ಭಾನುವಾರ, ಏಪ್ರಿಲ್ 5, 2020
19 °C
ಅಂತರ ರಾಜ್ಯ ಬಸ್‌ ಸಂಚಾರ ಸ್ಥಗಿತ

ಬೀದರ್‌: ಬಂದ್‌ ಇದ್ದರೂ ಜನಜೀವನ ಸಹಜ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೋವಿಡ್ 19 ಸೋಂಕು ಹರಡುವಿಕೆ ತಡೆಗೆ ಭಾನುವಾರದ ‘ಜನತಾ ಕರ್ಫ್ಯೂ’ಗೆ ಅಭೂತಪೂರ್ವ ಬೆಂಬಲ ನೀಡಿದ ಇಲ್ಲಿಯ ಜನರೂ ಸೋಮವಾರ ಮಾತ್ರ ಜಿಲ್ಲಾ ಆಡಳಿತದ ಮನವಿಗೆ ಸ್ಪಂದಿಸಲಿಲ್ಲ. ಮಾರುಕಟ್ಟೆಯಲ್ಲಿ ಅಂಗಡಿಗಳು ಮುಚ್ಚಿದ್ದರೂ, ಜನರು ತಮಗೂ, ಕೊರೊನಾಗೂ ಏನೂ ಸಂಬಂಧವಿಲ್ಲದಂತೆ ಬೀದಿಗಳಲ್ಲಿ ಸಂಚರಿಸಿದರು.

ಕಿರಾಣಿ, ಮೆಡಿಕಲ್, ತರಕಾರಿ ಅಂಗಡಿ ತೆರೆದುಕೊಂಡಿದ್ದ ಕಾರಣ ಇನ್ನುಳಿದ ವ್ಯಾಪಾರಿಗಳು ಸಹ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಪ್ರಯತ್ನಿಸಿದರು. ಕೊರೊನಾ ಜಾಗೃತಿ ವಾಹನದೊಂದಿಗೆ ಸ್ಥಳಕ್ಕೆ ಬಂದ ನಗರಸಭೆ ಸಿಬ್ಬಂದಿ ಅಂಗಡಿಗಳನ್ನು ತೆರೆಯದಂತೆ ಮನವಿ ಮಾಡಿದರು. ಮಾರ್ಚ್‌ 31ರ ವರೆಗೆ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾ ಆಡಳಿತ ಆದೇಶ ಹೊರಡಿಸಿರುವುದನ್ನು ಜ್ಞಾಪಿಸಿದರು.

ಭಾನುವಾರ ಸಂಪೂರ್ಣ ಬಂದ್‌ ಇದ್ದ ಕಾರಣ ಬಹುತೇಕ ಜನ ಸೋಮವಾರ ಅಗತ್ಯ ಕಿರಾಣಿ ಸಾಮಗ್ರಿಗಳನ್ನು ಖರೀದಿಸಿದರು. ಮಹಿಳೆಯರು ಮಕ್ಕಳೊಂದಿಗೆ ಮಾರುಕಟ್ಟೆಗೆ ಬಂದಿದ್ದರು. ನಾಲ್ಕು ದಿನಗಳಿಂದ ಮಾಂಸಾಹಾರದ ಅಂಗಡಿಗಳೂ ಬಂದ್‌ ಇರುವ ಕಾರಣ ಸಹಜವಾಗಿಯೇ ತರಕಾರಿಗೆ ಹೆಚ್ಚಿನ ಬೇಡಿಕೆ ಇತ್ತು.

ರೆಸ್ಟೋರಂಟ್, ಬಾರ್‌ ಆ್ಯಂಡ್‌ ರೆಸ್ಟೋರಂಟ್, ಹೋಟೆಲ್, ಖಾನಾವಳಿ, ಬೇಕರಿ ಹಾಗೂ ಚಹಾ ಅಂಗಡಿಗಳು ಬಂದ್‌ ಇದ್ದವು. ಜನರು ಬೆಳಗಿನ ಉಪಾಹಾರಕ್ಕೆ ಬಿಸ್ಕತ್‌ ಪಾಕೆಟ್‌ ಹಾಗೂ ಹಣ್ಣುಗಳನ್ನು ಖರೀದಿಸಿದರು.

ನೆರೆ ರಾಜ್ಯಗಳಲ್ಲೂ ಬಸ್‌ ಸಂಚಾರ ಸ್ಥಗಿತ

ಬೀದರ್‌: ಕೊರೊನಾ ಪ್ರಯುಕ್ತ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲೂ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಂದೂ ಬಸ್‌ ಸೋಮವಾರ ರಸ್ತೆಗೆ ಇಳಿಯಲಿಲ್ಲ.

