ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ವಿರುದ್ಧ ಧ್ವನಿ ಎತ್ತಿದವರು ಕನಕದಾಸರು: ಸಚಿವ ಈಶ್ವರ ಬಿ. ಖಂಡ್ರೆ

Published 30 ನವೆಂಬರ್ 2023, 16:14 IST
Last Updated 30 ನವೆಂಬರ್ 2023, 16:14 IST
ಅಕ್ಷರ ಗಾತ್ರ

ಬೀದರ್‌: ಕನಕದಾಸರ ಜಯಂತಿಯನ್ನು ನಗರದಲ್ಲಿ ಗುರುವಾರ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. ಪೌರಾಡಳಿತ ಸಚಿವ ರಹೀಂ ಖಾನ್‌ ಉದ್ಘಾಟಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ ಮಲ್ಕಾಪುರೆ, ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌., ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌, ಮುಖಂಡರಾದ ಈಶ್ವರ ಸಿಂಗ್‌ ಠಾಕೂರ, ಮಲ್ಲಿಕಾರ್ಜುನ, ಅಶೋಕ ಇತರರಿದ್ದರು. ನಂತರ ಬೊಮ್ಮಗೊಂಡೇಶ್ವರ ವೃತ್ತಕ್ಕೆ ತೆರಳಿ ಪೂಜೆ ನೆರವೇರಿಸಿದರು. 

ಅನಂತರ ಪ್ರಮುಖ ಮಾರ್ಗಗಳ ಮೂಲಕ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದ ವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ,  ರಹೀಂ ಖಾನ್‌, ಡಾ. ಶೈಲೇಂದ್ರ ಬೆಲ್ದಾಳೆ, ರಘುನಾಥರಾವ ಮಲ್ಕಾಪುರೆ, ಬಂಡೆಪ್ಪ ಕಾಶೆಂಪುರ್‌ ಮತ್ತಿತರರು ಡಿ.ಜೆ. ಶಬ್ದಕ್ಕೆ ಹೆಜ್ಜೆ ಹಾಕಿದರು. ಡೊಳ್ಳು ಬಾರಿಸಿ ಗಮನ ಸೆಳೆದರು.

ರಂಗಮಂದಿರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ ಬಿ. ಖಂಡ್ರೆ, ಜಾತಿ ಪದ್ಧತಿಯ ವಿರುದ್ಧ ಧ್ವನಿ ಎತ್ತಿದವರು ಕನಕದಾಸರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಬಲ್ಲೀರಾ? ಎಂದು ಪ್ರಶ್ನಿಸಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೇಷ್ಠ ಸಮಾಜ ಸುಧಾರಕರು ಎಂದು ವರ್ಣಿಸಿದರು.

ಬುದ್ಧ, ಬಸವ, ಅಂಬೇಡ್ಕರ್‌, ಕನಕದಾಸ ಸೇರಿದಂತೆ ಇತರೆ ಮಹಾ ಪುರುಷರ ಜಯಂತಿಗಳನ್ನು ಆಚರಿಸಿ ಸ್ಮರಿಸಿದರೆ ಸಾಲದು ಅವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನಕದಾಸರು, ಪುರಂದರದಾಸರ ಸಮಕಾಲೀನರು. ಕಾಗಿನೆಲೆ ಆದಿಕೇಶವನ ಪರಮ ಭಕ್ತರಾಗಿದ್ದರು. ನಳ ಚರಿತ, ಮೋಹನ ತರಂಗಿಣಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು. ಎಲ್ಲರೂ ಸಮಾನರು ಎಂದು ಹೇಳಿದ್ದರು ಎಂದು ನೆನಪಿಸಿದರು.

ಕನಕದಾಸರ ಭಕ್ತಿಯಲ್ಲಿ ದೊಡ್ಡ ಶಕ್ತಿ ಇತ್ತು. ಅವರ ಭಕ್ತಿಗೆ ಮೆಚ್ಚಿ ದೇವರು ತಿರುಗಿ ದರ್ಶನ ನೀಡಿದ್ದನು. ಗೊಂಡ, ಕುರುಬ ಹಾಗೂ ಹಾಲುಮತ ಸಮಾಜದ ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಇಟ್ಟವರಿಗೆ ಅವರು ಎಂದು ಕೈ ಬಿಟ್ಟಿಲ್ಲ. ನಮ್ಮಲ್ಲಿರುವ ಇತರೆ ಸಣ್ಣ-ಸಣ್ಣ ಜಾತಿಗಳಿಗೂ ಸಾಮಾಜಿಕ ನ್ಯಾಯ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಚಿವ ರಹೀಂ ಖಾನ್‌ ಮಾತನಾಡಿ, ಕನಕದಾಸರು ಎಲ್ಲಾ ಸಮಾಜದ ಜನರಿಗೆ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ನಮ್ಮ ಸರ್ಕಾರ ಎಲ್ಲಾ ಬಡವರ ಕನಸು ನನಸು ಮಾಡಿದೆ ಎಂದು ಹೇಳಿದರು.

ರಘುನಾಥರಾವ್ ಮಲ್ಕಾಪೂರೆ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ಮಾಲೀಕರು, ಜನಪ್ರತಿನಿಧಿಗಳು ಅವರ ಸೇವಕರು. 12ನೇ ಶತಮಾನದಲ್ಲಿ ‌ಬಸವಣ್ಣನವರು ಸಾಮಾಜಿಕ ಸಮಾನತೆ ಮತ್ತು ದಾಸೋಹದ ಬಗ್ಗೆ ಹೇಳಿದ್ದನ್ನು ಕನಕದಾಸರು 14ನೇ ಶತಮಾನದಲ್ಲಿ ದಾಸ ಸಾಹಿತ್ಯದ ಮೂಲಕ ಹೇಳಿದರು ಎಂದರು.

 ಕನಕದಾಸರ ಕುರಿತು ಸಾಹಿತಿ ಸಂಜೀವಕುಮಾರ ಅತಿವಾಳೆ‌ ವಿಶೇಷ ಉಪನ್ಯಾಸ ನೀಡಿದರು. ದಾಸ ಶ್ರೇಷ್ಠ ಭಕ್ತ ಕನಕದಾಸರ ಜೀವನ- ಸಂದೇಶ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಕಾಳಿದಾಸ ಮತ್ತು ಗೊಂಡ ಯುವಕ ಸಂಘದವರು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಅಮೃತರಾವ ಚಿಮಕೋಡೆ, ಪಂಡಿತರಾವ್ ಚಿದ್ರಿ, ಬಸವರಾಜ ಹೆಡೆ, ಬಸವರಾಜ ಮಾಳಗೆ, ಮಲ್ಲಿಕಾರ್ಜುನ ‌ಬಿರಾದಾರ, ಸಂತೋಷ, ಭಾರತಿಬಾಯಿ ಶೇರಿಕಾರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT