ಮಂಗಳವಾರ, ಜನವರಿ 28, 2020
29 °C
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿಕೆ

ಅನುಭವ ಮಂಟಪ ನಿರ್ಮಾಣ ಯೋಜನೆಗೆ ಚಾಲನೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಬಸವಕಲ್ಯಾಣದಲ್ಲಿ ₹ 600 ಕೋಟಿ ವೆಚ್ಚದ ಅನುಭವ ಮಂಟಪ ನಿರ್ಮಾಣ ಯೋಜನೆಗೆ ಚಾಲನೆ ನೀಡುವ ಅಗತ್ಯ ಇದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ಬಸವ ಕೇಂದ್ರದ ವತಿಯಿಂದ ನಗರದ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವ ಪ್ರಯುಕ್ತ ಶನಿವಾರ ನಡೆದ ‘ಜಾಗತೀಕರಣ– ಕೃಷಿ ಸಂಸ್ಕೃತಿ ಸವಾಲುಗಳು’ ಕುರಿತ ಕೃಷಿ ಚಿಂತನೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಾಗಲಕೋಟೆಯಲ್ಲಿ ಬಸವಣ್ಣನ ಐಕ್ಯಸ್ಥಳವನ್ನು ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಸವಕಲ್ಯಾಣದಲ್ಲಿ ವಿಶ್ವವೇ ನೋಡುವಂತಹ ಅನುಭವ ಮಂಟಪ ನಿರ್ಮಾಣ ಮಾಡಬೇಕು’ ಎಂದು ಮನವಿ ಮಾಡಿದರು.

‘ಬಸವ ಚಳವಳಿಗಳು ಮನುಕುಲದ ಕಲ್ಯಾಣಕ್ಕಾಗಿಯೇ ನಡೆದಿವೆ. ಅಂದು 1.96 ಲಕ್ಷ ಜನರು, 770 ಅಮರಗಣಂಗಳು ಚಳವಳಿಯಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ’ ಎಂದರು.

‘ಬೀದರ್ ಜಿಲ್ಲೆಯಲ್ಲಿಯೇ ವಿಶ್ವದ ಮೊದಲ ಸಂಸತ್ತು ನಿರ್ಮಾಣವಾಯಿತು. ಬಸವಾದಿ ಶರಣರು ಪ್ರಜಾಪ್ರಭುತ್ವವನ್ನು 12ನೇ ಶತಮಾನದಲ್ಲೇ ಪ್ರಾರಂಭಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಿದವರೇ ಬಸವಾದಿ ಶರಣರು. ವರ್ಗ ರಹಿತ ಸಮಾಜ ನಿರ್ಮಾಣ ಶರಣರ ಗುರಿಯಾಗಿತ್ತು. ಬಾಬಾಸಾಹೇಬ ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿ ಬಸವ ತತ್ವಗಳೂ ಇವೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಿತು. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಯಿತು. ಇವುಗಳಿಗೆ 12ನೇ ಶತಮಾನದ ದಾಸೋಹ ತತ್ವವೇ ಪ್ರೇರಣೆ’ ಎಂದು ತಿಳಿಸಿದರು.

‘ಶಿವಮೂರ್ತಿ ಮುರುಘಾ ಶರಣರು 325 ಅಡಿ ಎತ್ತರದ ಬಸವಣ್ಣನ ಮೂರ್ತಿ ನಿರ್ಮಾಣದ ಗುರಿ ಇಟ್ಟುಕೊಂಡಿದ್ದಾರೆ. ಅವರ ಎತ್ತರದ ವಿಚಾರಗಳನ್ನು ಮನುಕುಲಕ್ಕೆ ವಿಸ್ತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಶ್ರೀಗಳು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ’ ಎಂದರು.

‘ಯುವಕರು ಕೃಷಿ ಅಂದರೆ ಮೂಗು ಮುರಿಯುತ್ತಿದ್ದಾರೆ. ಮಣ್ಣಲ್ಲಿ ಮಣ್ಣಾಗಿ ದೇಶದ ಜನರಿಗಾಗಿ ದುಡಿಯುತ್ತಿರುವ ರೈತನ ವೃತ್ತಿಯನ್ನು ಅಲಕ್ಷಿಸುವುದು ಸರಿಯಲ್ಲ. ಕೃಷಿ ವಿಜ್ಞಾನಕ್ಕೂ ಆದ್ಯತೆ ಕೊಡಬೇಕು. ರ್‌್ಯಾಂಕ್ ಪಡೆದವರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.
ಅಣೆಕಟ್ಟು ನಿರ್ಮಾಣ ಮಾಡಿ ನೀರಾವರಿ ಸೌಲಭ್ಯ ಒದಗಿಸಿದರೂ ಮಣ್ಣು, ನೀರಿನ ನಿರ್ವಹಣೆ ಸಮರ್ಪಕವಾಗಿಲ್ಲ. ಈ ದಿಸೆಯಲ್ಲಿ ಕ್ರಮಕೈಗೊಳ್ಳುವ ಅಗತ್ಯ ಇದೆ’ ಎಂದು ಹೇಳಿದರು.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯ ವಹಿಸಿದ್ದರು. ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಇಳಕಲ್‌ನ ಗುರು ಮಹಾಂತ ಸ್ವಾಮೀಜಿ, ಬಸವಕಲ್ಯಾಣದ ಹರಳಯ್ಯ ಪೀಠದ ಅಕ್ಕ ಗಂಗಾಂಬಿಕೆ ನೇತೃತ್ವ ವಹಿಸಿದ್ದರು. ಶರಣ ಸಂಸ್ಕೃತಿ ಉತ್ಸವದ ಪ್ರಧಾನ ಕಾರ್ಯದರ್ಶಿ ಕುಶಾಲ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕೃತಿ ಸುರೇಶ ಚನಶೆಟ್ಟಿ ಅನುಭಾವ ಮಂಡಿಸಿದರು. ಬಸವ ಪ್ರಕಾಶ ಸ್ವಾಮೀಜಿ, ಮಾತೆ ಬಸವಗೀತೆ, ಮೃತ್ಯುಂಜಯ ಸ್ವಾಮಿ, ಸ್ವಾಗತ ಸಮಿತಿಯ ಅಧ್ಯಕ್ಷ ಗುರುನಾಥ ಕೊಳ್ಳೂರ, ಗುರಮ್ಮ ಸಿದ್ಧಾರೆಡ್ಡಿ , ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಮಡಿವಾಳಪ್ಪ ಮಂಗಲಗಿ, ಜೈರಾಜ ಖಂಡ್ರೆ, ಚಂದ್ರಶೇಖರ ಹೆಬ್ಬಾಳೆ, ರಾಜಕುಮಾರ ಶಿವಪೂಜೆ, ಶಿವಾನಂದ ಪಾಟೀಲ, ಬಸವರಾಜ ಪಾಟೀಲ ಹಾರೂರಗೇರಿ, ಶಾಮರಾವ್ ಭೀಮರಾವ್, ಬಸವರಾಜ ಮಾಳಗೆ, ಅನಿಲ ಬೆಲ್ದಾರ್, ಮಾರುತಿ ಬೌದ್ಧೆ, ಯುವ ಬಸವ ಕೇಂದ್ರದ ರಮೇಶ ಚಿದ್ರಿ ಇದ್ದರು.

ರಾಮದುರ್ಗ ತಾಲ್ಲೂಕಿನ ನಾಗನೂರಿನ ನಿವೇದಿತಾ ದಿ.ಪಿ. ಹಾಗೂ ಚನ್ನಬಸವ ಪಾಟೀಲ ಅವರು ಅಕ್ಕ– ಅಲ್ಲಮರ ಸಂವಾದ ಪ್ರದರ್ಶಿಸಿದರು. ಶರಣಪ್ಪ ಮಿಠಾರೆ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಶಿವಾನಂದ ಪಾಟೀಲ ವಂದಿಸಿದರು.

ಪ್ರತಿಕ್ರಿಯಿಸಿ (+)