ಹೈದರಾಬಾದ್, ಜಹೀರಾಬಾದ್, ಸೋಲಾಪುರ, ಪುಣೆ, ಮುಂಬೈ, ಉಸ್ಮಾನಾಬಾದ್, ಲಾತೂರ್, ಉದಗಿರ ಮಧ್ಯೆ ಸಂಚರಿಸುವ ಖಾಸಗಿ ಸಂಸ್ಥೆಯ ಬಸ್‌ಗಳು ಸಹ ಜಿಲ್ಲೆಗೆ ಬರಲಿಲ್ಲ. ದ್ವಿಚಕ್ರ ವಾಹನ ಹಿಂಬದಿ ಸವಾರಿ, ಆಟೊರಿಕ್ಷಾ ಹಾಗೂ ಕ್ರೂಸರ್‌ ಹಾಗೂ ಜೀಪ್‌ಗಳ ಓಡಾಟ ಸಂಪೂರ್ಣ ನಿಷೇಧಿಸಿದ್ದರೂ ಕೆಲ ಕಡೆ ಆಟೊರಿಕ್ಷಾಗಳು ಸಂಚರಿಸಿದವು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು.

ಕೆಲವರು ಜೀಪ್‌, ಕಾರು ಹಾಗೂ ಆಟೊರಿಕ್ಷಾಗಳಲ್ಲಿ ಸಂಚರಿಸಿದರು. ಗಡಿಗ್ರಾಮಗಳ ಜನರು ದ್ವಿಚಕ್ರ ವಾಹನದ ಮೇಲೆಯೇ ಬ್ಯಾಗ್‌ಗಳೊಂದಿಗೆ ಇಬ್ಬರು, ಮೂರು ಕುಳಿತು ಪ್ರಯಾಣಿಸಿದರು. ಎರಡು, ಮೂರು ಕಿ.ಮೀ ಅಂತರದಲ್ಲಿರುವ ಗ್ರಾಮಗಳ ಜನರು ನಡೆದುಕೊಂಡೇ ಹೋದರು. ಗಡಿ ಗ್ರಾಮಗಳಲ್ಲಿರುವ ಜನ ಹೆಚ್ಚಿನ ತೊಂದರೆ ಅನುಭವಿಸಿದರು

ಗಡಿಯಲ್ಲಿ ತಪಾಸಣೆ ನಡೆಸಿದ ವೈದ್ಯಕೀಯ ಸಿಬ್ಬಂದಿ

ತೆಲಂಗಾಣದ ಗಡಿಯಲ್ಲಿನ ಬೀದರ್‌–ಹೈದರಾಬಾದ್‌ ರಸ್ತೆಯಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡಲಾಗಿತ್ತು. ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ತೆಲಂಗಾಣದ ಜಿಲ್ಲೆಗಳಿಂದ ನಗರಕ್ಕೆ ಬರುತ್ತಿದ್ದ ವಾಹನಗಳನ್ನು ತಡೆದು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದರು.

ವೈದ್ಯಕೀಯ ಸಿಬ್ಬಂದಿ ಪ್ರಯಾಣಿಕರ ಹೆಸರು, ಬಂದಿರುವ ಊರು, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಗಳನ್ನು ದಾಖಲಿಸಿಕೊಂಡರು. ಮುಖಗವಸ ಹಾಕಿಕೊಂಡೇ ಸಂಚರಿಸುವಂತೆ ಸೂಚನೆ ನೀಡಿದರು.

ಮದ್ಯ ಖರೀದಿಗೆ ಆಗಲಿಲ್ಲ ತೊಂದರೆ

ಬೀದರ್‌: ಜಿಲ್ಲೆಯಲ್ಲಿ ಎಲ್ಲೆಡೆ ಮದ್ಯದ ಅಂಗಡಿಗಳು ತೆರೆದುಕೊಂಡಿದ್ದವು. ನಗರದಲ್ಲಿ ಅಂಗಡಿಗಳ ಮುಂದೆ ಬ್ಯಾರಿಕೇಡ್‌ ನಿರ್ಮಿಸಿ ಮದ್ಯ ಮಾರಾಟ ಮಾಡಲಾಯಿತು. ಕಲಬುರ್ಗಿ, ತೆಲಂಗಾಣ ಹಾಗೂ ಮಹಾರಾಷ್ಟದ ಗಡಿ ಗ್ರಾಮಗಳ ಜನರು ಮದ್ಯ ಖರೀದಿಸಿ ಒಯ್ದರು.

ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ದುಡಿಯುವ ಕೈಗಳಿಗೆ ಕೆಲಸ ದೊರೆಯುತ್ತಿಲ್ಲ. ಸಮಯ ಕಳೆಯಲು ಕೆಲವರು ಮದ್ಯ ಖರೀದಿಸಿ ತೋಟದ ಮನೆಗಳಿಗೆ ತೆರಳಿ ಅಲ್ಲಿಯೇ ಮದ್ಯ ಸೇವಿಸಿ ವಿಶ್ರಾಂತಿ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು