ಕಾರಂಜಾ ಸಂತ್ರಸ್ತರಿಗೆ ನೆರವು ಕಲ್ಪಿಸಲು ಆಗ್ರಹ

7
ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಕಾರಂಜಾ ಸಂತ್ರಸ್ತರಿಗೆ ನೆರವು ಕಲ್ಪಿಸಲು ಆಗ್ರಹ

Published:
Updated:
Deccan Herald

ಬೀದರ್‌: ‘ಕಾರಂಜಾ ಯೋಜನೆಯಲ್ಲಿ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನೆರವು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೀದರ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಗಸ್ಟ್‌ 9ರಿಂದ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ತಿಳಿಸಿದರು.

‘40 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ ಹೋಗಿರುವ ರಾಜಕೀಯ ಮುಖಂಡರು ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಆಲಿಸಿಲ್ಲ. ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಒಟ್ಟು 27 ಗ್ರಾಮಗಳ ನಿವಾಸಿಗಳು ಧರಣಿ ನಡೆಸಲಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಕಾರಂಜಾ ಯೋಜನೆಯಲ್ಲಿ 28 ಗ್ರಾಮಗಳು ಮುಳುಗಡೆಯಾಗಿವೆ. ಸಂತ್ರಸ್ತರಿಗೆ ಪ್ರತಿ ಎಕರೆಗೆ ₹2,900 ರಿಂದ ₹ 6,000 ಪರಿಹಾರ ನೀಡಲಾಗಿದೆ. ನ್ಯಾಯಾಲಯದ ಮೊರೆ ಹೋದವರಿಗೆ ಹೆಚ್ಚು ಪರಿಹಾರ ದೊರೆತಿದೆ. ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾದವರಿಗೆ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಬದುಕು ದುಸ್ತರವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತನ ನೈಜಸ್ಥಿತಿ ಅರಿತು ಹೆಚ್ಚಿನ ಪರಿಹಾರ ಕೊಡಬೇಕು. ಕೃಷಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ಎಕರೆಗೆ ₹ 10 ಲಕ್ಷ ಪರಿಹಾರ ಕೊಡಬೇಕು. ಕಾರಂಜಾ ಸಂತ್ರಸ್ತರ ಬೇಡಿಕೆಯನ್ನು ಒಂದೇ ಬಾರಿಗೆ ಸಮಾಲೋಚನೆ ನಡೆಸಿ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ಕುಟುಂಬಕ್ಕೆ ಜೀವನ ನಿರ್ವಹಣೆಗೆ ಮಾಸಿಕ ₹ ₹50 ಸಾವಿರ ಪರಿಹಾರ, ಪ್ರತಿ ವ್ಯಕ್ತಿಗೆ ₹ 10 ಸಾವಿರ ಪರಿಹಾರ, ಸಂತ್ರಸ್ತರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುವಂತಾಗಲು ಸ್ಮಾರ್ಟ್‌ ಕಾರ್ಡ್‌ ವಿತರಿಸಬೇಕು. ಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು’ ಎಂದು ಮನವಿ ಮಾಡಿದರು.

‘ಅಂತ್ಯೋದಯ ಪಡಿತರ ಚೀಟಿ, ಉಚಿತ ವಿದ್ಯುತ್, ಮಕ್ಕಳಿಗೆ ಉಚಿತ ಶಿಕ್ಷಣ, ಕಾರಂಜಾ ಕಾಮಗಾರಿಗೆ ಪ್ರತಿ ವರ್ಷ ಬಿಡುಗಡೆ ಮಾಡುತ್ತಿರುವ ಹಣವನ್ನು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ಎಕರೆಗೆ ₹ 25 ಲಕ್ಷ ಪರಿಹಾರ ಧನ ಕೊಡಬೇಕು’ ಎಂದು ಆಗ್ರಹಿಸಿದರು.

‘ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಂಜಾ ಸಂತ್ರಸ್ತರ ದುಸ್ಥಿತಿಗೆ ಕಾರಣವಾಗಿದೆ. ರೈತರ ಸಹನೆಯ ಕಟ್ಟೆ ಒಡೆಯುವ ಹಂತ ತಲುಪಿದೆ. ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿರುವ ಕಾರಣ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಜಿಲಾನಿ ಪಟೇಲ ಹಿಲಾಲಪುರ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ, ಶಿವಶರಣಪ್ಪ ಪಾಟೀಲ, ದತ್ತಾತ್ರಿರಾವ್‌ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ್. ಬಸವರಾಜ ಮೂಲಗಿ ಇದ್ದರು.

ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾದ ಗ್ರಾಮಗಳು
ಕಮಲಾಪುರ, ಔರಾದ್‌ (ಎಸ್), ಖೇಣಿ ರಂಜೋಳ, ಹಿಲಾಲಪುರ, ಮರಖಲ್, ಬಾವಗಿ, ಬಂಬಳಗಿ, ರೇಕುಳಗಿ, ಹೊಚಕನಳ್ಳಿ, ಅತಿವಾಳ, ನಿಡವಂಚಾ, ಹಜ್ಜರಗಿ, ಬ್ಯಾಲಹಳ್ಳಿ, ಕಟ್ಟಿ ತೂಗಾಂವ, ಕಮಲಪುರ, ಸಿಂದಬಂದಗಿ, ಡಾಕುಳಗಿ, ನೆಲವಾಳ, ಸಂಗೋಳಗಿ, ಭೈರನಳ್ಳಿ, ಬಗದಲ್, ಬಾಪುರ, ಸಿರ್ಸಿ(ಎ), ಮನ್ನಾಎಖ್ಖೇಳಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !