ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನಿಂತು ಹೋದ ‘ಜನತಾ ದರ್ಶನ’

Published 14 ಜನವರಿ 2024, 6:54 IST
Last Updated 14 ಜನವರಿ 2024, 6:54 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಜನತಾ ದರ್ಶನ’ ಕಾರ್ಯಕ್ರಮ ಜಿಲ್ಲೆಯಲ್ಲಿ ನಿಂತು ಹೋಗಿದೆ.

ಕಳೆದ ಸೆಪ್ಟೆಂಬರ್‌ 25ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಖುದ್ದು ಜನರ ಸಮಸ್ಯೆ ಆಲಿಸಿದ್ದರು.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಅವುಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದ್ದರು. ತಾಂತ್ರಿಕ ಕಾರಣಗಳಿಂದ ಕೆಲವು ಅಹವಾಲುಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸೂಚನೆ ಕೊಟ್ಟಿದ್ದರು. ಈ ಕಾರ್ಯಕ್ರಮದಿಂದ ಜನರಲ್ಲಿ ಭರವಸೆ ಮೂಡಿತ್ತು. ಆದರೆ, ಮೂರು ತಿಂಗಳಿಂದ ‘ಜನತಾ ದರ್ಶನ’ ನಡೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಸಬೇಕೆಂದು ತಿಳಿಸಿದ್ದರು. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಸರ್ಕಾರ ಕೂಡ ಚುರುಕಿನ ಕೆಲಸಕ್ಕೆ ಮುಂದಾಗಿದೆ. ಆಡಳಿತ ಯಂತ್ರ ಚುರುಕುಗೊಂಡಿದೆ ಎಂದು ಜನ ಅಂದುಕೊಂಡಿದ್ದರು. ಆದರೆ, ಆರಂಭ ಶೂರತ್ವ ತೋರಿ ಕೈತೊಳೆದುಕೊಳ್ಳಲಾಗಿದೆ’ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.

‘ಜನತಾ ದರ್ಶನ ಪ್ರತಿ ತಿಂಗಳು ನಡೆಯಬೇಕು. ಜನರ ಸಮಸ್ಯೆ ಆಲಿಸಿ ಕಾಲಮಿತಿಯಲ್ಲಿ ಬಗೆಹರಿಸಬೇಕು. ಸಣ್ಣ ಸಣ್ಣ ವಿಷಯಗಳಿಗೆ ಬೆಂಗಳೂರಿಗೆ ಜನ ಅಲೆದಾಡುವ ಪರಿಸ್ಥಿತಿ ಇದೆ. ಇದು ಬದಲಾಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರೋಹನ್‌ ಕುಮಾರ್‌ ತಿಳಿಸಿದರು.

‘ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಜನತಾ ದರ್ಶನ ಕಾರ್ಯಕ್ರಮ ನಡೆಸಿ, ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ಅದು ಮುಂದುವರಿಯಬೇಕು. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಜನತಾ ದರ್ಶನದಲ್ಲಿ ನೇರವಾಗಿ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಇತ್ತು. ಅಧಿಕಾರಿಗಳು ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಇತ್ತು. ಜನರೆದುರೇ ಸಚಿವರು ನೇರವಾಗಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರು. ಮಾಧ್ಯಮದವರು ಅಲ್ಲಿನ ಸಂಗತಿಗಳನ್ನು ಪ್ರಕಟಿಸುತ್ತಿದ್ದರು. ಇದರಿಂದ ಜನರ ಕೆಲಸಗಳು ಆಗುತ್ತಿದ್ದವು. ‘ಜನತಾ ದರ್ಶನ’ ನಿಜಕ್ಕೂ ಉಪಯುಕ್ತ ಕಾರ್ಯಕ್ರಮ. ಪ್ರತಿ ತಿಂಗಳು ನಡೆಸಿದರೆ ಉತ್ತಮ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಮೇಶ.

ಖಂಡ್ರೆ ಸ್ವಂತ ಆಸಕ್ತಿಯಿಂದ ‘ಜನಸ್ಪಂದನ’
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈಶ್ವರ ಬಿ. ಖಂಡ್ರೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾದ ನಂತರ ಸ್ವಂತ ಆಸಕ್ತಿಯಿಂದ ವಿಶೇಷ ಮುತುವರ್ಜಿ ವಹಿಸಿ ಆಗಸ್ಟ್‌ 28ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಸಂಘಟಿಸಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ಬಳಿಕ ಮುಖ್ಯಮಂತ್ರಿಯವರು ರಾಜ್ಯದಾದ್ಯಂತ ‘ಜನತಾ ದರ್ಶನ’ ಆರಂಭಿಸಿದ್ದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ‘ಜನಸ್ಪಂದನ’ದ ಮಾದರಿಯೇ ‘ಜನತಾ ದರ್ಶನ’ ಎಂಬ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈಗ ‘ಜನಸ್ಪಂದನ’ವೂ ನಡೆಯುತ್ತಿಲ್ಲ ‘ಜನತಾ ದರ್ಶನ’ವೂ ಮಾಡುತ್ತಿಲ್ಲ. ಆದರೆ ಆಯಾ ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ‘ಜನತಾ ದರ್ಶನ’ಗಳು ನಡೆಯುತ್ತಿವೆ.
- ‘ಸಚಿವರಿಂದ ಶೀಘ್ರ ಕಾರ್ಯಕ್ರಮ’ 
‘ರಾಜ್ಯ ಸರ್ಕಾರದ ಸೂಚನೆಯಂತೆ ನಾನು 15 ದಿನಗಳಿಗೊಮ್ಮೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ‘ಜನತಾ ದರ್ಶನ’ ಮಾಡುತ್ತಿದ್ದೇನೆ. ಉಸ್ತುವಾರಿ ಸಚಿವರು ಕೂಡ ಶೀಘ್ರದಲ್ಲಿಯೇ ಮಾಡಲಿದ್ದಾರೆ. ಜಿಲ್ಲಾ ಕೇಂದ್ರದ ಜೊತೆಗೆ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಳೀಯ ಶಾಸಕರನ್ನು ಕರೆಸಿ ‘ಜನತಾ ದರ್ಶನ’ ಆಯೋಜಿಸುವ ಯೋಜನೆ ಇದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT