ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕಮಠಾಣದಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ

ಸೈಕಲ್, ಬೈಕ್ ಮೇಲೆ ನೀರು ತರುತ್ತಿರುವ ಜನ
Last Updated 15 ಮೇ 2020, 19:30 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಕಮಠಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಗ್ರಾಮದ ಬ್ಲಾಕ್ ಸಂಖ್ಯೆ 1, 2 ಹಾಗೂ 7 ರಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಸರಬರಾಜು ಮಾಡಲಾಗುತ್ತಿದೆ. ಪೈಪ್‍ಗಳು ಮೇಲಿಂದ ಮೇಲೆ ಒಡೆದು ಹೋಗುತ್ತಿರುವ ಕಾರಣ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೆಲವೊಮ್ಮೆ ಎರಡು- ಮೂರು ದಿನಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೊಳವೆಬಾವಿಗಳಲ್ಲೂ ಬಿಟ್ಟು ಬಿಟ್ಟು ನೀರು ಬರುತ್ತಿರುವುದು ಸಮಸ್ಯೆಯನ್ನು ಗಂಭೀರವಾಗಿಸಿದೆ.

ಕುಡಿಯುವ ನೀರಿಗಾಗಿ ಜನ ಗಂಟೆಗಟ್ಟಲೇ ಕೊಳವೆಬಾವಿಗಳ ಮುಂದೆ ನಿಲ್ಲಬೇಕಾಗಿದೆ. ಅನೇಕರು ಖಾಸಗಿ ಕೊಳವೆಬಾವಿ ಹಾಗೂ ಊರ ಹೊರಗಿನ ತೆರೆದ ಬಾವಿಗಳಿಂದಲೂ ನೀರು ಹೊತ್ತು ತರುತ್ತಿದ್ದಾರೆ.

ಬ್ಲಾಕ್ ಸಂಖ್ಯೆ 1 ರಲ್ಲಿ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇರುವ ಎರಡು ಕೊಳವೆಬಾವಿಗಳಲ್ಲಿ ಬಿಟ್ಟು ಬಿಟ್ಟು ನೀರು ಬರುತ್ತಿದೆ. ನಾಲ್ಕು ಕೊಡ ನೀರು ತುಂಬಿಕೊಳ್ಳಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮದ ಯುವ ಮುಖಂಡ ಬಸಯ್ಯ ಸ್ವಾಮಿ.

ಕೆಲವರು ಬ್ಲಾಕ್ ಸಂಖ್ಯೆ 6 ರ ಕೊಳವೆಬಾವಿಗೆ ಹೋಗಿ ನೀರು ತರುತ್ತಿದ್ದರೆ, ಇನ್ನು ಕೆಲವರು ಖಾಸಗಿ ತೆರೆದ ಬಾವಿ ಇಲ್ಲವೇ ಕೊಳವೆಬಾವಿಗಳ ಮೊರೆ ಹೋಗುತ್ತಿದ್ದಾರೆ. ವೀರಭದ್ರೇಶ್ವರ ದೇವಸ್ಥಾನ ಬಳಿಯ ಕೊಳವೆ ಬಾವಿಯಿಂದಲೂ ನೀರು ಹೊತ್ತು ತರುತ್ತಿದ್ದಾರೆ ಎಂದು ತಿಳಿಸುತ್ತಾರೆ.

ಕುಡಿಯುವ ನೀರಿಗಾಗಿ ಮಹಿಳೆಯರು ನಿತ್ಯ ಹೈರಾಣಾಗುತ್ತಿದ್ದಾರೆ. ಪುರುಷರು ಸೈಕಲ್, ಬೈಕ್ ಮೇಲೆ ನೀರು ಹೊತ್ತುಕೊಂಡು ಒಯ್ಯುತ್ತಿದ್ದಾರೆ. ಸದ್ಯ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.

ಗ್ರಾಮದ ಬ್ಲಾಕ್ ಸಂಖ್ಯೆ 2 ಮತ್ತು 7 ರಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನ ಬೇರೆ ಬೇರೆ ಕಡೆಗೆ ಹೋಗಿ ನೀರು ಹೊತ್ತು ತರುತ್ತಿದ್ದಾರೆ ಎಂದು ಹೇಳುತ್ತಾರೆ ನಾಗರಿಕರು.

1,573 ಮನೆ ಮತ್ತು 19,100 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಎರಡು ತೆರೆದ ಬಾವಿಗಳು ಹಾಗೂ 30 ಕೊಳವೆಬಾವಿಗಳು ಇವೆ. ಎರಡೂ ತೆರೆದ ಬಾವಿಗಳು ಬತ್ತಿ ಹೋಗಿವೆ. 30 ಕೊಳವೆಬಾವಿಗಳ ಪೈಕಿ 17 ಮಾತ್ರ ಚಾಲ್ತಿಯಲ್ಲಿ ಇವೆ ಎಂದು ತಿಳಿಸುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ ಕುಲಕರ್ಣಿ.

ಪೈಪ್‍ಲೈನ್ ಒಡೆದು ಹೋದ ಹಾಗೂ ಅಂತರ್ಜಲ ಮಟ್ಟ ಆಳಕ್ಕೆ ಕುಸಿದ ಕಾರಣ ಗ್ರಾಮದ ಕೆಲಕಡೆ ನೀರಿನ ಸಮಸ್ಯೆ ಉಂಟಾಗಿದೆ. ಬ್ಲಾಕ್ ಸಂಖ್ಯೆ 7 ರಲ್ಲಿ ಶಾಸಕರ ಅನುದಾನದಡಿ ಈಗಾಗಲೇ ಹೊಸ ಕೊಳವೆಬಾವಿ ಕೊರೆಸಲಾಗಿದೆ. ಮೋಟರ್ ಅನ್ನೂ ಕೂಡಿಸಲಾಗಿದೆ. ಬ್ಲಾಕ್ ಸಂಖ್ಯೆ 1 ಮತ್ತು 2 ರಲ್ಲೂ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳುತ್ತಾರೆ.

ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಬೇಸಿಗೆ ಆರಂಭವಾದಾಗಿನಿಂದಲೂ ಅಗತ್ಯ ಕ್ರಮ ಕೈಗೊಳ್ಳುತ್ತ ಬರಲಾಗಿದೆ. ಕೆಲ ಖಾಸಗಿ ಕೊಳವೆಬಾವಿಗಳ ಮಾಲೀಕರೂ ಜನರಿಗೆ ಉಚಿತ ನೀರು ಕೊಟ್ಟು ಸಹಕರಿಸುತ್ತಿದ್ದಾರೆ ಎಂದು ತಿಳಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT