ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ: ಗೋವಿಂದ ರಡ್ಡಿ

ಬೀದರ್: ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಎಂತಹದ್ದೇ ಸವಾಲುಗಳು ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಇಲ್ಲಿಯ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನದ ಮೂಲಕ ಅಡಿಪಾಯ ಹಾಕಿದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ನಾವಿಂದು ನೆನೆಯಬೇಕಾಗಿದೆ. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೆ ರಕ್ಷಣೆ ನೀಡಿದೆ’ ಎಂದರು.
‘ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆ ನಮ್ಮೆಲ್ಲರ ಉಸಿರಾಗಬೇಕಿದೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚಾಗಿದೆ. ಈ ಅಪಾರ ಯುವಶಕ್ತಿಯ ಸದ್ಬಳಕೆಗಾಗಿ ಇಂದು ಅವಕಾಶಗಳನ್ನು ಒದಗಿಸುವುದು ಅಗತ್ಯವಾಗಿದೆ. ಯುವಜನಾಂಗ ತಮ್ಮ ಹೊಣೆಗಾರಿಯನ್ನರಿತು ಮುನ್ನಡೆಯಬೇಕಿದೆ‘ ಎಂದರು.
‘ಬೀದರ್ ಉತ್ಸವ-2023 ಅತ್ಯಂತ ಅದ್ದೂರಿಯಾಗಿ ನಡೆದಿದೆ. 29 ವಿವಿಧ ಉತ್ಸವಗಳು, ಕಲಾವಿದರ ಅದ್ಭುತ ಪ್ರದರ್ಶನಗಳು ಬೀದರ್ ಉತ್ಸವಕ್ಕೆ ಮೆರಗು ತಂದಿವೆ’ ಎಂದು ಹೇಳಿದರು.
‘ಬೀದರ್ ಉತ್ಸವದ ಉಳಿತಾಯ ಮೊತ್ತದಲ್ಲಿ ಬೀದರ್ ಕೋಟೆಯಲ್ಲಿ ಪ್ರತಿದಿನ ಲೇಸರ್ ಲೈಟ್ ಹಾಗೂ ಸೌಂಡ್ ಶೋ ಏರ್ಪಡಿಸಲು ಉದ್ದೇಶಿಸಲಾಗಿದೆ. ಬೀದರ್ ಕೋಟೆಯಲ್ಲೂ ಲೇಸರ್ ಲೈಟ್ ಹಾಗೂ ಸೌಂಡ್ ಶೋ ಏರ್ಪಡಿಸಲಾಗುವುದು. ₹ 612 ಕೋಟಿ ಮೊತ್ತದ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಮೊದಲ ಹಂತದಲ್ಲಿ ನಾಲ್ಕು ದಿಕ್ಕಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದ ಹತ್ತಿರ ಮಾಂಜ್ರಾ ನದಿಯಿಂದ 0.91 ಟಿ.ಎಂ.ಸಿ ನೀರನ್ನು ಎತ್ತಿ ಭಾಲ್ಕಿ ತಾಲ್ಲೂಕಿನ 12 ಹಳ್ಳಿಗಳ ಸುಮಾರು 10,880 ಹೆಕ್ಟರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸುವ ₹ 580 ಕೋಟಿ ಮೊತ್ತದ ಮೆಹಕರ್ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ’ ಎಂದು ಹೇಳಿದರು.
‘‘ಔರಾದ್ ತಾಲ್ಲೂಕಿನ ಬಳತ (ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂ 0.95 ಟಿ.ಎಂ.ಸಿ ನೀರನ್ನು ಪಂಪ್ ಮೂಲಕ ನೀರೆತ್ತಿ 36 ಕೆರೆಗಳಿಗೆ ನೀರು ತುಂಬಿಸಿ 8188.00 ಹೆಕ್ಟೇರ್ ಪ್ರದೇಶದ ನೀರಾವರಿ ಕಲ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ ಅಂದಾಜು ₹ 560.70 ಕೋಟಿ ಅನುಮೋದನೆ ನೀಡಿದೆ’ ಎಂದು ತಿಳಿಸಿದರು.
‘2022-23ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೀದರ್ ಜಿಲ್ಲೆಯಲ್ಲಿ ₹ 341.66 ಕೋಟಿ ಅನುದಾನದಲ್ಲಿ ಒಟ್ಟು 139 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ನಳದ ಮೂಲಕ ನೀರು ಪೂರೈಸಲು ಜಿಲ್ಲೆಯಲ್ಲಿ 886 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕ ಬಂಡೆಪ್ಪ ಕಾಶೆಂಪುರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಬುಡಾ ಬಾಬುವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಂ ಎಂ. ಇದ್ದರು.
ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಅವರು ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿದರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ
ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತದ ವತಿಯಿಂದ ನಿರಂಕಾರ ವೀರಣ್ಣ ಬಂಡಿ (ಸಾಹಿತ್ಯ ಕ್ಷೇತ್ರ), ಕೇಶವರಾವ್ ಹನುಮಂತರಾವ್ (ಸಮಾಜ ಸೇವೆ), ರಾಜಮೋಹನ್ ಅರ್ಜುನ್ ಸಿಂಗ್ (ಶಿಕ್ಷಣ ಕ್ಷೇತ್ರ), ನಾಗರಾಜ ದಶರಥ ವರ್ಮಾ (ಕ್ರೀಡಾ ಕ್ಷೇತ್ರ), ಗುರುರಾಜ ಕುಲಕರ್ಣಿ (ಮಾಧ್ಯಮ), ಜಗನ್ನಾಥ ವಿಶ್ವನಾಥ ಮೂಲಗಿ (ಕೃಷಿ ಕ್ಷೇತ್ರ), ಸಂಜೀವ ಕುಮಾರ ಗುಂಡಪ್ಪಾ (ಕೈಗಾರಿಕಾ ಕ್ಷೇತ್ರ), ನಾಗರಾಜ ಚಕೋಟೆ (ಆರೋಗ್ಯ ಸೇವೆ), ಭಾಗ್ಯಶ್ರೀ ವೈಜಿನಾಥ ಸಜ್ಜನಶೆಟ್ಟಿ (ಮಹಿಳಾ ಸಾಧಕಿ), ಬಾಬುರಾವ್ ಲಕ್ಷ್ಮಣ ರಾಠೋಡ (ವಿಕಲಚೇತನರ ಸೇವೆ) ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬೀದರ್‌ನ ಷಾ ರಷೀದ್ ಅಹ್ಮದ್ ಖಾದ್ರಿ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಬೀದರ್‌ನ ಎಡಿಫೈ ಶಾಲೆ ಸರಸ್ವತಿ ಶಾಲೆ ಹಾಗೂ ಗುನ್ನಳ್ಳಿಯ ಶರಣ ಬಸವ ತತ್ವ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.