ಶನಿವಾರ, ಜೂನ್ 25, 2022
28 °C
ಸೆಪ್ಟೆಂಬರ್ ಒಳಗೆ ಪ್ರತಿ ಪ್ರಜೆಗೂ ಲಸಿಕೆಗೆ ಆಗ್ರಹ

ಬೀದರ್: ಕೋವಿಡ್ ಲಸಿಕೆಗಾಗಿ ಕರವೇ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯದ ಪ್ರತಿ ಪ್ರಜೆಗೂ ಸೆಪ್ಟೆಂಬರ್ ಒಳಗೆ ಎರಡೂ ಡೋಸ್ ಕೋವಿಡ್ ಲಸಿಕೆ ನೀಡಿ, ಕರ್ನಾಟಕವನ್ನು ಕೋವಿಡ್ ಮೂರನೇ ಅಲೆಯಿಂದ ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಕಾರ್ಯಕರ್ತರು ಜಿಲ್ಲೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ನೇತೃತ್ವದಲ್ಲಿ ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಘೋಷಣೆಗಳನ್ನು ಕೂಗಿದರು.

‘ಬೇಗನೆ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ', ‘ಚುನಾವಣೆ ಬೂತ್‍ಗಳ ಹಾಗೆ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಿ, ಜನಸಾಮಾನ್ಯರಿಗೆ ಕಾಯಿಸದೆ ಲಸಿಕೆ ಕೊಡಿ', ‘ಲಸಿಕೆ ವಿತರಣೆಯಲ್ಲೂ ಹಣ ಗಳಿಸುವ ದಂಧೆ ಬೇಕೆ? ಜೀವ ರಕ್ಷಕ ತಡೆಮದ್ದಿಗೂ ಕಾಳಸಂತೆ ವ್ಯವಹಾರ ಬೇಕೆ?', ‘ಮೊದಲ ಅಲೆಯಲ್ಲಿ 20 ಲಕ್ಷ ಕೋಟಿಯ ಸುಳ್ಳು ಘೋಷಣೆ, ಎರಡನೇ ಅಲೆಯಲ್ಲಿ ಲಭ್ಯವೇ ಇಲ್ಲದ ಲಸಿಕೆ ಘೋಷಣೆ ಹೇಗೆ ನಂಬುವುದು ನಿಮ್ಮನ್ನು', ‘ನಿಮಗೆ ಕರ್ನಾಟಕದಿಂದ ಲಕ್ಷ ಕೋಟಿ ತೆರಿಗೆ ಬೇಕು, ಕನ್ನಡಿಗರಿಗೆ ಲಸಿಕೆ ಕೊಡಲು ನಿಮ್ಮಿಂದೇಕೆ ಆಗದು’, ‘ಮತ ಭಿಕ್ಷೆಗಾಗಿ ಮನೆ ಮನೆಗೆ ಹತ್ತಾರು ಬಾರಿ ಬರುವವರಿಗೆ ಲಸಿಕೆ ಕೊಡಲು ಮನೆ ಮನೆಗೆ ಬರಲು ಸಾಧ್ಯವಿಲ್ಲವೇ?', ‘ಕರ್ನಾಟಕದಲ್ಲಿ ಹಣ ತೆತ್ತರೂ ಸಿಗದ ಲಸಿಕೆ, ಗುಜರಾತಿನಲ್ಲಿ ಉಚಿತವಾಗಿ ಸಿಗುತ್ತಿರುವುದಾದರೂ ಹೇಗೆ?' ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಜನ್ಮದಿನದಂದು ಜನಸಾಮಾನ್ಯರ ಜೀವ ರಕ್ಷಣೆಯ ಹಕ್ಕೊತ್ತಾಯಗಳನ್ನು ಇಟ್ಟುಕೊಂಡು ಪ್ರತಿಭಟನಾ ದಿನ ಆಚರಿಸಲಾಗಿದೆ ಎಂದು ಸೋಮನಾಥ ಮುಧೋಳ ಹೇಳಿದರು.

ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರವೇ ರಾಜ್ಯದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ವಾಸ್ತವದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಮೂರನೇ ಅಲೆ ತಡೆದುಕೊಳ್ಳುವ ಶಕ್ತಿ ನಮಗಿಲ್ಲ. ಹೀಗಾಗಿ ಲಸಿಕೆ ಕೊಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.

ತಾರತಮ್ಯ ಮಾಡದೆ ಕಾಲಮಿತಿಯೊಳಗೆ ಮನೆ ಮನೆಗೆ ತೆರಳಿ ಎಲ್ಲರಿಗೂ ಲಸಿಕೆ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಮಹೇಶ ಕಾಪಸೆ, ಅನಿಲ್ ವಾಡೆ, ಪ್ರದೀಪ್ ಬಿರಾದಾರ, ಶಿವಕಾಂತ ಖಂಡೆ, ಮಹೇಶ ವಾಡೆ, ರಾಜಕುಮಾರ ಹೊಡಗಿ, ಮಹೇಶ ಗುಡ್ಡಾ, ಚಂದು ಟಾಟಾ, ಪರಮೇಶ್ವರ ಮೈಲಾರೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು