ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ್ ವಿಮಾ ಯೋಜನೆ ಮೋಸಕ್ಕೆ ಬ್ರೇಕ್: ಭರವಸೆ

ಜಿಲ್ಲಾ ರೈತ ಸಂಘದಿಂದ ಸಚಿವ ಖಂಡ್ರೆಗೆ ಸನ್ಮಾನ
Published 2 ಜುಲೈ 2023, 15:54 IST
Last Updated 2 ಜುಲೈ 2023, 15:54 IST
ಅಕ್ಷರ ಗಾತ್ರ

ಭಾಲ್ಕಿ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ದೂರಿದರು.

ಪಟ್ಟಣದ ಪುರಭವನದಲ್ಲಿ ಜಿಲ್ಲಾ ರೈತ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿದರು. ಈ ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಜಿಲ್ಲೆಯ ರೈತರು ನೂರಾರೂ ಕೋಟಿ ವಿಮೆ ಕಂತು ಕಟ್ಟಿದರೆ ಕಡಿಮೆ ಹಣ ಪಾವತಿಸಲಾಗುತ್ತಿದೆ.

ಕಳೆದ ವರ್ಷ ಜಿಲ್ಲೆಯ ರೈತರು ₹220 ಕೋಟಿ ವಿಮೆ ಕಂತು ಕಟ್ಟಿದ್ದಾರೆ. ಆದರೆ ₹50 ಕೋಟಿ ಮಾತ್ರ ಪರಿಹಾರ ನೀಡಲಾಗಿದೆ. ಸುಮಾರು ₹170 ಕೋಟಿ ಖಾಸಗಿ ವಿಮೆ ಕಂಪನಿ ಲೂಟಿ ಹೊಡೆದಿದೆ. ಈ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದು, ಇನ್ಮುಂದೆ ವಿಮೆ ಕಂಪನಿ ಮೋಸದಾಟಕ್ಕೆ ಬ್ರೇಕ್ ಹಾಕುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಮರ್ಪಕವಾಗಿ ಬಳಕೆ ಆಗಬೇಕಿದೆ. ಗೋದಾವರಿ ಬೇಸ್ 23ಟಿಎಂಸಿ ನೀರು ನಮ್ಮ ಪಾಲಿಗೆ ಸಿಗಬೇಕಿದೆ. ಈಗಾಗಲೇ ಕಾರಂಜಾ ಜಲಾಶಯ, ಅತಿವಾಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ತಾಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಿಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಚುಳಕಿ ನಾಲಾ ಕಾಲುವೆ, ಕೆರೆ ಅಭಿವೃದ್ಧಿ, ಮೇಹಕರ್ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಒತ್ತು ನೀಡಲಾಗುವುದು. ಭೂಮಿ ಕಳೆದು ಕೊಂಡ ರೈತರಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಮಾತನಾಡಿ, ಜಿಲ್ಲೆಯಲ್ಲಿ ಒಂದಿಲ್ಲ ಒಂದು ಸಮಸ್ಯೆಯಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ರೈತರ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಅಧ್ಯಕ್ಷ ಬಾಬುರಾವ್ ಜೋಳದಾಪಕೆ ಮಾತನಾಡಿ, ಜಿಲ್ಲೆಯ ರೈತರ ಜೀವನಾಡಿ ಆಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ದಯಾನಂದ ಸ್ವಾಮಿ, ಶ್ರೀಮಂತ ಬಿರಾದಾರ್, ಶೇಷರಾವ್ ಕಣಜಿ, ವೈಜಿನಾಥ ವಡ್ಡೆ, ಚಂದ್ರಶೇಖರ ಜಮಖಂಡಿ, ನಾಗಯ್ಯ ಸ್ವಾಮಿ, ಸುಭಾಷ ರಗಟೆ, ಮನೋಹರರಾವ್ ಹೊರಂಡಿ, ಸತ್ಯವಾನ ಸೂರ್ಯವಂಶಿ, ಸುಧಾಕರ ಬೋಗಡೆ, ಮಲ್ಲಿಕಾರ್ಜುನ ಬಿರಾದಾರ್, ಶಂಕರೆಪ್ಪ ಪಾರಾ, ಪ್ರಕಾಶ ಬಾವುಗೆ, ಭವರಾವ್ ಪಾಟೀಲ, ಪ್ರವೀಣ ಕುಲಕರ್ಣಿ, ರಾಮರಾವ್ ಶೆಡೋಳೆ, ಝರಣಪ್ಪ ದೇಶಮುಖ, ವಿಶ್ವನಾಥ ಧರಣಿ, ಬಸಪ್ಪ ಮರಖಲ್, ಗಣಪತರಾವ್ ವಲ್ಲಾಪೆ, ಉತ್ತಮರಾವ್ ಮಾನೆ, ವಿಠಲ ಪಾಟೀಲ, ಶಿವಾನಂದ ಹುಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT