ ಹಾಳಾಗಿದ್ದು, ದ್ವಿಚಕ್ರ, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

‘ಹಲಬರ್ಗಾ-ಕೋಸಂ, ಕೊಂಗಳಿ, ತಳವಾಡ (ಎಂ) ರಸ್ತೆ ಕಿತ್ತುಕೊಂಡು ಹೋಗಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ತಕ್ಷಣ ದುರಸ್ತಿ ಮಾಡಲಾಗಿದೆ. ಕೆಲ ಕಡೆ ಹೊಸದಾಗಿ ರಸ್ತೆ ನಿರ್ಮಾಣ ಮಾಡಬೇಕಿದೆ. ರಸ್ತೆ ದುರಸ್ತಿಗೆ ಅಗತ್ಯವಿರುವ ಅಂದಾಜು ₹ 4.3 ಕೋಟಿ ವೆಚ್ಚದ ಪ್ರಸ್ತಾವವನ್ನು ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ’ ಎಂದು ಪಂಚಾಯತ್‌ರಾಜ್‌ ಇಲಾಖೆ ಎಇಇ ಮುರುಗೆಪ್ಪ ಹೇಳುತ್ತಾರೆ.

‘ಎರಡು ದಶಕಗಳಷ್ಟು ಹಳೆಯದಾಗಿರುವ ಡೊಂಗರಗಿ, ಮೋರಂಬಿ, ಅಳವಾಯಿ, ಗೋಧಿಹಿಪ್ಪರ್ಗಾ ರಸ್ತೆಯಿಂದ ಇತರ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಸಣ್ಣ ಸೇತುವೆಗಳು ಹಾಳಾಗಿವೆ. ಕೆಲ ಕಡೆ ತಾತ್ಕಾಲಿಕವಾಗಿ ರಿಪೇರಿ ಮಾಡಲಾಗಿದೆ. ಸೇತುವೆ ಪಕ್ಕದ ಮಣ್ಣು ಕೊಚ್ಚಿಕೊಂಡು ಹೋಗಿ ಸೇತುವೆಗಳಿಗೆ ಹಾನಿಯಾಗಿದೆ. ದುರಸ್ತಿಗಾಗಿ ₹ 65 ಲಕ್ಷ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವಶಂಕರ ಕಾಮಶೆಟ್ಟಿ ತಿಳಿಸುತ್ತಾರೆ.

ಭಾಲ್ಕಿಯಿಂದ ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಂಚೂರ ಸೇತುವೆಯೂ ಹಾಳಾಗಿದೆ. ಈ ವರ್ಷ ಅತಿವೃಷ್ಟಿಗೆ ಮೂರು ಬಾರಿ ದಿನವಿಡೀ ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡಿತ್ತು. ಹೊಸ ಸೇತುವೆ ನಿರ್ಮಾಣಕ್ಕೆ ₹ 10 ಕೋಟಿ ಬಿಡುಗಡೆ ಮಾಡುವಂತೆ ಶಾಸಕ ಈಶ್ವರ ಖಂಡ್ರೆ ಈಗಾಗಲೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆದಿದ್ದಾರೆ.

* * *

ಸುಗಮ ಸಂಚಾರಕ್ಕೆ ಕುತ್ತು

ಔರಾದ್: ಅತಿವೃಷ್ಟಿಯಿಂದಾಗಿ ತಾಲ್ಲೂಕಿನ ವಿವಿಧೆಡೆ ರಸ್ತೆಗಳು ಕೊಚ್ಚಿ ಹೋಗಿ ಸುಗಮ ಸಂಚಾರಕ್ಕೆ ಕುತ್ತು ಬಂದಿದೆ.

ಬೀದರ್-ಔರಾದ್ ನಡುವಿನ ರಸ್ತೆ ಅಲ್ಲಲ್ಲಿ ಕಿತ್ತುಕೊಂಡು ಹೋಗಿದ್ದು ಮೃತ್ಯುಕೂಪವಾಗಿ ಪರಿಣಮಿಸಿದೆ. ಇದು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಟ್ಟರೂ ಕಳೆದ ಆರು ತಿಂಗಳಿನಿಂದ ಗುಂಡಿಯನ್ನೂ ಮುಚ್ಚಿಲ್ಲ. ಈಚೆಗೆ ಸುರಿದ ಮಳೆಯಿಂದ ಗುಂಡಿಗಳು ಮತ್ತಷ್ಟು ದೊಡ್ಡವಾಗಿ ಗುಂಡಿಗಳಲ್ಲಿ ರಸ್ತೆ ಹುಡುಕಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಕೌಠಾ ಸೇತುವೆ ಬಳಿ ಭೂ ಕುಸಿತ ಆಗಿ ಬೀದರ್-ಔರಾದ್ ಬದಲಿ ರಸ್ತೆಯಲ್ಲಿ ಸಂಚರಿಸಲು ಜಿಲ್ಲಾಡಳಿತ ಆದೇಶ ಮಾಡಿದೆ. ಕಂದಗೂಳ, ವಡಗಾಂವ್, ಸಂತಪುರ ಮೂಲಕ ಹಾದುವ ಹೋಗುವ ಬದಲಿ ರಸ್ತೆಯೂ ಹಾಳಾಗಿದೆ.
ಅತಿವೃಷ್ಟಿಯಿಂದಾಗಿ ರಸ್ತೆ ಪೂರ್ಣ ಕಿತ್ತು ಹೋಗಿದೆ. ಈ ರಸ್ತೆ ಮೇಲಿನ ಎರಡು ಸಣ್ಣ ಸೇತುವೆ ಕುಸಿದು ಬಿದ್ದಿವೆ. ಇದರಿಂದ ಈ ಭಾಗದ ಪ್ರಯಾಣಿಕರು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ.

'ಔರಾದ್ ತಾಲ್ಲೂಕು ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿದೆ. ಸರ್ಕಾರ ಗಡಿ ಭಾಗವನ್ನು ಮೊದಲಿನಿಂದಲೂ ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಸಂತಪುರನಿಂದ ಜಮಗಿ ವರೆಗಿನ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ನೆರೆಯ ತೆಲಂಗಾಣ ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ' ಎಂದು ಭಾರತೀಯ ಕಿಸಾನ್ ಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಅಹಮ್ಮದ್ ಜಮಗಿ ಹೇಳುತ್ತಾರೆ.

'ಜೋಜನಾದಿಂದ-ಕಂದಗೂಳ ವರೆಗಿನ ರಸ್ತೆ ಕೆಟ್ಟು ಹೋಗಿದೆ. ಈಗ ಕೌಠಾ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಕಂದಗೂಳ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ. ವಡಗಾಂವ್-ಚಿಂತಾಕಿ ರಸ್ತೆಯೂ ಹಾಳಾಗಿದೆ. ಕಂದಗೂಳ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಾಗಿ ರಸ್ತೆಗಳು ಇನ್ನಷ್ಟು ಹಾಳಾಗಿವೆ. ಸರ್ಕಾರ ರಸ್ತೆ ದುರಸ್ತಿ ಕಾರ್ಯವನ್ನು ತಕ್ಷಣ ಆರಂಭಿಸಬೇಕು’ ಎಂದು ವಡಗಾಂವ್ ಮತ್ತು ಜಮಗಿ ಗ್ರಾಮಸ್ಥರು ಒತ್ತಾಯಿಸುತ್ತಾರೆ.

'ಮೊದಲೇ ತಾಲ್ಲೂಕಿನ ರಸ್ತೆಗಳು ಸರಿಯಿಲ್ಲ. ಈಚೆಗೆ ಸುರಿದ ಮಳೆಯಿಂದ ಮತ್ತಷ್ಟು ಹಾಳಾಗಿವೆ. ಇದೇ ಕ್ಷೇತ್ರ ಪ್ರತಿನಿಧಿಸುವ ಸಚಿವ ಪ್ರಭು ಚವಾಣ್ ರಸ್ತೆ ದುರಸ್ತಿ ಮಾಡಲು ಗಮನ ಹರಿಸಬೇಕು' ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಧನರಾಜ ಮುಸ್ತಾಪುರ ಹೇಳುತ್ತಾರೆ.
-ಮನ್ಮಥಪ್ಪ ಸ್ವಾಮಿ

* * *

2 ಕಿ.ಮೀ ಕ್ರಮಿಸಲು ಹತ್ತಾರು ಕಿ.ಮೀ ಸುತ್ತಾಟ
ಬಸವಕಲ್ಯಾಣ:
ತಾಲ್ಲೂಕಿನ ರಸ್ತೆಗಳ ಸ್ಥಿತಿ ಅಧೋಗತಿ ಆಗಿದ್ದು, 30 ವರ್ಷಗಳ ಹಿಂದಿನ ಪರಿಸ್ಥಿತಿ ಬಂದೊದಗಿದೆ. ಎಲ್ಲೆಡೆ ತಗ್ಗುಗುಂಡಿಗಳು ನಿರ್ಮಾಣವಾದ್ದರಿಂದ ವಾಹನ ಸಂಚಾರ ದುಸ್ತರವಾಗಿದೆ.

ಅಲ್ಲಲ್ಲಿ ಕೆಲ ರಸ್ತೆಗಳು ಮೊದಲೇ ಹದಗೆಟ್ಟಿದ್ದವು. ಆದರೆ, ಈಚೆಗೆ ಸುರಿದ ಭಾರಿ ಮಳೆಗೆ ಯಾವ ರಸ್ತೆಯೂ ಸರಿಯಾದ ಸ್ಥಿತಿಯಲ್ಲಿ ಉಳಿದಿಲ್ಲ. ಗಂಡೂರಿನಾಲೆಯ ನೀರು ಉಕ್ಕಿ ಹರಿದಿದ್ದರಿಂದ ಕೊಹಿನೂರ ಹೋಬಳಿಯ ಹಾಗೂ ಚುಳಕಿನಾಲೆಯ ನೀರಿನಿಂದ ನಾರಾಯಣಪುರ ಸಮೀಪದ ಹಾಗೂ ಹುಲಸೂರ ಹೋಬಳಿಯ ರಸ್ತೆಗಳು ತೀರ ಹದಗೆಟ್ಟಿವೆ.

ಖೇರ್ಡಾ(ಕೆ), ಶಿರಗಾಪುರ, ಸರಜವಳಗಾ, ಕೊಹಿನೂರ, ವಡ್ಡರಗಾ ರಸ್ತೆಗಳು ಗಂಡೂರಿ ನಾಲೆಯ ನೀರಿಗೆ ಹಾಳಾಗಿವೆ. ಸೇತುವೆಗಳ ಮಣ್ಣು ಕುಸಿದಿದ್ದರಿಂದ ಹಾಗೂ ಅನೇಕ ಕಡೆ ರಸ್ತೆಗಳ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ವಾಹನಗಳಿಗೆ ಸಂಚರಿಸಲು ದಾರಿ ಇಲ್ಲದಂತಾಗಿದೆ. ಅನಿವಾರ್ಯವಾಗಿ ಇಂಥ ರಸ್ತೆಯಿಂದಲೇ ಹೋಗುವ ಪರಿಸ್ಥಿತಿ ಇದೆ. ಕೆಲವರು 2 ಕಿ.ಮೀ ದೂರ ಹೋಗುವುದಕ್ಕಾಗಿ ಹತ್ತಾರು ಕಿ.ಮೀ ಕ್ರಮಿಸಬೇಕಾಗುತ್ತಿದೆ.

ಚುಳಕಿನಾಲೆಯ ಹಿನ್ನೀರಿನಿಂದ ಹಾಳಾದ ಧನ್ನೂರ (ಆರ್) ರಸ್ತೆ ಈಚೆಗೆ ಸೇತುವೆಯ ಮೇಲಿನಿಂದ ನೀರು ಹೋಗಿದ್ದರಿಂದ ಇನ್ನಷ್ಟು ಹದಗೆಟ್ಟಿದೆ. ಜಾನಾಪುರ, ಬೆಟಬಾಲ್ಕುಂದಾ, ಬೇಲೂರ, ಗಡಿಗೌಡಗಾಂವ, ಗೌರ, ಖಂಡಾಳ, ಮಿರಖಲ್, ಗುತ್ತಿ, ಹುಲಸೂರ, ಕೊಂಗಳಿಗೆ ಹೋಗುವ ರಸ್ತೆಗಳ ಸ್ಥಿತಿಯೂ ಸರಿಯಿಲ್ಲ. ತಗ್ಗುಗುಂಡಿಗಳು ಬಿದ್ದಿದ್ದರಿಂದ ವಾಹನಗಳು ಸರ್ಕಸ್ ಮಾಡುತ್ತ ಸಾಗುತ್ತಿವೆ.

ಭಾಲ್ಕಿಯಿಂದ ನೀಲಂಗಾಕ್ಕೆ ಹೋಗುವ ರಸ್ತೆಯಲ್ಲಿನ ಮಿರಖಲ್ ಕ್ರಾಸ್ ಹತ್ತಿರದಲ್ಲಿರುವ ಸೇತುವೆ ಮೊದಲೇ ಕುಸಿದಿದ್ದರೂ ದುರಸ್ತಿ ಕೈಗೊಂಡಿರಲಿಲ್ಲ. ಮಳೆಗೆ ಇನ್ನಷ್ಟು ಕುಸಿದಿದೆ. ಪಕ್ಕದಲ್ಲಿ ಮಣ್ಣು ಹರಡಿ ಕಚ್ಚಾ ರಸ್ತೆ ನಿರ್ಮಿಸಿದ್ದರೂ ಅದು ಕೂಡ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಕೆಲ ದಿನಗಳವರೆಗೆ ಸತತವಾಗಿ ಮಳೆಯಾಗಿದ್ದರಿಂದ ಈ ರಸ್ತೆಯ ಮೇಲಿನಿಂದ ನೀರು ಹೋಗಿದೆ. ಆಗ ಅನಿವಾರ್ಯವಾಗಿ ಇಲ್ಲಿಂದ ಸಾಗಿದ ಲಾರಿಯೊಂದು ನಾಲೆಗೆ ಬಿದ್ದಿದ್ದರಿಂದ ಕೆಲ ದಿನಗಳವರೆಗೆ ವಾಹನ ಸಂಚಾರ ನಿಂತು ಹೋಗಿತ್ತು.

`ತಾಲ್ಲೂಕಿನ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿವೆ. ಈ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ' ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಜೆಇ ತಿಳಿಸಿದ್ದಾರೆ.

ಮಳೆಯಿಂದ ನಗರದಲ್ಲಿನ ರಸ್ತೆಗಳು ಕೂಡ ವಾಹನ ಸಂಚಾರಕ್ಕೆ ಯೋಗ್ಯವಾಗಿ ಉಳಿದಿಲ್ಲ. `ಸಸ್ತಾಪುರ ಬಂಗ್ಲಾದಿಂದ ತ್ರಿಪುರಾಂತಕ್ಕೆ ಬರುವ ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದಿದ್ದು ಕಾರು ಹಾಗೂ ಇತರೆ ವಾಹನಗಳನ್ನು ಸಾವಕಾಶವಾಗಿ ಒಯ್ಯಬೇಕಾಗುತ್ತಿದೆ' ಎಂದು ವ್ಯಾಪಾರಿ ಲಕ್ಷ್ಮಿಪುತ್ರ ನಿಂಬಾಳಕರ್ ಗೋಳು ತೋಡಿಕೊಂಡಿದ್ದಾರೆ. ಕೋಟೆಯಿಂದ ಕಾಳಿಗಲ್ಲಿ ಹಾಗೂ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಳಾಗಿದ್ದು ಶೀಘ್ರ ದುರಸ್ತಿಗೊಳಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.
-ಮಾಣಿಕ ಭುರೆ

* * * *

ಪ್ರಯಾಣ ಇನ್ನು ಪ್ರಯಾಸದಾಯಕ
ಹುಮನಾಬಾದ್:
ತಾಲ್ಲೂಕಿನ ಬೋತಗಿ ಗ್ರಾಮದಿಂದ ಸೀತಾಳಗೇರಾ, ನಿಂಬೂರು, ಅಲ್ಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಭಾರಿ ಸಮಸ್ಯೆಯಾಗುತ್ತಿದೆ.

ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದಿಂದ ಶಕ್ಕರಗಂಜ್ (ವಾಡಿ) ಮಾರ್ಗವಾಗಿ ಸೀತಾಳಗೇರಾದಿಂದ ತಾಳಮಡಗಿ ರಾಷ್ಟ್ರೀಯ ಹೆದ್ದಾರಿಗೆ ಹೋಗುವ ಮುಖ್ಯ ರಸ್ತೆ ಹಾಗೂ ಡಾಕುಳಗಿಗೆ ಹೋಗುವ ರಸ್ತೆ ಮಳೆಯಿಂದಾಗಿ ಹಾಳಾಗಿದೆ.

ಕನಕಟ್ಟಾ ಗ್ರಾಮದಿಂದ ಶೇಡೋಳ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಮಲ್ಲಿಕಾರ್ಜುನವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ, ಚಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋನಕೇರಾ ಗ್ರಾಮದಿಂದ ಹುಣಸಗೇರಾ, ಕನಕಟ್ಟಾ ಗ್ರಾಮಕ್ಕೆ ಹೋಗುವ ರಸ್ತೆ ಹದಗೆಟ್ಟಿದೆ.

