ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಧರ್ಮ ಕ್ಷೇತ್ರಗಳಿಗೆ ಖ್ಯಾತಿ ತಂದ ಮಾತಾಜಿ

ರಾಷ್ಟ್ರೀಯ ಬಸವದಳ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಶ್ಲಾಘನೆ
Last Updated 31 ಅಕ್ಟೋಬರ್ 2020, 4:20 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಲಿಂ.ಮಾತೆ ಮಹಾದೇವಿ ಅವರು ಬಸವಧರ್ಮದ ಕ್ಷೇತ್ರಗಳಾದ ಬಸವಕಲ್ಯಾಣದಲ್ಲಿ ಕಲ್ಯಾಣಪರ್ವ ಮತ್ತು ಕೂಡಲಸಂಗಮದಲ್ಲಿ ಶರಣಮೇಳ ಆಯೋಜಿಸಿ ಇವುಗಳಿಗೆ ಖ್ಯಾತಿ ದೊರಕಿಸಿಕೊಟ್ಟರು’ ಎಂದು ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ಇಲ್ಲಿನ ಬಸವ ಮಹಾಮನೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 19ನೇ ಕಲ್ಯಾಣಪರ್ವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮುಂದುವರೆಯಲಿದೆ. ಕೋವಿಡ್ ಕಾರಣ ತಾತ್ಕಾಲಿಕವಾಗಿ ಹೋರಾಟ ನಿಂತರೂ ಮುಂಬರುವ ದಿನಗಳಲ್ಲಿ ಹೈದರಾಬಾದ್, ಮುಂಬೈನಲ್ಲಿ ಬೃಹತ್ ಮೋರ್ಚಾ ಆಯೋಜಿಸಲಾಗುತ್ತದೆ’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ಶರಣರು ಕಟ್ಟಿದ ಅನುಭವ ಮಂಟಪದ ಮಾದರಿಯನ್ನು ಶೀಘ್ರದಲ್ಲೆಬಸವ ಕಲ್ಯಾಣದಲ್ಲಿ ನಿರ್ಮಾಣ ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರ ₹600 ಕೋಟಿ ಅನುದಾನ ಒದಗಿಸಿದ್ದು, ಪ್ರಧಾನ ಮಂತ್ರಿ ಇಲ್ಲವೆ ರಾಷ್ಟ್ರಪತಿ ಅವರಿಂದ ಶಂಕುಸ್ಥಾಪನಾ ಕಾರ್ಯಕ್ರಮ ನೆರವೆರಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ ಮಾತನಾಡಿ, ‘ಬಸವ ಕಲ್ಯಾಣದಲ್ಲಿ 108 ಅಡಿಯ ಬಸವಣ್ಣನವರ ಪುತ್ಥಳಿ ಸ್ಥಾಪಿಸಿ ಈ ಕಡೆ ಎಲ್ಲೆಡೆಯ ಜನರ ಗಮನ ಸೆಳೆಯುವಂತೆ ಮಾಡಲಾಗಿದೆ. ಹಾಗೆಯೇ ಕಲ್ಯಾಣ ಸಂಸ್ಕೃತಿ ಎಲ್ಲೆಡೆ ಪಸರಿಸುವಂತಾಗಬೇಕು. ದಾಸೋಹ, ಕಾಯಕಕ್ಕೆ ಮಹತ್ವ ನೀಡಬೇಕು. ಮೊಬೈಲ್, ಟಿ.ವಿ. ಸಂಸ್ಕೃತಿಯಿಂದ ಯುವಜನರು ಸಂಸ್ಕೃತಿಯನ್ನು ಮರೆಯುತ್ತಿದ್ದು, ಅದಕ್ಕಾಗಿ ಶರಣ ಸಂಸ್ಕೃತಿಯನ್ನು ಎಲ್ಲರಿಗೂ ಕಲಿಸಿಕೊಡುವ ಅಗತ್ಯವಿದೆ’ ಎಂದರು.

ಕೂಡಲ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ‘ಬಸವಾದಿ ಶರಣರು ವಚನಗಳನ್ನು ರಚಿಸಿ ಅರಿವನ್ನು ನೀಡಿದರು. ಸಮಾನತೆಗಾಗಿ ಪ್ರಯತ್ನಿಸಿದರು. ಮೂಢನಂಬಿಕೆ, ಕಂದಾಚಾರ ವಿರೋಧಿಸಿದರು. ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರು ಬಸವತತ್ವ ಪ್ರಚಾರದ ಕಾರ್ಯದಲ್ಲಿ ಮಹತ್ವದ ಕೆಲಸ ನಿರ್ವಹಿಸಿದ್ದಾರೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ 112 ಅಡಿಯ ಬಸವಣ್ಣನವರ ಪುತ್ಥಳಿ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಬಸವಕಲ್ಯಾಣ ಮತ್ತು ಕೂಡಲಸಂಗಮದಲ್ಲಿಯೂ ಇನ್ನೂ ಮಹತ್ವದ ಕೆಲಸ ನಡೆಯಬೇಕಿದೆ. ಎಲ್ಲರೂ ಬಸವ ತತ್ವದ ಬಗ್ಗೆ ಬರೀ ಮಾತಾಡದೆ ಆಚರಣೆಗೆ ತರಬೇಕು’ ಎಂದು ಕರೆ ನೀಡಿದರು.

ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ಬಸವ ಮಹಾಮನೆಯ ಬಸವಪ್ರಭು ಸ್ವಾಮೀಜಿ, ಗೌತಮ ಬಿ.ನಾರಾಯಣರಾವ್, ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಮಾತನಾಡಿದರು.

ಮಾತೆ ಸತ್ಯಾದೇವಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಬಸವಕುಮಾರ ಸ್ವಾಮೀಜಿ, ಮುಖಂಡರಾದ ಶಿವರಾಜ ನರಶೆಟ್ಟಿ, ಮಲ್ಲಮ್ಮ ನಾರಾಯಣರಾವ್, ಶಿವಶರಣಪ್ಪ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಶೀಲಾ ಪಾಟೀಲ ಗಾದಗಿ, ಮೆನಕಾ ಪಾಟೀಲ, ಶಾಂತಾಬಾಯಿ ಬಿರಾದಾರ ಹಾರೂರಗೇರಿ, ಆರ್.ಜಿ.ಶೆಟಗಾರ್, ವೀರಣ್ಣ ಕೊರ್ಲಳ್ಳಿ, ಅನಿಲ ಪಾಟೀಲ, ವೀರಣ್ಣ ಮೋರಖಂಡಿ, ಬಸವಕುಮಾರ ಕಟನಳ್ಳಿ, ಅಕ್ಕಮಹಾದೇವಿಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT