ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ, ರಾಜ್ಯ ಸರ್ಕಾರದಿಂದ ಈಡಿಗರ ಕಡೆಗಣನೆ: ಪ್ರಣವಾನಂದ ಸ್ವಾಮೀಜಿ ಅಸಮಾಧಾನ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ
Published : 20 ಆಗಸ್ಟ್ 2024, 14:50 IST
Last Updated : 20 ಆಗಸ್ಟ್ 2024, 14:50 IST
ಫಾಲೋ ಮಾಡಿ
Comments

ಬೀದರ್‌: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಸತತವಾಗಿ ಈಡಿಗ ಸಮಾಜದವರನ್ನು ಕಡೆಗಣಿಸುತ್ತಿವೆ. ಸಮುದಾಯದ ಮುಖಂಡರುಗಳನ್ನು ಸಹ ಕಡೆಗಣಿಸಲಾಗುತ್ತಿದೆ’ ಎಂದು ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈಡಿಗ ಸಮುದಾಯದ ಮುಖಂಡರನ್ನು ಹೇಗೆ ಕಡೆಗಣಿಸಲಾಗುತ್ತಿದೆ ಎನ್ನುವುದಕ್ಕೆ ಬಿ.ಕೆ. ಹರಿಪ್ರಸಾದ್‌ ಅವರೇ ಉತ್ತಮ ಉದಾಹರಣೆ. ದೇಶ ಕಂಡ ಪ್ರಬುದ್ಧ ರಾಜಕಾರಣಿ. ನಾಲ್ಕು ದಶಕಗಳಿಂದ ಅವರು ರಾಜಕಾರಣದಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಅವರನ್ನು ಮಂತ್ರಿ ಮಾಡಬೇಕಿತ್ತು. ಆದರೆ, ಮಾಡಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಕೂಡ ಇದಕ್ಕೆ ಹೊರತಾಗಿಲ್ಲ. ಕೇಂದ್ರ ಸಂಪುಟದಲ್ಲಿ ಮೇಲ್ಜಾತಿಯವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಅವರಂತಹ ಅನುಭವಿ ಹಾಗೂ ಹಿಂದುಳಿದ ವರ್ಗದವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದು ಆರೋಪಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿತಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಸ್ಥಾಪಿಸಲು ಐಆರ್‌ಬಿ ಕಂಪನಿಗೆ ಅನುಮತಿ ಕೊಟ್ಟು ಅವರಿಂದ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಅದರಿಂದ ಆಗುವ ಸಾಧಕ ಬಾಧಕಗಳನ್ನು ನೋಡಿಲ್ಲ. ಗುಡ್ಡ ಕುಸಿತದಿಂದ ಮೃತಪಟ್ಟವರಲ್ಲಿ ಏಳು ಜನ ಈಡಿಗರು, ಒಬ್ಬ ಹಾಲಕ್ಕಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಿದ್ದಾನೆ. ಇನ್ನೂ ಮೂವರ ಮೃತದೇಹಗಳು ಸಿಕ್ಕಿಲ್ಲ. ಮೃತದೇಹ ಸಿಗದ ಕುಟುಂಬದವರಿಗೆ ಪರಿಹಾರ ಕೊಟ್ಟಿಲ್ಲ. ಇತರೆ ಮೃತ ಕುಟುಂಬದವರಿಗೆ ರಾಜ್ಯ ಸರ್ಕಾರ ತಲಾ ₹5 ಲಕ್ಷ ಪರಿಹಾರ ಕೊಟ್ಟಿದೆ. ಕೇಂದ್ರ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ. ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸುತ್ತಿರುವ ಐಆರ್‌ಬಿ ಕಂಪನಿ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ದೊಡ್ಡ ಸಾಕ್ಷಿ ಎಂದು ಕಿಡಿಕಾರಿದರು.

ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಅಪಾರ ಹಾನಿಯುಂಟಾಗಿದ್ದು, ರಾಜ್ಯ ಸರ್ಕಾರ ನೂರು ಮನೆಗಳನ್ನು ಕಟ್ಟಿಸಿಕೊಡುವುದಾಗಿ ಹೇಳಿದೆ. ಆ ಕ್ಷೇತ್ರವನ್ನು ರಾಹುಲ್‌ ಗಾಂಧಿಯವರು ಪ್ರತಿನಿಧಿಸುತ್ತಿರುವ ಕಾರಣ ರಾಜ್ಯ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಆದರೆ, ಕನ್ನಡಿಗರ ಜೀವಕ್ಕೆ ಬೆಲೆಯಿಲ್ಲವೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೌರಾಡಳಿತ ಸಚಿವ ರಹೀಂ ಖಾನ್‌, ನಾರಾಯಣ ಗುರುಗಳು ಸಾಮಾಜಿಕ ಸಮಾನತೆಗಾಗಿ ಕೇರಳದಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿದ್ದರು.

ನಾರಾಯಣಗುರು ಸೇರಿದಂತೆ ಇತರೆ ಮಹಾತ್ಮರ ಜಯಂತಿಗಳನ್ನು ಎಲ್ಲ ಸಮುದಾಯದವರು ಸೇರಿ ಆಚರಿಸಬೇಕು. ಅವರ ತತ್ವ, ಸಿದ್ದಾಂತಗಳು ಎಲ್ಲ ಸಮುದಾಯಗಳಿಗೆ ಒಳಿತನ್ನೆ ಬಯಸುತ್ತವೆ ಎಂದರು.

ನಾವು ಉಸಿರಾಡುವ ಗಾಳಿ, ಇರುವ ಭೂಮಿ ಒಂದೇ ಇದೆ. ಅವು ಎಂದಿಗೂ ಭೇದಭಾವ ಮಾಡಿಲ್ಲ. ಪ್ರಾಣಿಪಕ್ಷಿಗಳು ಇದಕ್ಕೆ ಹೊರತಾಗಿಲ್ಲ. ಮನುಷ್ಯರಾದವರು ನಾವೇಕೇ ಭೇದ ಭಾವ ಮಾಡಬೇಕು ಎಂದು ಕೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಶಿರೂರು ಗುಡ್ಡ ಕುಸಿತದಲ್ಲಿ ಮೃತರಾದವರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಚಾಲನೆ ಕೊಟ್ಟು, ವೈಯಕ್ತಿಕವಾಗಿ ₹10 ಸಾವಿರ ನೀಡಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾರಾಯಣ ಗುರು ಹಾಗೂ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್, ತಹಶೀಲ್ದಾರ್‌ ಮೊಹಮ್ಮದ್‌ ಜಿಯಾವುದ್ದೀನ್‌, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಡಾ. ರಾಜಶೇಖರ ಸೇಡಂಕರ್, ಕಾರ್ಯದರ್ಶಿ ಸುಭಾಷ ಚೌದ್ರಿ, ತಾಲ್ಲೂಕು ಅಧ್ಯಕ್ಷ ಸಂಗಯ್ಯ ಸುಲ್ತಾನಪುರ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಮಾಳಗೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ವಿವಿಧ ಭಾಗದ ಈಡಿಗ ಸಮಾಜದವರು ಪಾಲ್ಗೊಂಡಿದ್ದರು.

‘ಅನಿಷ್ಠ ಆಚರಣೆಗಳ ವಿರುದ್ಧ ದೊಡ್ಡ ಕ್ರಾಂತಿ’

ಕಲಬುರಗಿ ಆಕಾಶವಾಣಿ ಕೇಂದ್ರದ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ ಮಾತನಾಡಿ, ಅನಿಷ್ಠ ಆಚರಣೆಗಳ ವಿರುದ್ಧ ದೊಡ್ಡ ಕ್ರಾಂತಿ ಮಾಡಿ, ಸಮಾಜದಲ್ಲಿ ಬದಲಾವಣೆ ತಂದವರು ಬ್ರಹ್ಮಶ್ರೀ ನಾರಾಯಣಗುರುಗಳು. ಕೇರಳದಲ್ಲಿ 19 ನೇ ಶತಮಾನದಲ್ಲಿ ದಲಿತರು, ಅಸ್ಪ್ಯಶರು ಹಾಗೂ ಶೋಷಿತ ಜನರಿಗೆ ದೇವಸ್ಥಾನಗಳಲ್ಲಿ ಪ್ರವೇಶ ಇರಲಿಲ್ಲ. ಕೆಳವರ್ಗದ ಮಹಿಳೆಯರ ಸ್ತನಗಳ ಗಾತ್ರವನ್ನು ಆಧರಿಸಿ ತೆರಿಗೆ ವಿಧಿಸುತ್ತಿದ್ದರು. ಇಂತಹ ಅನಿಷ್ಠಗಳ ನಿರ್ಮೂಲನೆಗೆ ದೊಡ್ಡ ಹೋರಾಟ ನಡೆಸಿದರು ಎಂದು ನೆನೆದರು.

ದೇವಾಲಯಗಳಲ್ಲಿ ಗಂಟೆಗಳು ಮೊಳಗಿದರೆ ಸಾಲದು ಶಾಲೆಗಳಲ್ಲಿ ಗಂಟೆಗಳ ಶಬ್ದ ಕೇಳಬೇಕು ಎಂದು ದೇವಾಲಯಗಳ ಪಕ್ಕ ಶಾಲೆಗಳನ್ನು ಸ್ಥಾಪಿಸಿ ಶೋಷಿತ ಜನರಿಗೆ ಶಿಕ್ಷಣ ನೀಡಿದರು. ಮನುಷ್ಯ ಜಾತಿ ಒಂದೇ. ದೇವರು ಒಬ್ಬನೇ ಎಂದು ಹೇಳುವ ಮೂಲಕ ವೈಚಾರಿಕ ಕ್ರಾಂತಿ ಮಾಡಿದ ನಾರಾಯಣಗುರುಗಳು 1924 ರಲ್ಲಿ ಸರ್ವಧರ್ಮ ಸಮ್ಮೇಳನವನ್ನು ನಡೆಸಿದ್ದರು. ಇವರ ಹೆಸರಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT