ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ರಾಜ್ಯಕ್ಕೆ ಕಬ್ಬು ಸಾಗಣೆ ನಿರ್ಬಂಧಕ್ಕೆ ಸಿದ್ಧತೆ: ರೈತರಿಗೆ ಹೆಚ್ಚಿದ ಆತಂಕ

Last Updated 7 ನವೆಂಬರ್ 2019, 10:30 IST
ಅಕ್ಷರ ಗಾತ್ರ

ಬೀದರ್: ರಾಜ್ಯ ಸರ್ಕಾರ ನೆರೆ ರಾಜ್ಯಗಳ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದನ್ನು ನಿರ್ಬಂಧಿಸಲು ಮುಂದಾಗಿರುವುದು ಗಡಿ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ರಾಜ್ಯ ಸರ್ಕಾರ ಕಬ್ಬಿಗೆ ಬೆಲೆ ನಿಗದಿಪಡಿಸಿಲ್ಲ. ಕಬ್ಬಿನ ಬೆಲೆ ನಿಗದಿ ಪಡಿಸುವ ಕಾರ್ಖಾನೆಗಳ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದರೂ ನೆರೆಯ ರಾಜ್ಯದ ಕಾರ್ಖಾನೆಗಳಿಗೆ ಕಬ್ಬು ಸಾಗಿಸದಂತೆ ತಡೆಯುವ ಕುರಿತು ಸಕ್ಕರೆ ನಿರ್ದೇಶನಾಲಯದಿಂದ ಮಾಹಿತಿ ಕೇಳಿದೆ. ನಿರ್ದೇಶನಾಲಯ ಕೆಲ ಜಿಲ್ಲೆಗಳಿಂದ ಮಾಹಿತಿಯನ್ನೂ ತರಿಸಿಕೊಂಡಿದೆ.

ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ ಕಬ್ಬು ಸಾಗಿಸುವುದನ್ನು ನಿರ್ಬಂಧಿಸಿದರೆ ಜಿಲ್ಲೆಯ ರೈತರು ತೊಂದರೆ ಅನುಭವಿಸುವರು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗಿದ್ದು, ಯೋಗ್ಯ ಬೆಲೆ ಸಿಗದಿದ್ದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಉತ್ತಮ ಬೆಲೆ ಕೊಡದಿದ್ದರೆ ಹೆಚ್ಚು ಬೆಲೆ ಕೊಡುವ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಅವಕಾಶ ಮಾಡಿಕೊಡಬೇಕು. ಕಬ್ಬು ಸಾಗಣೆ ನಿರ್ಬಂಧದಂತಹ ಕ್ರಮ ಕೈಗೊಳ್ಳಬಾರದು’ ಎಂದು ರೈತರು ಮನವಿ ಮಾಡಿದ್ದಾರೆ.

‘ಸಕ್ಕರೆ ಸಚಿವ ಸಿ.ಟಿ.ರವಿ ಅವರು ಕಾರ್ಖಾನೆಗಳ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಂತಿದೆ. ಗಡಿ ಜಿಲ್ಲೆ ರೈತರ ಸಮಸ್ಯೆ ಅರಿತುಕೊಳ್ಳದೆ, ರೈತ ಮುಖಂಡರೊಂದಿಗೆ ಚರ್ಚಿಸದೆ, ನೆರೆ ರಾಜ್ಯಗಳಿಗೆ ಕಬ್ಬು ಸಾಗಣೆ ನಿರ್ಬಂಧಿಸುವ ಕುರಿತು ನಿರ್ಣಯ ಕೈಗೊಳ್ಳಲು ಮುಂದಾಗಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

‘ಹಿಂದೆ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ, ಜಗದೀಶ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಅವರು ರೈತ ಮುಖಂಡರ ಸಭೆ ಕರೆದು ಕಬ್ಬು ಬೆಳೆಗಾರರ ಸಮಸ್ಯೆ ಆಲಿಸುತ್ತಿದ್ದರು. ರಾಜ್ಯ ಸರ್ಕಾರ ಈಗ ರೈತರ ಹಿತ ಕಡೆಗಣಿಸಿ ಏಕಪಕ್ಷೀಯ ನಿರ್ಧಾರಕ್ಕೆ ಮುಂದಾಗಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನೆರೆಯ ಮಹಾರಾಷ್ಟ್ರದ ಲಾತೂರು ಜಿಲ್ಲೆಯ ದೇವಣಿ ಸಕ್ಕರೆ ಕಾರ್ಖಾನೆ ಪ್ರತಿ ಟನ್‌ ಕಬ್ಬಿಗೆ ₹ 2,500 ಬೆಲೆ ಪಾವತಿಸಿತ್ತು. ಯಾದಗಿರಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ₹ 2,200 ಕೊಟ್ಟಿತ್ತು. ಜಿಲ್ಲೆಯ ರೈತರಿಗೆ ಪ್ರತಿ ಟನ್‌ ಕಬ್ಬಿಗೆ ₹ 1,900 ಬೆಲೆ ಮಾತ್ರ ಕೊಡಲಾಗಿತ್ತು. ಹೀಗಾಗಿ ರೈತರಲ್ಲಿ ಆರ್ಥಿಕ ಹಾನಿಗೊಳಗಾಗುವ ಭಯ ಆವರಿಸಿದೆ.

‘ಹಿಂದಿನ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 18 ರಿಂದ 20 ಲಕ್ಷ ಟನ್‌ ಕಬ್ಬು ಬೆಳೆಯಲಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ 10 ರಿಂದ 12 ಲಕ್ಷ ಟನ್‌ ಕಬ್ಬು ಮಾತ್ರ ಇದೆ. ನೀರಿನ ಕೊರತೆಯಿಂದ ಕೆಲವರು ಕಬ್ಬು ಬೆಳೆದಿಲ್ಲ. ನೈಸರ್ಗಿಕ ಕಾರಣಗಳಿಂದ ಈ ಬಾರಿ ಇಳುವರಿ ಕೂಡ ಕುಂಠಿತವಾಗಿದೆ. ರೈತರು ಕಬ್ಬು ಉತ್ಪಾದನೆಗೆ ಮಾಡಿದ ಖರ್ಚು ಸಹ ಮರಳಿ ಬರುವುದೋ ಇಲ್ಲವೋ’ ಎನ್ನುವ ಚಿಂತೆಯಲ್ಲಿದ್ದಾರೆ.

ಕಬ್ಬಿನ ಇಳುವರಿ ಕಡಿಮೆಯಾದ ಕಾರಣ ಸಕ್ಕರೆ ಕಾರ್ಖಾನೆಗಳ ಬಾಯ್ಲರ್‌ ಪ್ರದೀಪನ ಕಾರ್ಯವೂ ವಿಳಂಬವಾಗಿದೆ. ಒಂದು ವೇಳೆ ಸರ್ಕಾರ ನಿರ್ಬಂಧ ಹೇರಿದರೆ ಹೊರ ರಾಜ್ಯಗಳಿಗೆ ಕಬ್ಬು ಕಳಿಸುವಂತಿಲ್ಲ. ಸ್ಥಳೀಯ ಕಾರ್ಖಾನೆಗಳಿಗೆ ಸಾಗಿಸಿದರೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯೂ ಇಲ್ಲ. ಹೀಗಾಗಿ ರೈತರು ಆತಂಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT