ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ; ಆಶಯ ಸಾಕಾರವಾಗಲಿ

19ನೇ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಸುಕನ್ಯಾ ಮಾರುತಿ ಅಭಿಮತ
Last Updated 21 ಮಾರ್ಚ್ 2022, 4:47 IST
ಅಕ್ಷರ ಗಾತ್ರ

ಬಸವಕಲ್ಯಾಣ: `ಕಲ್ಯಾಣ ಮಾಡುವುದು ಕೈಲಾಗದ್ದಕ್ಕೆ ಕಲ್ಯಾಣ ಕರ್ನಾಟಕ ಹೆಸರಿಟ್ಟರು. ಬರೀ ಹೆಸರು ಬದಲಾಯಿಸಿದರೆ ಆಗದು, ಈ ಭಾಗ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಆಗಬೇಕು. ಸಾಂಸ್ಕೃತಿಕವಾಗಿ ಸಂಪನ್ನಗೊಳ್ಳಬೇಕು’ ಎಂದು ಹಿರಿಯ ಸಾಹಿತಿ ಸುಕನ್ಯಾ ಮಾರುತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಾರಕೂಡದಲ್ಲಿ ಭಾನುವಾರ ನಡೆದ 19ನೇ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

`ಬರೆಯಲು ಬಾರದಿದ್ದರೂ ಕೃತಿಚೌರ್ಯ ಮಾಡಿ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕ ಪ್ರಾಧಿಕಾರ ಇಲ್ಲವೇ ಗ್ರಂಥಾಲಯಕ್ಕೆ ಮಾರಾಟ ಮಾಡಿ ಹಣ ಗಳಿಸುವ ದಂಧೆ ಆರಂಭವಾಗಿದೆ. ಇಂಥ ಪ್ರವೃತ್ತಿ ಸಲ್ಲದು. ಇದಕ್ಕೆ ಕಡಿವಾಣ ಅಗತ್ಯವಾಗಿದೆ. ಸ್ವಂತ ಕೃತಿಗಳನ್ನು ರಚಿಸುವುದಕ್ಕೆ ಆದ್ಯತೆ ನೀಡಬೇಕು. ಇಂಥ ಸಮ್ಮೇಳನಗಳಲ್ಲಿ ಮಹಿಳೆಯರ ಹಾಗೂ ದಮನಿತರ ಸಮಸ್ಯೆ-ಸವಾಲುಗಳ ಬಗ್ಗೆಯೂ ಚಿಂತನೆ ನಡೆಯಬೇಕು' ಎಂದರು.

ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ, `ಜಾನಪದ ಸಾಹಿತ್ಯ ಮನಸ್ಸನ್ನು ಅರಳಿಸುತ್ತದೆ. ಹಾರಕೂಡ ಸುತ್ತಲಿನ ಗ್ರಾಮಗಳಲ್ಲಿ ತತ್ವಪದಕಾರರು ಹಾಗೂ ಜಾನಪದ ಕವಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ' ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, `ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನವಿದೆ. ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಗಡಿ ಭಾಗದಲ್ಲಿ ಕನ್ನಡದ ಕೆಲಸ ಇನ್ನೂ ಹೆಚ್ಚುಹೆಚ್ಚಾಗಿ ನಡೆಯಬೇಕು. ರಚನಾತ್ಮಕ ಕಾರ್ಯ ಕೈಗೊಳ್ಳಬೇಕು' ಎಂದರು.

ಕನ್ನಡಕ್ಕಾಗಿ ಕೈ ಎತ್ತು ಎಂದು ಕುಣಿದರೆ ಸಾಲದು: ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಶಾಸಕ ಶರಣು ಸಲಗರ ಮಾತನಾಡಿ, `ಕನ್ನಡಕ್ಕಾಗಿ ಕೈ ಎತ್ತು ಎಂದು ಕುಣಿದರೆ ಕನ್ನಡದ ಉದ್ಧಾರ ಆಗುವುದಿಲ್ಲ. ನಡೆ ನುಡಿ ಒಂದಾಗಿಸಬೇಕು. ಕಾಳಜಿ ಹಾಗೂ ಸಮರ್ಪಣಾ ಭಾವದಿಂದ ಸತತವಾಗಿ ಶ್ರಮಿಸುವುದು ಅತ್ಯಗತ್ಯವಾಗಿದೆ’ ಎಂದರು.

`ನಿಜವಾದ ಸಾಹಿತಿ, ಕಲಾವಿದರನ್ನು ಗುರುತಿಸಬೇಕಾಗಿದೆ. ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರಿಗೆ ಕನ್ನಡ ಬೆಳೆಸಿದ ಕೀರ್ತಿ ಸಲ್ಲುತ್ತದೆ. ಬದುಕಿನಲ್ಲಿ ಪರಿವರ್ತನೆ ತರುವ ಶಕ್ತಿ ನಿಜವಾದ ಸಾಹಿತ್ಯಕ್ಕೆ ಇದೆ’ ಎಂದರು.

ಶಾಸಕ ರಾಜಶೇಖರ ಪಾಟೀಲ ಮಾತನಾಡಿ, `ಬಸವಾದಿ ಶರಣರು ವಚನ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದರು. ಅವರ ತತ್ವದ ಪ್ರಸಾರಕ್ಕಾಗಿ ಬಸವಕಲ್ಯಾಣದಲ್ಲಿ ಸರ್ಕಾರದಿಂದ ನಡೆಯುವ ಬಸವ ಉತ್ಸವ ಮೂರು ವರ್ಷಗಳಿಂದ ನಡೆದಿಲ್ಲ. ಇನ್ನು ಮುಂದಾದರೂ ಉತ್ಸವ ಆಯೋಜಿಸಬೇಕು’ ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ, ಶಿವಕುಮಾರ ಕಟ್ಟೆ, ರೇಣುಕಾ ಮಳ್ಳಿ ಮಾತನಾಡಿದರು.

ಕೃತಿಗಳ ಬಿಡುಗಡೆ: ಸಾಹಿತಿ ಮಚೇಂದ್ರ ಅಣಕಲ್ ಬರೆದ `ಬೀದರ್ ಜಿಲ್ಲೆಯ ಸಾಹಿತಿಗಳು' ಗ್ರಂಥ ಹಾಗೂ ಇತರೆ ಕೃತಿಗಳನ್ನು
ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT