ಸೋಮವಾರ, ನವೆಂಬರ್ 18, 2019
24 °C
ಚಿಟಗುಪ್ಪ: ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಅಭಿಮತ

ವರ್ಗಾವಣೆಯೇ ಬಿಜೆಪಿಯ ಸಾಧನೆ

Published:
Updated:
Prajavani

ಚಿಟಗುಪ್ಪ: ‘ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಶ್ರೀಮಂತವಾಗಿದೆ’ ಎಂದು ಶಾಸಕ ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ತಹಶೀಲ್‌ ಕಚೇರಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಪಟ್ಟಣ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ ಒಂದು ವರ್ಷ ಕಳೆದಿದೆ. ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳು ಆರಂಭವಾಗಬೇಕು. ಈ ಕೆಲಸ ಸರ್ಕಾರ ಮಾಡಬೇಕು. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಬೇಕಾದ ಕೆಲಸ ಮಾಡಲಾಗಿದೆ ಇಂದಿನ ಸರ್ಕಾರ ಉಳಿದ ಕೆಲಸ ಮಾಡಬೇಕಾಗಿದೆ’ ಎಂದರು.

‘ತಾಲ್ಲೂಕಿನ ಪ್ರಗತಿ ಕುರಿತು ಸ್ಥಳೀಯರು ಆರೋಪ ಮಾಡಿದ್ದು ಪತ್ರಿಕೆಗಳಲ್ಲಿ ಬಂದಿದೆ. ಮಾಧ್ಯಮದವರು ಎಲ್ಲವನ್ನೂ ಗಮನಿಸಿ ಸುದ್ದಿ ಮಾಡಬೇಕು. ಹುಮನಾಬಾದ್, ಚಿಟಗುಪ್ಪ ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳಿಗೆ ಹೊಸ ಅಧಿಕಾರಿಗಳು ಬರುತ್ತಿದ್ದಾರೆ. ಯಾರು ಯಾವಾಗ ಬರುತ್ತಿದ್ದಾರೆ ಎಂಬುವುದೆ ನನಗೆ ತಿಳಿಯುತ್ತಿಲ್ಲ, ವರ್ಗಾವಣೆ ಸರ್ಕಾರದ ಸಾಧನೆ ಎಂಬಂತಾಗಿದೆ. ಯಾವ ಅಧಿಕಾರಿ ಬಂದರೂ ಶಾಸಕರ ಅಡಿಯಲ್ಲಿಯೇ ಕೆಲಸ ಮಾಡಬೇಕಾಗಿದೆ’ ಎಂದರು.

ವಿರೋಧ ಪಕ್ಷದ ಶಾಸಕನಾದ ನನಗೂ ಮುಖ್ಯಮಂತ್ರಿಗಳು ಪರಿಚಯದವರಿದ್ದಾರೆ. ಎಲ್ಲವೂ ಕಾದುನೋಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾನೆ. ಬಹಿರಂಗವಾಗಿ ಚರ್ಚೆಮಾಡಲು ಸಿದ್ಧ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಶ್ರಮಿಸಬೇಕು’ ಎಂದು ನುಡಿದರು.

ತಹಶೀಲ್ದಾರ್ ಜಿಯಾವುಲ್ಲಾ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್ ಡಾಕುಳಗಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಪುರಸಭೆ ಸದಸ್ಯರಾದ ಮುಜಾಫರ ಪಟೇಲ್, ಕ್ರಿಸ್ತಾನಂದ್, ಭಿಮಣ್ಣ ಶಾಖಾ, ದಿಲೀಪ ಕುಮಾರ ಬಗ್ದಲಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಮಂತ ಪಾಟೀಲ, ಹುಮನಾಬಾದ್ ತಹಶೀಲ್ದಾರ ನಾಗಯ್ಯ ಸ್ವಾಮಿ ಇದ್ದರು. ಅಶೋಕ ಚನ್ನಕೋಟೆ ನಿರೂಪಿಸಿದರು.

ಪುರಸಭೆ: ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಜಿಯಾವುಲ್ಲಾ ಧ್ವಜಾರೋಹಣ ನೆರವೇರಿಸಿದರು.
ಸಿಬ್ಬಂದಿ ನರಸಿಂಹಲು, ಸಿಇಒ ಪೂಜಾ, ಉಮೇಶ್ ಗುಡ್ಡದ, ಸಂತೋಷ ಬಿರಾದಾರ, ಚಿದಾನಂದ ಪತ್ರಿ, ನರೇಶ ಘನಾತೆ, ಕಿರಿಯ ಆರೋಗ್ಯ ನಿರೀಕ್ಷಕ ರವಿ ಸ್ವಾಮಿ, ಕವಿತಾ, ದಿಲೀಪ್, ಪುರಸಭೆ ಸದಸ್ಯರಾದ ದಿಲೀಪ ಕುಮಾರ ಬಗ್ದಲಕರ್, ಡಾ. ಅಹ್ಮದ್ ಪಟೇಲ, ಕಲ್ಲಪ್ಪ ಜಾಬಾ, ಖಾದರ್ ಸಾಬ್ ಹಾಗೂ ಶಾಮ ಭೂತಾಳಿ ಇದ್ದರು.

ಪ್ರತಿಕ್ರಿಯಿಸಿ (+)