ಘಾಟಬೋರಾಳ ಗ್ರಾಮದಿಂದ ಹಂದಿಕೇರಾ, ಘಾಟಬೋರಾಳ ತಾಂಡಾ, ಜಾಮನಗರದಿಂದ ಸೋನಕೇರಾಕ್ಕೆ ಹೋಗುವ ಮಾರ್ಗ ಹದಗೆಟ್ಟಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ರಸ್ತೆ, ಮದರಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಕಾಪುರ(ವಾಡಿ)ಯಿಂದ ದುಬಲಗುಂಡಿ ಗ್ರಾಮಕ್ಕೆ ಹೋಗುವ ರಸ್ತೆ ಹಾಳಾಗಿದೆ.

ಮಾಣಿಕನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡವಂತಿ ಗ್ರಾಮದಿಂದ ಹೊರವಲಯದ ಹಳೆಯ ಚೆಕ್‌ಪೋಸ್ಟ್‌ಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮದಗಗಾಂವದಿಂದ ಮಲಕಾಪುರವಾಡಿ ಮತ್ತು ಅಲ್ಲೂರು ಮತ್ತು ಬೇನಚಿಂಚೋಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
-ಪರಶುರಾಮ ಹೂಸಮನಿ

* * *

ಅಪಘಾತಕ್ಕೆ ಆಹ್ವಾನಿಸುವ ರಸ್ತೆಗಳು
ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದಿಂದ ನಾಗನಕೇರಾ ಗ್ರಾಮದ ಮೂಲಕ ಮಂಗಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಈ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಸುಲಭವಾಗಿ ತಲುಪಬಹುದಾಗಿದೆ. ಹೀಗಾಗಿ ಇಲ್ಲಿ ವಾಹನಗಳ ಸಂಚಾರ ಅಧಿಕ. ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಆವರಿಸಿದ್ದು, ಎದುರು ಬರುವ ವಾಹನಗಳು ಕಾಣಿಸುವುದಿಲ್ಲ. ರಸ್ತೆಯಲ್ಲಿ ಎಲ್ಲೆಡೆ ಆಳವಾದ ತಗ್ಗು ದಿನ್ನೆಗಳು ಉಂಟಾಗಿವೆ. ಹತ್ತು ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ಈ ಬಾರಿಯ ಅಧಿಕ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಪ್ರಯಾಸಪಡುವಂತಾಗಿದೆ. ಈ ಮಾರ್ಗದಲ್ಲಿ ಮಾರ್ಗ ಸೂಚಿಗಳನ್ನು ಅಳವಡಿಸಿಲ್ಲ. ಆಗಾಗ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ದೂರುತ್ತಾರೆ.

'ನಿತ್ಯ ನಾಗನಕೇರಾ ಗ್ರಾಮದಿಂದ ವಿದ್ಯಾರ್ಥಿಗಳು ಮಂಗಲಗಿ ಗ್ರಾಮಕ್ಕೆ ಬೈಸಿಕಲ್ ಮೇಲೆ ಶಾಲೆಗೆ ಹೋಗುತ್ತಾರೆ. ರಸ್ತೆ ಮಧ್ಯದಲ್ಲಿಯ ತಗ್ಗುಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಘಟನೆಗಳು ಅನೇಕ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ರಸ್ತೆ ದುರಸ್ತಿ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಒತ್ತಾಯಿಸುತ್ತಾರೆ.

ತಾಲ್ಲೂಕಿನ ಕರಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಚಾಂಗಲೇರಾ ಗ್ರಾಮದ ರಸ್ತೆ ಡಾಂಬರ್ ಕಿತ್ತು ಹೋಗಿದೆ. ಎಲ್ಲೆಂದರಲ್ಲಿ ನೀರು ನಿಂತು ಗುಂಡಿಗಳು ನಿರ್ಮಾಣವಾಗಿ ರಸ್ತೆ ಕಾಣುತ್ತಿಲ್ಲ. ದ್ವಿಚಕ್ರವಾಹನ ಸವಾರರು ಸಂಚರಿಸುವುದೇ ದುಸ್ತರವಾಗಿದೆ,
'ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೂ, ಶಾಸಕರಿಗೂ ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಐತಿಹಾಸಿಕ ಗುರುಗಂಗಾಧರ ಬಕ್ಕಪ್ರಭು ದೇಗುಲ ಇದ್ದು, ರಾಜ್ಯ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದ ಬರುವ ಭಕ್ತರು ರಸ್ತೆಯ ದುರವಸ್ಥೆ ಕಂಡು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ' ಎಂದು ಕರಕನಳ್ಳಿ ಗ್ರಾಮದ ಶಾಮರಾವ್ ಹೇಳುತ್ತಾರೆ.
-ವೀರೇಶ್ ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT