ಭಾಲ್ಕಿ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯ ಮೊಬೈಲ್ ಟವರ್ ಸಮೀಪದ ಪ್ರದೇಶದಲ್ಲಿ ಕೊಳಚೆ ನೀರು ಹರಿದು ಹೋಗಲು ಸೂಕ್ತ ಚರಂಡಿಯಿಲ್ಲ. ಹೀಗಾಗಿ ಕೊಳಚೆ ಮನೆಗಳ ಎದುರು ಸಂಗ್ರಹಗೊಳ್ಳುತ್ತಿದ್ದು, ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕು ಸಾಗಿಸುವಂತಾಗಿದೆ.
ಈ ಪ್ರದೇಶದಲ್ಲಿ ಮನೆಗಳ, ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಎದುರೇ ಮಳೆ ನೀರು ಸೇರಿದಂತೆ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿದರೆ, ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಜತೆಗೆ ದಿನದ ಇಪ್ಪತ್ನಾಲ್ಕು ಗಂಟೆ ದುರ್ನಾತ ಬೀರುತ್ತಿದ್ದು, ಮನೆಯಲ್ಲಿದ್ದರೂ ಕಿರಿಕಿರಿಯಾಗುತ್ತಿದೆ ಎಂದು ನಿವಾಸಿಗಳಾದ ಮಹಿಳೆಯರಾದ ಮಹಾದೇವಿ, ಕಲಾವತಿ, ಸುನಿತಾ ಆತಂಕ ವ್ಯಕ್ತಪಡಿಸಿದರು.
ಸಂಜೆಯಾಗುತ್ತಲೇ ಮನೆಗೆ ನುಗ್ಗುವ ಸೊಳ್ಳೆಗಳು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಇದು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಕಾಲರಾ, ಮಲೇರಿಯಾ, ಚಿಕೂನ್ ಗುನ್ಯ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಅಂಜಿಕೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ಟವರ್ ಹಿಂಭಾಗದಲ್ಲಿಯೂ ನೈರ್ಮಲ್ಯದ ಕೊರತೆಯಿಂದಾಗಿ, ಹಂದಿ, ನಾಯಿಗಳ ಉಪಟಳ ಹೆಚ್ಚಾಗಿದೆ. ಬಡಜನರು ಹೆಚ್ಚಿನ ಸಂಖ್ಯೆಯಲ್ಲಿ ಜೀವನ ಸಾಗಿಸುವ ಈ ಪ್ರದೇಶದಲ್ಲಿ ಜನರ ನೆಮ್ಮದಿಯ ಜೀವನಕ್ಕೆ ಅನುಕೂಲಿಸಲು ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಸೂಕ್ತ ಯೋಜನೆ, ಪರಿಹಾರ ಮಾರ್ಗೋಪಾಯ ಮಾಡಬೇಕು. ಜತೆಗೆ ಸಿಸಿ ರಸ್ತೆಯಿಲ್ಲ. ಹೀಗಾಗಿ ಸೂಕ್ತ ಚರಂಡಿ ವ್ಯವಸ್ಥೆ, ಸಿ.ಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ನಾಗಶೆಟ್ಟೆಪ್ಪ ಲಂಜವಾಡೆ ಸೇರಿದಂತೆ ಕಾಲೊನಿ ವಾಸಿಗಳು ಒತ್ತಾಯಿಸುತ್ತಾರೆ.
ಹೌಸಿಂಗ್ ಬೋರ್ಡ್ ಕಾಲೊನಿ ಮೊಬೈಲ್ ಟವರ್ ಸಮೀಪದ ಪ್ರದೇಶದಲ್ಲಿ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಚರಂಡಿ ಸಮಸ್ಯೆ ಕುರಿತು ಮುಖ್ಯಾಧಿಕಾರಿ ಗಮನಕ್ಕೆ ತರಲಾಗುವುದುಸಂಗಮೇಶ ಕಾರಬಾರಿ, ಪುರಸಭೆ ಎಂಜಿನಿಯರ್
ಮನೆಯ ಎದುರು ಕೊಳಚೆ ನೀರು ಸಂಗ್ರಹದಿಂದಾಗಿ ದುರ್ನಾತ ಬೀರುತ್ತಿದ್ದು ಮನೆಯಲ್ಲಿದ್ದರೂ ಕಿರಿಕಿರಿಯಾಗುತ್ತದೆ. ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಸಮಸ್ಯೆಯನ್ನು ಪರಿಹರಿಸಬೇಕು.ಕಲಾವತಿ ಕೆ., ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.